ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಲೇಖನಗಳು > ಮುಗಿದೇ ಹೋಯ್ತು ಟ್ವೆಂಟಿ-20 ವಿಶ್ವಕಪ್: ಹೇಗಿತ್ತು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಗಿದೇ ಹೋಯ್ತು ಟ್ವೆಂಟಿ-20 ವಿಶ್ವಕಪ್: ಹೇಗಿತ್ತು?
'ಟ್ವೆಂಟಿ-20 ಎಂಬುದು ಕ್ರಿಕೆಟೇ ಅಲ್ಲ. ಅದೊಂದು ಮೋಜಿನಾಟ'- ಇದು ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಅಭಿಪ್ರಾಯ ಮತ್ತು ಟೀಕೆ. ಇದನ್ನು ಸಂಪೂರ್ಣವಾಗಿ ಒಪ್ಪಲಾಗದಿದ್ದರೂ 'ಅದೃಷ್ಟದಾಟ' ಎಂಬುದನ್ನು ಮಾಜಿಗಳು ಸೇರಿದಂತೆ ಬಹುತೇಕ ಅನುಭವಿ ಕ್ರಿಕೆಟಿಗರು ಒಪ್ಪಿಕೊಂಡಿದ್ದಾರೆ.

ಈ ಬಾರಿ ಅದರ ವಿಶ್ವದರ್ಶನವಾಯಿತು. ಪ್ರಬಲ ತಂಡಗಳೆಂದು ಗುರುತಿಸಿಕೊಂಡಿದ್ದ ಆಸ್ಟ್ರೇಲಿಯಾ, ಭಾರತ ಮತ್ತು ದಕ್ಷಿಣ ಆಫ್ರಿಕಾಗಳಿಗೊದಗಿದ ಸ್ಥಿತಿ ಅಂತಹ ಮಾತುಗಳಿಗೊಂದಿಷ್ಟು ಪುರಾವೆಗಳನ್ನು ನೀಡಿದವು.

ಟ್ವೆಂಟಿ-20ಯೆಂದ ಕೂಡಲೇ ಅಲ್ಲಿ ರೋಚಕತೆ, ಸ್ಫೋಟಕ ಬ್ಯಾಟಿಂಗ್, ಬೌಲರುಗಳ ಜೋಲು ಮೋರೆ, ಕೊನೆಯ ಓವರಿನವರೆಗೂ ಫಲಿತಾಂಶವನ್ನು ನಿರ್ಧರಿಸಲಾಗದ ಒಂದು ರೀತಿಯ ಅನಿಶ್ಚಿತತೆ ಇವೆಲ್ಲ ಸಾಮಾನ್ಯ. ಕೇವಲ ಒಂದೇ ಒಂದು ಎಸೆತದಿಂದ ಅಥವಾ ಒಂದು ಓವರಿನಲ್ಲಿ ಬಂದ ರನ್‌ಗಳಿಂದ ಪಂದ್ಯದ ಗತಿಯೇ ಬದಲಾಗುವುದು -- ಹೀಗೆ ಅಸಾಧ್ಯವಾದುವುಗಳು ನಡೆದೇ ಹೋಗುವ ಕ್ರಿಕೆಟ್‌ನ ಪ್ರಕಾರವಿದು.
Shahid Afridi
PTI
ಶೀಘ್ರ ಫಲಿತಾಂಶ, ಹೆಚ್ಚು ಕಾಯುವ ಅಗತ್ಯವಿಲ್ಲ; ಸ್ಫೋಟಕ ಪ್ರದರ್ಶನ, ಘಟಾನುಘಟಿ ಬೌಲರ್‌ಗಳಿಗೆಲ್ಲ ಚಿಲ್ಲರೆ ದಾಂಡಿಗರು ಮುಖ-ಮೂತಿ ನೋಡದೆ ಜಜ್ಜುವುದು, ಬೌಂಡರಿ-ಸಿಕ್ಸರುಗಳ ಸುರಿಮಳೆ ಮುಂತಾದುವುಗಳಿಂದಾಗಿ ಕ್ರಿಕೆಟ್‌ನ ಈ ಪ್ರಕಾರ ಹೆಚ್ಚು ಜನಪ್ರಿಯವಾಗಿದೆ. ಆದರೆ ಐಪಿಎಲ್ ಕಾರಣದಿಂದಾಗಿಯೋ ಏನೋ ಈ ಬಾರಿ ಭಾರತದಲ್ಲಿ ಅಭಿಮಾನಿಗಳಿಂದ ಹೇಳಿಕೊಳ್ಳುವ ಉತ್ಸಾಹ ಕಂಡು ಬಂದಿರಲಿಲ್ಲ. ಅದಕ್ಕೆ ತಕ್ಕಂತೆ ಭಾರತೀಯ ಕ್ರಿಕೆಟ್ ಆಟಗಾರರೂ ನಡೆದುಕೊಂಡಿದ್ದಾರೆ.


ಹೀಗೆ ಹಲವಾರು ವಿಶೇಷತೆಗಳನ್ನು ತುಂಬಿಕೊಂಡಿರುವ ಈ ಚುಟುಕು ಕ್ರಿಕೆಟ್ ಹಲವರ ಜೀವನ ಗತಿಯನ್ನೇ ಬದಲಾಯಿಸಿದೆ. ಶಾಹಿದ್ ಆಫ್ರಿದಿಗೆ ಪುನರ್ಜನ್ಮ ನೀಡಿದ್ದು ಈ ಬಾರಿಯ ವಿಶ್ವಕಪ್ ಎನ್ನುವುದೀಗ ಜನಜನಿತ. ಮತ್ತೆ ಅವರು ಅಭಿಮಾನಿಗಳ ಪಾಲಿಗೆ ದೇವರಾಗಿದ್ದಾರೆ. ಅವರನ್ನು ವೀರಯೋಧ, ಸೂಪರ್‌ಸ್ಟಾರ್ ಎಂದು ಪಾಕಿಸ್ತಾನದಲ್ಲೀಗ ಬಣ್ಣಿಸಲಾಗುತ್ತಿದೆ.

ಯೂಸುಫ್ ಪಠಾಣ್ ಎಂಬ ಆಲ್-ರೌಂಡರ್ ಬೆಳಕಿಗೆ ಬಂದಿದ್ದೇ ಟ್ವೆಂಟಿ-20ಯಲ್ಲಲ್ಲವೇ? ರೋಹಿತ್ ಶರ್ಮಾ, ಮಿಸ್ಬಾ-ಉಲ್-ಹಕ್, ಮನೀಷ್ ಪಾಂಡೆಯಂತವರಿಗೂ ಈ ಟ್ವೆಂಟಿ-20 ಯಾವುದೋ ರೀತಿಯಲ್ಲಿ ಸಹಕಾರವಾಗಿದೆ.
Akmal
PTI

ಕಳೆದ ಬಾರಿಯಂತೆ ಕ್ರೀಡಾಭಿಮಾನಿಗಳ ನಿರೀಕ್ಷೆಗಳನ್ನೆಲ್ಲ ಹುಸಿ ಮಾಡುತ್ತಾ ಸಾಗಿದ ವಿಶ್ವಕಪ್ ಮುಗಿದೇ ಹೋಗಿದೆ. ಹಾಗಂತ ಮತ್ತೊಂದು ವಿಶ್ವಕಪ್‌ಗಾಗಿ ಬಹಳ ದಿನಗಳ ಕಾಲ ಕಾಯಬೇಕಾಗಿಲ್ಲ. ಕೇವಲ ಇನ್ನು ಒಂಬತ್ತೇ ತಿಂಗಳಲ್ಲಿ ಮೂರನೇ ಟ್ವೆಂಟಿ-20 ವಿಶ್ವಕಪ್ ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿದೆ. ಅದರ ಆಸುಪಾಸಿನಲ್ಲೇ ಮತ್ತೊಂದು ಐಪಿಎಲ್... ಬೆನ್ನಿಗೆ ತವರಿನಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್.

ಈ ಬಾರಿ ಪ್ರಮುಖ ತಂಡಗಳ ಪ್ರದರ್ಶನ ಹೇಗಿತ್ತು? ಅತ್ಯುತ್ತಮ ನಿರ್ವಹಣೆ ನೀಡಿದವರು ಯಾರು? ತಂಡಗಳು ಹೇಗೆ ಹೊರ ಬಿದ್ದವು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.. ಬನ್ನಿ.

ಟೀಮ್ ಇಂಡಿಯಾ...

ಉದ್ಘಾಟನಾ ಆವೃತ್ತಿಯ ಚಾಂಪಿಯನ್ ಈ ಬಾರಿಯೂ ಗೆಲ್ಲುವ ನೆಚ್ಚಿನ ತಂಡವೆಂದು ಗುರುತಿಸಿಕೊಂಡಿತ್ತು. ಆದರೆ ಅಭ್ಯಾಸ ಪಂದ್ಯವೊಂದರಲ್ಲೇ ನ್ಯೂಜಿಲೆಂಡ್ ವಿರುದ್ಧ ಮುಖ ಮೂತಿ ಜಜ್ಜಿಸಿಕೊಂಡಿದ್ದ ಟೀಮ್ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಜಯಗಳಿಸಿತ್ತಾದರೂ ಆ ರೋಚಕ ನೆನಪು ಮುಂದಿನ ಗೆಲುವುಗಳಿಗೆ ಸಹಕಾರಿಯಾಗಲೇ ಇಲ್ಲ.
MS Dhoni
PTI

ವಿಶ್ವಕಪ್ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಐರ್ಲೆಂಡ್ ಎದುರು ತನ್ನ ಪ್ರತಾಪ ಮೆರೆದ ಭಾರತವು ಸೂಪರ್ ಎಂಟರಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೇ ಹೊರಬಿದ್ದದ್ದು ತೀರಾ ಅನಿರೀಕ್ಷಿತವಾಗಿತ್ತು. ವೆಸ್ಟ್‌ಇಂಡೀಸ್, ಇಂಗ್ಲೆಂಡ್‌ನಂತಹ ಸಾಧಾರಣ ತಂಡಗಳೆದುರು ತಲೆ ಬಗ್ಗಿಸಿದ್ದ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಔಪಚಾರಿಕವೆನಿಸಿದ್ದ ಪಂದ್ಯದಲ್ಲೂ ಅವಮಾನಕಾರಿ ಸೋಲನುಭವಿಸಿ ವಿಶ್ವಕಪ್ ಯಾತ್ರೆಯನ್ನು ದುಃಖಾಂತ್ಯಗೊಳಿಸಿತು.

ಟೀಮ್ ಇಂಡಿಯಾದ ಯಾವೊಬ್ಬ ಆಟಗಾರನೂ ಗಮನಾರ್ಹ ಪ್ರದರ್ಶನ ನೀಡಲಿಲ್ಲ. ಕಳೆದ ಬಾರಿಯ ವಿಶ್ವಕಪ್‌ನಲ್ಲಿ ತನ್ನ ಸಿಕ್ಸರ್‌ಗಳ ನೆರವಿನಿಂದಲೇ ಗಮನ ಸೆಳೆದಿದ್ದ ಯುವರಾಜ್ ಸಿಂಗ್ (ಈ ಬಾರಿಯೂ ಅತೀ ಹೆಚ್ಚು ಸಿಕ್ಸರ್ ಬಾರಿಸಿದ್ದು ಯುವರಾಜ್) ಈ ಬಾರಿ ತೀರಾ ಸಪ್ಪೆಯೆನಿಸಿದರು. ನಾಯಕ ಮಹೇಂದ್ರ ಸಿಂಗ್ ಧೋನಿ ಬದಲಾಗಿದ್ದೇನೆ ಎಂಬುದನ್ನು ವಿವಾದಗಳ ಮೂಲಕವೇ ತೋರಿಸಿದರೆ, ಗೌತಮ್ ಗಂಭೀರ್ ಹೆಸರಿನಂತೆ ಗಂಭೀರ ವದನರಾಗಿದ್ದರು. ರೋಹಿತ್ ಶರ್ಮಾ ಆರಂಭಿಕ ಪಂದ್ಯಗಳಲ್ಲಿ ಮಿಂಚಿದರೂ ಸೂಪರ್ ಎಂಟರಲ್ಲಿ ಕಿಮ್ಮತ್ತು ತೋರಿಸಲಿಲ್ಲ. ಯೂಸುಫ್ ಪಠಾಣ್‌ರಿಂದ ಕೂಡ ನಿರೀಕ್ಷಿತ ಪ್ರದರ್ಶನ ಹೊರ ಬರಲಿಲ್ಲ. ಆಗ ಎಲ್ಲರಿಗೂ ನೆನಪಿಗೆ ಬಂದದ್ದು ಗಾಯಾಳು ವೀರೇಂದ್ರ ಸೆಹ್ವಾಗ್.

ಭಾರತ ತಂಡ ಒಗ್ಗಟ್ಟಾಗಿದೆ ಎಂಬ ಮಾತು ಕೂಡ ಈ ವಿಶ್ವಕಪ್‌ನಲ್ಲಿ ಸುಳ್ಳಾಗಿ ಹೋಯಿತು. ಸೆಹ್ವಾಗ್ ವಿಚಾರದಲ್ಲಿ ಧೋನಿ ನಡೆದುಕೊಂಡ ರೀತಿ ಇದಕ್ಕೆ ಸಾಕ್ಷಿಯಾಯಿತು. ಆಮೇಲೆ ಎಷ್ಟೇ ತೇಪೆ ಹಚ್ಚಿ ರಿಪೇರಿ ಮಾಡಿದರೂ ಬಿರುಕುಗಳಿದ್ದುದು ನಿಜ ಎಂಬುದು ಹೊರಗೆ ಬಂದಿದೆ.

ಆಸ್ಟ್ರೇಲಿಯಾ...

ರಿಕಿ ಪಾಂಟಿಂಗ್ ಬಳಗ ಎಂತಹ ಅವಮಾನವನ್ನೆದುರಿಸಿತೆಂದರೆ ಶ್ರೀಲಂಕಾ ಮತ್ತು ವೆಸ್ಟ್ಇಂಡೀಸ್ ವಿರುದ್ಧದ ಒಂದೂ ಪಂದ್ಯ ಗೆಲ್ಲಲಾಗದೆ ಸೂಪರ್ ಎಂಟರಿಂದ ದೂರವೇ ಉಳಿದದ್ದು. ಇಡೀ ವಿಶ್ವಕಪ್‌ನಲ್ಲಿ ಕೇವಲ ಎರಡು ಪಂದ್ಯಗಳಿಗೆ ಸೀಮಿತಗೊಂಡ ಆಸ್ಟ್ರೇಲಿಯಾವು ಆರಂಭದಲ್ಲೇ ತನ್ನ ಹೋರಾಟ ಮುಗಿಸಿ 'ವಿಶ್ರಾಂತಿ' ಪಡೆದುಕೊಂಡದ್ದನ್ನು ನೋಡಿ ಇಡೀ ವಿಶ್ವವೇ ನಿಬ್ಬೆರಗಾಗಿದೆ.

ಟ್ವೆಂಟಿ-20 ವಿಶ್ವಕಪ್‌ಗೆ ತಯಾರಿ ನಡೆಸಬೇಕು ಎಂಬ ಕಾರಣಕ್ಕಾಗಿ ಪಂಟರ್ ಸೇರಿದಂತೆ ಹಲವು ಮುಂಚೂಣಿಯ ಆಸೀಸ್ ಆಟಗಾರರು ಐಪಿಎಲ್‌ ಎರಡನೇ ಆವೃತ್ತಿಯಿಂದ ದೂರ ಉಳಿದಿದ್ದರು ಎಂಬುದು ಈಗ ಸ್ಮರಣಾರ್ಹ.

ದಕ್ಷಿಣ ಆಫ್ರಿಕಾ..

ನಿಜಕ್ಕೂ ಅಗ್ರ ತಂಡಗಳಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿದ್ದು ದಕ್ಷಿಣ ಆಫ್ರಿಕಾ ಮಾತ್ರ. ಅದು ನ್ಯೂಜಿಲೆಂಡ್ ಮತ್ತು ಸ್ಕಾಟ್ಲೆಂಟ್ ವಿರುದ್ಧ ಆರಂಭಿಕ ಎರಡೂ ಪಂದ್ಯಗಳಲ್ಲಿ ಜಯಿಸಿ, ಸೂಪರ್ ಎಂಟರಲ್ಲೂ ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಭಾರತಗಳನ್ನು ಸೋಲಿಸಿ ಸೆಮಿಫೈನಲ್ ತಲುಪಿತ್ತು. ಆದರೆ ಶಾಹಿದ್ ಆಫ್ರಿದಿ ಆಲ್-ರೌಂಡ್ ಪ್ರದರ್ಶನದೆದುರು ಹರಿಣಗಳಿಗೆ ಜಯಿಸಲು ಸಾಧ್ಯವಾಗಲೇ ಇಲ್ಲ.

ಜಾಕ್ವಾಸ್ ಕ್ಯಾಲಿಸ್ ಅತೀ ಹೆಚ್ಚು ರನ್ ಗಳಿಸಿದವರ (238) ಸಾಲಿನಲ್ಲಿ ಎರಡನೇ ಸ್ಥಾನ ಪಡೆದರೆ, ಅಬ್ರಹಾಂ ಡೇ ವಿಲ್ಲರ್ಸ್ (186) ಐದನೇಯವರು. ಬಹುತೇಕ ಆಟಗಾರರು ಹೆಚ್ಚಿನ ಪಂದ್ಯಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರಿಸಿದರೂ ಸೆಮಿಫೈನಲ್‌ನಲ್ಲಿ ವಿಫಲರಾಗದ ಕಾರಣ ಎಲ್ಲವೂ ಮಣ್ಣುಪಾಲಾಗಿತ್ತು.

ನ್ಯೂಜಿಲೆಂಡ್..

ವಿಶ್ವಕಪ್‌ಗೂ ಮೊದಲು ಭಾರತವನ್ನು ಅಭ್ಯಾಸ ಪಂದ್ಯದಲ್ಲಿ ಸೋಲಿಸಿದ್ದ ನ್ಯೂಜಿಲೆಂಡ್ ಆರಂಭಿಕ ಪಂದ್ಯದಲ್ಲಿ ದುರ್ಬಲ ಸ್ಕಾಟ್ಲೆಂಟ್ ವಿರುದ್ಧ ಪ್ರತಾಪ ಮೆರೆಯಿತಾದರೂ ದಕ್ಷಿಣ ಆಫ್ರಿಕಾ ವಿರುದ್ಧ ಸಾಧ್ಯವಾಗಲಿಲ್ಲ. ಹಾಗೂ ಹೀಗೂ ಸೂಪರ್ ಎಂಟು ತಲುಪಿದ ಆಡಿದ ಪಂದ್ಯಗಳಲ್ಲಿ ಗೆದ್ದದ್ದು ಕೇವಲ ಒಂದು ಮಾತ್ರ. ಅದೂ ಐರ್ಲೆಂಡ್ ವಿರುದ್ಧ. ಪಾಕಿಸ್ತಾನ ಮತ್ತು ಶ್ರೀಲಂಕಾದೆದುರು ಕಿವೀಸರು ಅವಮಾನಕಾರಿ ಸೋಲುಂಡು ವಿಶ್ವಕಪ್ ಅಭಿಯಾನ ಮುಗಿಸಿದರು. ರೋಸ್ ಟೇಲರ್, ಬ್ರೆಂಡನ್ ಮೆಕಲಮ್‌ರಂತಹ ಆಟಗಾರರು ತಂಡಕ್ಕೆ ಸಹಾಯಕರಾಗುವ ಮಾತು ಕೂಡ ದೂರವೇ ಉಳಿಯಿತು.

ಇಂಗ್ಲೆಂಡ್..

ಆತಿಥೇಯ ಇಂಗ್ಲೆಂಡ್ ಆರಂಭಿಕ ಪಂದ್ಯದಲ್ಲೇ ನೆದರ್ಲೆಂಡ್‌ಗೆ ಶರಣಾಗುವ ಮೂಲಕ ನಗೆಪಾಟಲಿಗೀಡಾಯಿತು. ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರೀ ಅಂತರದಿಂದ ಮಣಿಸಿ ಸೂಪರ್ ಎಂಟಕ್ಕೆ ಕಾಲಿಟ್ಟ ಆಂಗ್ಲರು ಗೆದ್ದದ್ದು ಭಾರತ ವಿರುದ್ಧ ಮಾತ್ರ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ಇಂಡೀಸ್ ಎದುರಿನ ಎರಡೂ ಪಂದ್ಯಗಳಲ್ಲಿ ಕಾಲಿಂಗ್‌ವುಡ್ ಪಡೆ ಸೋಲುಂಡಿತ್ತು.

ಆಂಗ್ಲರಿಗೆ ಈ ಬಾರಿ ಆಂಡ್ರ್ಯೂ ಫ್ಲಿಂಟಾಫ್ ಗಾಯಾಳುವಾದ ಕಾರಣ ಅಲಭ್ಯರಾಗಿದ್ದರು. ಕೆವಿನ್ ಪೀಟರ್ಸನ್‌ರ ಏಕಾಂಗಿ ಶ್ರಮ ಸಾಲದಾಯಿತು. ರವಿ ಬೋಪಾರ ಕೂಡ ತಂಡವನ್ನು ಗೆಲ್ಲಿಸುವ ನಿರ್ವಹಣೆ ತೋರಿಸಲಿಲ್ಲ.

ವೆಸ್ಟ್‌ಇಂಡೀಸ್..
Chris Gayle
PR
ವೆಸ್ಟ್ಇಂಡೀಸಿನದ್ದು ನಿಜಕ್ಕೂ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯಿಸಿ, ಶ್ರೀಲಂಕಾ ವಿರುದ್ಧ ಸೋತು ಸೂಪರ್ ಎಂಟು ಪ್ರವೇಶಿಸಿದ ಕ್ರಿಸ್ ಗೇಲ್ ಪಾಳಯವು ಸೋತಿದ್ದು ದಕ್ಷಿಣ ಆಫ್ರಿಕಾದೆದುರು ಮಾತ್ರ. ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಜಯಭೇರಿ ಬಾರಿಸಿ ಅದು ಸೆಮಿಫೈನಲ್ ತಲುಪಿತ್ತು. ಫೈನಲ್‌ಗಾಗಿನ ಸುತ್ತಿನಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಲಂಕಾದೆದುರು ಕುಸಿದು ಕಪ್ ಹೋರಾಟ ಕೊನೆಗೊಳಿಸಿತ್ತು.


ಅಂತಾರಾಷ್ಟ್ರೀಯ ಟ್ವೆಂಟಿ-20ಯಲ್ಲಿ ಶತಕ ದಾಖಲಿಸಿದ ಏಕೈಕ ದಾಂಡಿಗ ಎಂಬ ದಾಖಲೆ ಬರೆದಿರುವ ಕ್ರಿಸ್ ಗೇಲ್ ಈ ಟೂರ್ನಮೆಂಟ್‌ನಲ್ಲೂ ಕೆಲವು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಒಟ್ಟಾರೆ ಅತೀ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ (193) ಅವರದ್ದು ಮೂರನೇ ಸ್ಥಾನ. ಉಳಿದಂತೆ ದ್ವಾಯ್ನೆ ಬ್ರಾವೋ, ಲೆಂಡಿಲ್ ಸೈಮನ್ಸ್ ಕೂಡ ಗಮನಾರ್ಹ ನಿರ್ವಹಣೆ ತೋರಿಸಿದ್ದರು.

ಶ್ರೀಲಂಕಾ..

ಆರಂಭಿಕ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ಇಂಡೀಸ್‌ಗಳ ವಿರುದ್ಧ ಜಯಿಸಿ ಸೂಪರ್ ಎಂಟರಲ್ಲಿ ಪಾಕಿಸ್ತಾನ, ಐರ್ಲೆಂಡ್, ನ್ಯೂಜಿಲೆಂಡ್‌ಗಳನ್ನೂ ಮಣಿಸಿ ಸೆಮಿಫೈನಲ್‌ನಲ್ಲಿ ಮತ್ತೆ ವೆಸ್ಟ್ಇಂಡೀಸನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ಈ ತಂಡಕ್ಕೆ ಅದ್ಭುತ ಆಸರೆಯಾಗಿದ್ದವರು ತಿಲಕರತ್ನೆ ದಿಲ್‌ಶಾನ್. ಅವರು ಈ ವಿಶ್ವಕಪ್‌ನ ಅತ್ಯಧಿಕ ರನ್ (317) ಗಳಿಕೆದಾರರೂ ಹೌದು. ಕುಮಾರ ಸಂಗಕ್ಕರ, ಸನತ್ ಜಯಸೂರ್ಯರದ್ದೂ ಗಮನಾರ್ಹ ಪ್ರದರ್ಶನ. ಅಜಂತಾ ಮೆಂಡಿಸ್, ಅಂಜೆಲೋ ಮ್ಯಾಥ್ಯೂಸ್, ಲಸಿತ್ ಮಾಲಿಂಗ ಬೌಲಿಂಗ್‌ನಲ್ಲಿ ಮಿಂಚಿದ್ದರು.

ಪಾಕಿಸ್ತಾನ..

ಇಂಗ್ಲೆಂಡ್ ವಿರುದ್ಧ ಸೋಲುಂಡು, ನೆದರ್ಲೆಂಡ್ ವಿರುದ್ಧ ಜಯಗಳಿಸುವ ಮೂಲಕ ದುರ್ಬಲ ತಂಡವಾಗಿ ಲೀಗ್ ಮುಗಿಸಿದ್ದ ಪಾಕಿಸ್ತಾನವು ಸೂಪರ್ ಎಂಟರಲ್ಲಿ ಸೋತದ್ದು ಶ್ರೀಲಂಕಾ ವಿರುದ್ಧ ಮಾತ್ರ. ನಂತರ ನ್ಯೂಜಿಲೆಂಡ್ ಹಾಗೂ ಐರ್ಲೆಂಡ್ ವಿರುದ್ಧ ಜಯಿಸಿ ಸೆಮಿ ತಲುಪಿತ್ತು. ಅಲ್ಲೂ ಪ್ರಬಲ ದಕ್ಷಿಣ ಆಫ್ರಿಕಾವನ್ನು ಹೊರತಳ್ಳಿ ಫೈನಲ್‌ನಲ್ಲೂ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.
Gul
PTI

ಪಾಕಿಸ್ತಾನಕ್ಕೆ ಈ ಬಾರಿ ಪ್ರಮುಖ ಅಸ್ತ್ರವಾಗಿ ಬಳಕೆಯಾದವರು ಶಾಹಿದ್ ಆಫ್ರಿದಿ. ಆಲ್-ರೌಂಡ್ ಪ್ರದರ್ಶನ ನೀಡಿರುವ ಅವರು ಸೆಮಿಫೈನಲ್ ಹಾಗೂ ಫೈನಲ್‌ಗಳಲ್ಲಿ ತಂಡವನ್ನು ಗೆಲುವಿನ ಗೆರೆ ದಾಟಿಸಿದ್ದರು. ಉಳಿದಂತೆ ಕಮ್ರಾನ್ ಅಕ್ಮಲ್, ನಾಯಕ ಯೂನಿಸ್ ಖಾನ್, ಅಬ್ದುಲ್ ರಜಾಕ್, ಉಮರ್ ಗುಲ್ ಪ್ರದರ್ಶನವೂ ಗಮನಾರ್ಹವಾಗಿತ್ತು. ಗುಲ್ ಈ ಟೂರ್ನಮೆಂಟ್‌ನಲ್ಲಿ ಅತೀ ಹೆಚ್ಚು ವಿಕೆಟ್ (13) ಪಡೆದ ಸಾಧನೆ ಮಾಡಿದ್ದಾರೆ.

ವಿಶ್ವಕಪ್ ಗೆದ್ದುಕೊಳ್ಳುವ ಮೂಲಕ ತನಗಿದ್ದ ಕ್ರಿಕೆಟ್ ದಾಹವನ್ನು ಜಗತ್ತಿನೆದುರು ತೋಡಿಕೊಂಡಿರುವ ಪಾಕಿಸ್ತಾನದ್ದು ಅಮೋಘ ಪ್ರದರ್ಶನ. ಕಳೆದೆರಡು ವಿಶ್ವಕಪ್‌ಗಳಲ್ಲಿ ಫೈನಲ್ ತಲುಪಿದ್ದರೂ ಕಪ್ ಗೆಲ್ಲಲಾಗದ ಹತಾಶೆಯನ್ನು ಈ ಬಾರಿ ಅದು ನೀಗಿಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವೇನು ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಿ-20: ಅಜೇಯ ಲಂಕೆಯೆದುರು ಪಾಕ್‌ಗೆ ಸೇಡಿನ ತವಕ
ವಿಶ್ವಕಪ್ -II: ಭಾರತಕ್ಕೆ ನೋವಿನ ನೆನಪಿನ 'ದೋನಿ'!
ಚಾಂಪಿಯನ್‌ಗಳ ವಿಶ್ವಕಪ್ ಜಯದಾಟಕ್ಕೆ ವಿಂಡೀಸ್ ಕಡಿವಾಣ
ಟ್ವೆಂಟಿ20: ಡೆ ವಿಲ್ಲರ್ಸ್ ದಾಖಲೆಗಳ ಸರಮಾಲೆ
ಟಿ-20 ವಿಶ್ವಕಪ್-II: ಕ್ರಿಕೆಟ್ ಉತ್ಸವಕ್ಕೆ ವೇದಿಕೆ ಸಜ್ಜು
ಅಜಾತಶತ್ರು ಕುಂಬ್ಳೆಯ ಕುರಿತು ಒಂದಿಷ್ಟು..