ಈ ಸಲದ ಧಾರ್ಮಿಕ ಯಾತ್ರೆಯಲ್ಲಿ ನಮ್ಮ ಪಯಣ, ಜಗನ್ನಾಥ ದೇವರ ರಥಯಾತ್ರಾ ಹಬ್ಬ (ದೇವರ ಪ್ರತಿಮೆಯನ್ನಿರಿಸಿದ ರಥವನ್ನು ಎಳೆಯುವ ಮೆರವಣಿಗೆ) ವೀಕ್ಷಿಸಲು ಗುಜರಾತ್‌ಗೆ. ಪ್ರತಿ ವರ್ಷ ಆಷಾಢ ಶುದ್ಧ ದ್ವಿತೀಯಾದಂದು ಜರುಗುವ ಮೆರವಣಿಗೆಯಲ್ಲಿ ಸಾಗೋರೊಪಾದಿಯಲ್ಲಿ ಯಾತ್ರಾರ್ಥಿಗಳು ಪಾಲ್ಗೊಳ್ಳುತ್ತಾರೆ. ಈ ದಿನದಂದು ಅಹಮದಾಬಾದ್‌ನ ಜಗನ್ನಾಥ ದೇವಾಲಯದಿಂದ ಹಿರಿದಾದ ಮೆರವಣಿಗೆಯೊಂದು ಮೊದಲ್ಗೊಳ್ಳುತ್ತದೆ. ಮೆರವಣಿಗೆಯಲ್ಲಿ ಮೂರು ರಥಗಳಿರುತ್ತವೆ. ಅವುಗಳಲ್ಲಿ ಮೊದಲನೇಯದು ಜಗನ್ನಾಥ ದೇವರದು, ಎರಡನೇಯದು ಅವರ ತಂಗಿ ಸುಭದ್ರೆ ಮತ್ತು ಮೂರನೇಯದು ಅಣ್ಣ ಬಲರಾಮರದು. ನಗರದ ಎಲ್ಲಾ ರಸ್ತೆಗಳ ಮೂಲಕ ಯಾತ್ರೆಯು ಹಾದು ಹೋಗುತ್ತದೆ. ಜಾತ್ರೆಯಲ್ಲಿ ನೂರಾರು ಸಂತರು ಮತ್ತು ಸಾವಿರಾರು ಭಕ್ತಾದಿಗಳು ಭಾಗವಹಿಸುತ್ತಾರೆ ಮತ್ತು ಇಡೀ ಪರಿಸರದಲ್ಲಿ ಶ್ರದ್ಧೆ ಮತ್ತು ದೈವೀಕತೆಯ ಕಳೆ ತುಂಬಿರುತ್ತದೆ.
ಅಖಾಡಗಳು(ಜನರು ವ್ಯಾಯಾಮ ಮಾಡುವ ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು) ಜಾತ್ರೆಯ ಮುಂದಾಳತ್ವ ವಹಿಸುತ್ತವೆ ಮತ್ತು ಅಖಾಡದ ಸದಸ್ಯರು ಜಗನ್ನಾಥ ದೇವರ ಪ್ರತಿಯಾಗಿ ತಮ್ಮ ಶ್ರದ್ಧೆಯನ್ನು ವ್ಯಕ್ತ ಪಡಿಸಲು ವಿವಿಧ ರೀತಿಯ ರೋಮಾಂಚಕಾರಿ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ. ಇಡೀ ನಗರ ಸುಂದರ ಬೆಳದಿಂಗಳ ಅಂಗಳದಂತೆ ಗೋಚರಿಸುತ್ತದೆ. ನಗರದ ಸಂದಿಗೊಂದಿಗಳು ಸಹ ಜಗನ್ನಾಥ ದೇವರ ಶ್ರದ್ಧಾ ಧಾರೆಯಲ್ಲಿ ಮಿಂದೇಳುತ್ತದೆ. ರಸ್ತೆಗಳಲ್ಲಿ ರಥಯಾತ್ರೆಯು ಸಾಗಿಬರುವಾಗ ಜನ ಜಗನ್ನಾಥ ದೇವರಿಗೆ ಪುಷ್ಪಗಳನ್ನು ಅರ್ಪಿಸಿ ಎದುರುಗೊಳ್ಳುತ್ತಾರೆ. ಪ್ರತಿಯೊಬ್ಬರು ಜಗನ್ನಾಥ ದೇವರ ಕಿರು ದರ್ಶನಕ್ಕಾಗಿ ತವಕಿಸುತ್ತಾರೆ.
|