ಪ್ರಮುಖರು ತಂಡದಲ್ಲಿಲ್ಲದ ಹೊರತಾಗಿಯೂ ಗೆಲ್ಲಲೇಬೇಕೆಂದು ಕಣಕ್ಕಿಳಿಯುವ ಆಸ್ಟ್ರೇಲಿಯಾ ತಂಡದೆದುರು ಸರಣಿಯ ಐದನೇ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಸಿಡಿದು ನಿಲ್ಲಬೇಕಾಗಿದೆ. ಹಾಗಾಗದೇ ಹೋದಲ್ಲಿ ಆತಿಥೇಯರ ಸರಣಿ ಗೆಲ್ಲುವ ಅವಕಾಶ ಮೋಡದೆಡೆಯ ಚಂದಿರನಂತಾಗಬಹುದು.
ಗುರುವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅಹರ್ನಿಶಿಯಾಗಿ ನಡೆಯಲಿರುವ ಈ ಪಂದ್ಯ ಇತ್ತಂಡಗಳಿಗೂ ನಿರ್ಣಾಯಕ. ಏಳು ಪಂದ್ಯಗಳ ಸರಣಿಯ ನಾಲ್ಕು ಪಂದ್ಯಗಳಲ್ಲಿ ಸಮಬಲ ಸಾಧಿಸಿರುವ ಉಭಯ ಬಣಗಳು ಐದನೇ ಏಕದಿನ ಪಂದ್ಯವನ್ನು ನೂತನ ಸರಣಿಯೆಂದೇ ಭಾವಿಸಿ ಕಣಕ್ಕಿಳಿಯಬೇಕಾಗುತ್ತದೆ. ಇಲ್ಲಿ ಗೆದ್ದವರಿಗೆ ಸರಣಿ ಜಯಿಸುವ ಅವಕಾಶ ಭರಪೂರ.
ಮುಗಿದಿರುವ ನಾಲ್ಕು ಪಂದ್ಯಗಳ ಫಲಿತಾಂಶಗಳು 2-2ರ ಸಮಬಲ ತೋರಿಸುತ್ತಿದ್ದರೂ ಅಗತ್ಯ ಸಂದರ್ಭದಲ್ಲಿ ಕೈ ಕೊಡುವ ಟೀಮ್ ಇಂಡಿಯಾ ಅಗ್ರ ಕ್ರಮಾಂಕವು ನಿರಂತರ ಭರವಸೆಗಳನ್ನು ಹುಸಿ ಮಾಡುತ್ತಿದೆ. ಹಾಗೆ ನೋಡಿದರೆ ಗಾಯಾಳುಗಳಿಂದ ಜರ್ಝರಿತವಾಗಿರುವ ಪ್ರವಾಸಿ ತಂಡವು ನೀಡುವ ಪ್ರದರ್ಶನದೆದುರು ಪೂರ್ಣ ಬಳಗದೊಂದಿಗೆ ಕಣಕ್ಕಿಳಿಯುವ ಭಾರತದ ಕಸುವು ಸಪ್ಪೆಯಾಗಿಯೇ ಕಾಣುತ್ತಿದೆ.
PTI
ಆತಿಥೇಯರ ಪಾಳಯದಲ್ಲಿ.. ಕುತ್ತಿಗೆ ನೋವಿನ ಕಾರಣ ನಾಲ್ಕನೇ ಪಂದ್ಯದಿಂದ ಹೊರಗುಳಿದಿದ್ದ ಗೌತಮ್ ಗಂಭೀರ್ ತೆಲುಗರ ನಾಡಿನಲ್ಲಿ ನಡೆಯುವ ಪಂದ್ಯಕ್ಕೆ ಹಾಜರಾಗಲಿದ್ದಾರೆ. ಇವರ ಮರು ಸೇರ್ಪಡೆಯಿಂದ ಅಗ್ರ ಕ್ರಮಾಂಕ ಬಲಗೊಂಡಿರುವುದು ವಾಸ್ತವ. ಆದರೂ ಆತಿಥೇಯರು ಸರಣಿಯಲ್ಲಿ ಉತ್ತಮ ಆರಂಭವನ್ನು ತೋರಿಸಿಲ್ಲ ಎನ್ನುವುದು ಬಟಾಬಯಲಾಗಿ ಹೋಗಿದೆ.
ಈ ಕ್ರೀಡಾಂಗಣದಲ್ಲಿ ಅತ್ಯುತ್ತಮ ರನ್‌ಗಳು ಹೊರ ಬರುವ ನಿರೀಕ್ಷೆಗಳಿದ್ದರೂ ಬೌಲರುಗಳಿಗೂ ಸಹಾಯಕವಾಗಿ ಪರಿಣಮಿಸುವ ಪಿಚ್ ಇದು. ಹಾಗಾಗಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಹೊಣೆಯರಿತು ಬ್ಯಾಟ್ ಬೀಸುವ ಅಗತ್ಯವಿದೆ ಎಂದು ಪಿಚ್ ಕ್ಯೂರೇಟರ್ ಈಗಾಗಲೇ ಹೇಳಿದ್ದಾರೆ. ಇದನ್ನು ನಮ್ಮ ದಾಂಡಿಗರೂ ಕೇಳಿಸಿಕೊಂಡಿರಬಹುದು.
PTI
ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಜೋಡಿ ಸರಣಿಯಲ್ಲಿ ಇದುವರೆಗೆ ಉತ್ತಮ ಭಾಗೀದಾರಿಕೆ ನೀಡಿಲ್ಲ. ಇದಕ್ಕೂ ಮುಂಚೆ ಈ ಜೋಡಿ ನೀಡಿದ್ದ ಒಂದೇ ಒಂದು ಜತೆಯಾಟ ಕಂಡು ಬಂದಲ್ಲಿ ಭಾರತಕ್ಕೆ ಗೆಲುವು ಅನಾಯಾಸವಾಗಿ ಒಲಿಯಬಹುದು.
ಸ್ಫೋಟಕ ಪ್ರದರ್ಶನಕ್ಕೆ ಮುಂದಾಗುವ ಸೆಹ್ವಾಗ್ 30-40ರೊಳಗೆ ಶಸ್ತ್ರಾಸ್ತ್ರ ತ್ಯಾಗ ಮಾಡುತ್ತಾರೆ. ಕನಿಷ್ಠ 15 ಓವರುಗಳವರೆಗೆ ತಂಡಕ್ಕೆ ಸಹಾಯಕರಾಗುವಲ್ಲಿ ಅವರು ಸಫಲರಾದರೆ ಉಳಿದ ದಾಂಡಿಗರಿಗೆ ಅದೇ ಸ್ಫೂರ್ತಿಯಾಗಬಹುದು.
ಅಂತಾರಾಷ್ಟ್ರೀಯ ಏಕದಿನದಲ್ಲಿ 17,000 ರನ್ ಪೂರೈಸುವ ಕನಸಿನಲ್ಲಿರುವ ಸಚಿನ್ ಬ್ಯಾಟು ಅದೇಕೋ ರನ್ನುಗಳನ್ನು ಎಣಿಸುತ್ತಿದೆ. ಇನ್ನು ಏಳು ರನ್ ಗಳಿಸಿದರೆ ಅವರದ್ದು ದಾಖಲೆ. ಜತೆಗೆ ತಂಡಕ್ಕೂ ನೆರವಾಗುವರೆಂಬ ನಿರೀಕ್ಷೆ ಅಭಿಮಾನಿಗಳದ್ದು.
pti
ಯುವರಾಜ್ ಸಿಂಗ್, ಸುರೇಶ್ ರೈನಾ, ವಿರಾಟ್ ಕೋಹ್ಲಿಯವರದ್ದೂ ಇದೇ ಕಥೆ. ಇದ್ದುದರಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ, ಗೌತಮ್ ಗಂಭೀರ್ ಮತ್ತು ಯುವರಾಜ್ ಸಿಂಗ್ ಆಸರೆಯಾಗಿರುವುದನ್ನು ದಾಖಲೆಗಳು ತೋರಿಸುತ್ತಿವೆ.
ರವೀಂದ್ರ ಜಡೇಜಾ ಬೌಲರ್ ಆಗಿ ಯಶಸ್ಸು ಕಂಡಿದ್ದಾರೆ. ಆದರೆ ಬ್ಯಾಟ್ಸ್‌ಮನ್ ಆಗಿ ಇನ್ನೂ ಛಾಪೊತ್ತಲು ಅವರಿಗೆ ಸಾಧ್ಯವಾಗಿಲ್ಲ. ಅವರಿಗೆ ಸಿಕ್ಕಿರುವ ಅವಕಾಶಗಳೂ ಕಡಿಮೆಯೆನ್ನುವ ವಾದಗಳನ್ನೂ (ನಾಲ್ಕು ಪಂದ್ಯದಲ್ಲಿ ಎರಡು ಇನ್ನಿಂಗ್ಸ್, ಒಟ್ಟು ಗಳಿಸಿದ ರನ್ 12) ಇದೇ ಸಂದರ್ಭದಲ್ಲಿ ಒಪ್ಪಿಕೊಳ್ಳಬೇಕಾಗುತ್ತದೆ.
ವೇಗಿಗಳ ವಿಭಾಗದಲ್ಲಿ ಆಶಿಶ್ ನೆಹ್ರಾ, ಪ್ರವೀಣ್ ಕುಮಾರ್‌ರದ್ದು ಗಮನಾರ್ಹ ಪ್ರದರ್ಶನ. ಇಶಾಂತ್ ಶರ್ಮಾ ಇನ್ನೂ ತೆವಳುತ್ತಲೇ ಇದ್ದರೆ, ಟರ್ಬನೇಟರ್ ಹರಭಜನ್ ಸಿಂಗ್ ಕಳೆಗುಂದಿದ್ದಾರೆ.
PTI
ಎಲ್ಲಾ ವಿಭಾಗಗಳಿಂದಲೂ ಸಮಾನಾದ ಪ್ರದರ್ಶನ ಬಾರದ ಹೊರತು ಭಾರತದ ಅನಿಶ್ಚಿತತೆ ಮುಂದುವರಿಯಬಹುದು. ಆದರೂ ಕಳೆದ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡಿಂಗ್ ದಾಖಲಾಗಿರುವುದು ಉತ್ತಮ ಬೆಳವಣಿಗೆ.
ಇದು ಪ್ರವಾಸಿಗರ ಸ್ಥಿತಿ... ವಿಶ್ವ ಚಾಂಪಿಯನ್ನರ ತಂಡದಲ್ಲಿ ಯಾರು ಇದ್ದರೂ, ಇಲ್ಲದೇ ಇದ್ದರೂ ಪ್ರದರ್ಶನ ತೀರಾ ಕಳಪೆಯಲ್ಲ. ಅಗ್ರ ಕ್ರಮಾಂಕವು ಬ್ಯಾಟಿಂಗ್‌ನಲ್ಲಿ ಮೋಸ ಮಾಡುವುದೇ ಕಡಿಮೆ. ಬೌಲರುಗಳ ಕೊರತೆಯೆದುರಿಸುತ್ತಿದ್ದರೂ ಅದು ತೀರಾ ಮಂಕಾಗಿ ಕಂಡದ್ದು ಅಪರೂಪ. ಹಾಗಾಗಿ ಅವರ ಗಾಯಾಳು ಸಮಸ್ಯೆಯನ್ನು ಲಾಭವನ್ನಾಗಿ ಪರಿವರ್ತಿಸಲು ಭಾರತೀಯರು ವಿಫಲವಾಗಿದ್ದಾರೆಂದು ಸ್ಪಷ್ಟವಾಗಿಯೇ ಹೇಳಬಹುದಾಗಿದೆ.
ಮೊಹಾಲಿಯ ಪಂದ್ಯದ ನಂತರ ಅವರ ಗಾಯಾಳು ಪಟ್ಟಿಗೆ ಪೀಟರ್ ಸಿದ್ಲೇ ಮತ್ತು ಮೊಯೆಸೆಸ್ ಹೆನ್ರಿಕ್ಸ್ ಸೇರ್ಪಡೆಯಾಗಿದ್ದಾರೆ. ಸಿದ್ಲೇ ತವರಿಗೆ ಮುಖ ಮಾಡಿದ್ದರೆ, ಹೆನ್ರಿಕ್ಸ್ ಆರನೇ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಗಳಿವೆ.
pti
ಬ್ರೆಟ್ ಲೀ, ಟಿಮ್ ಪಾಯ್ನೆ, ಜೇಮ್ಸ್ ಹೋಪ್ಸ್ ಸರಣಿ ಆರಂಭಗೊಂಡ ನಂತರ ಕಳಚಿಕೊಂಡವರು. ಅದಕ್ಕೂ ಮೊದಲು ಪ್ರಮುಖ ಆಟಗಾರರು ಗಾಯಗೊಂಡ ಕಾರಣ ತವರಿನಲ್ಲೇ ಸಂಕುಚಿತ ತಂಡವಾಗಿ ಆಸೀಸ್ ಭಾರತ ಪ್ರವಾಸ ಕೈಗೊಂಡಿತ್ತು.
ಸಿದ್ಲೇಯನ್ನು ಕಳೆದುಕೊಂಡಿರುವ ತಂಡವೀಗ ಮಿಚ್ಚೆಲ್ ಜಾನ್ಸನ್‌ರನ್ನೇ ಆಶ್ರಯಿಸಿದೆ. ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಅವರು ಮತ್ತಷ್ಟು ಸುಧಾರಿತ ನಿರ್ವಹಣೆ ತೋರಿಸುವ ಭರವಸೆ ನಾಯಕನದ್ದು.
ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಡಾಗ್ ಬೊಲ್ಲಿಂಜೆರ್ ಗಮನಾರ್ಹರಾಗಿದ್ದಾರೆ. ಆಫ್-ಸ್ಪಿನ್ನರ್ ನಥಾನ್ ಹೌರಿಟ್ಜ್ ಕೂಡ ಮಧ್ಯಮ ಓವರುಗಳಲ್ಲಿ ಹೊರತುಪಡಿಸಿ ಉತ್ತಮ ಸಹಕಾರ ನೀಡಿದ್ದಾರೆ.
ಬ್ಯಾಟಿಂಗ್‌ನಲ್ಲಂತೂ ನಾಯಕ ಪಾಂಟಿಂಗ್ ಮತ್ತು ಉಪನಾಯಕ ಮೈಕೆಲ್ ಹಸ್ಸಿಯವರನ್ನೇ ತಂಡ ಆಶ್ರಯಿಸಿಕೊಂಡಿದೆ. ಶೇನ್ ವಾಟ್ಸನ್ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿರುವುದು ಅವರಿಗೆ ಮತ್ತೊಂದು ಪ್ಲಸ್ ಪಾಯಿಂಟ್.
ಆಸ್ಟ್ರೇಲಿಯಾ: ರಿಕಿ ಪಾಂಟಿಂಗ್, ಮೈಕೆಲ್ ಹಸ್ಸಿ, ಡಾಗ್ ಬೊಲ್ಲಿಂಜೆರ್, ನಥಾನ್ ಹೌರಿಟ್ಜ್, ಜಾನ್ ಹಾಲೆಂಡ್, ಬೆನ್ ಹಿಲ್‌ಫೆನಾಸ್, ಮಿಚ್ಚೆಲ್ ಜಾನ್ಸನ್, ಶಾನ್ ಮಾರ್ಷ್, ಆಡಮ್ ವೋಗ್ಸ್, ಶೇನ್ ವಾಟ್ಸನ್, ಕ್ಯಾಮರೂನ್ ವೈಟ್, ಕ್ಲಿಂಟ್ ಮೆಕ್ಕೇ.