ಆಂಧ್ರಪ್ರದೇಶದ ಪ್ರಖ್ಯಾತ ನಗರವಾದ ತಿರುಪತಿಯ ಹತ್ತಿರವಿರುವ ಪೆನ್ನಾರ್‌ನ ಉಪನದಿಯಾದ ಸ್ವರ್ಣಮುಖಿ ನದಿಯ ದಂಡೆಯ ಮೇಲೆ ಇರುವ ಸುಂದರವಾದ ಪಟ್ಟಣ ಶ್ರೀಕಾಳಹಸ್ತಿ.
ದಕ್ಷಿಣ ಭಾರತದ ಅತಿ ಪುರಾತನ ಶಿವನ ಕ್ಷೇತ್ರಗಳಲ್ಲಿ ಒಂದಾಗಿದೆ. ನದಿಯ ದಂಡೆಯಿಂದ ಬೆಟ್ಟದ ಬುಡದವರೆಗೆ ಮಂದಿರವನ್ನು ಬೃಹತ್ತಾಗಿ ನಿರ್ಮಿಸಲಾಗಿದೆ. ಮಂದಿರವನ್ನು ದಕ್ಷಿಣ ಕೈಲಾಸ ಅಥವಾ ದಕ್ಷಿಣಕಾಶಿ ಎಂತಲೂ ಕರೆಯುತ್ತಾರೆ.
ಅತಿ ಎತ್ತರವಾಗಿರುವ ಮೂರು ಗೋಪುರಗಳು ವಾಸ್ತುಶಾಸ್ತ್ರಕ್ಕೆ ಹೆಸರುವಾಸಿಯಾಗಿವೆ. ಈ ಮಂದಿರವನ್ನು ವಿಜಯನಗರದ ಕೃಷ್ಣದೇವರಾಯ ಅರಸರ ಕಾಲದಲ್ಲಿ ನಿರ್ಮಾಣಗೊಂಡಿತೆಂದು ಹೇಳಲಾಗಿದೆ. ಮಂದಿರದಲ್ಲಿ 100 ಕಂಬಗಳಿಂದ ಪ್ರಸಿದ್ಧವಾದ ಮಂಟಪವನ್ನು ನಿರ್ಮಿಸಲಾಗಿದೆ. ಹಿಂದಿನ ಕಾಲದಿಂದಲೂ ಸಾವಿರಾರು ಸಂಖ್ಯೆಯ ಯಾತ್ರಿಗಳು ಶಿವ ಮಂದಿರಕ್ಕೆ ಭೇಟಿ ನೀಡುತ್ತಿದ್ದರೆನ್ನಲಾಗಿದೆ. ಜಗತ್ತಿನ ಅತಿ ಶ್ರೀಮಂತ ಮಂದಿರವಾದ ತಿರುಪತಿಯ ವೆಂಕಟೇಶ್ವರ ನಗರಕ್ಕೆ ಹತ್ತಿರವಾದ ಶ್ರೀಕಾಳಹಸ್ತಿ ಪ್ರಸಿದ್ದ ಯಾತ್ರಾ ಕ್ಷೇತ್ರವಾಗಿದೆ.
ಶ್ರೀಕಾಳಹಸ್ತಿಯೆಂದು ಏಕೆ ಕರೆಯುತ್ತಾರೆ.: ಶ್ರೀಕಾಳಹಸ್ತಿ ಹೆಸರು ಜೇಡ(ಶ್ರೀ), ಹಾವು(ಕಾಳ) ಮತ್ತು ಆನೆ(ಹಸ್ತಿ)ಗಳು ಭಕ್ತಿಯಿಂದ ಶಿವನನ್ನು ಪೂಜಿಸಿ ಮೂರು ಪ್ರಾಣಿಗಳು ಮುಕ್ತಿ ಪಡೆದ ಸ್ಥಳವಾಗಿದ್ದರಿಂದ ಶ್ರೀಕಾಳಹಸ್ತಿ ಎಂದು ಕರೆಯುತ್ತಾರೆನ್ನಲಾಗಿದೆ. ಹಿಂದಿನಿಂದ ಬಂದಿರುವ ದಂತಕಥೆಯಲ್ಲಿ, ಜೇಡ ಶಿವಲಿಂಗದ ಸುತ್ತಲು ಬಲೆಯನ್ನು ಹೆಣೆದು ಪೂಜಿಸಿದರೇ ಹಾವು ಶಿವಲಿಂಗದ ಮೇಲೆ ರತ್ನ ಖಚಿತ ವಜ್ರವನ್ನು ಇರಿಸಿ ಪೂಜಿಸಿತ್ತು. ಆನೆ ತನ್ನ ಸೊಂಡಿಲಿನಿಂದ ಜಲವನ್ನು ಚಿಮುಕಿಸಿ ಶಿವಲಿಂಗವನ್ನು ಸ್ವಚ್ಚವಾಗಿರಿಸಿದ್ದರಿಂದ ಮಂದಿರದಲ್ಲಿರುವ ವಿಗ್ರಹದಲ್ಲಿ ಕೂಡಾ ಮೂರು ಪ್ರಾಣಿಗಳನ್ನು ನೋಡಬಹುದಾಗಿದೆ.
|