ಏಷ್ಯಾ ಕಪ್‌ನ ಸೂಪರ್ ಫೋರ್ ವಿಭಾಗದಲ್ಲಿಂದು ಭಾರತ ಮತ್ತು ಪಾಕಿಸ್ತಾನಗಳು ಸೆಣಸಲಿದ್ದು, ಇದರಲ್ಲಿ ಗೆದ್ದರೆ ಭಾರತವು ನಿರಾಯಾಸವಾಗಿ ಫೈನಲಿಗೇರುತ್ತದೆ. ಆದರೆ ಪಾಕಿಸ್ತಾನ ಫೈನಲಿಗೇರಬೇಕಿದ್ದರೆ ಸಾಕಷ್ಟು ಅದೃಷ್ಟವೂ ಬೇಕಿದೆ.
ಪಾಕಿಸ್ತಾನ ಫೈನಲ್ ಪ್ರವೇಶಿಸಬೇಕಿದ್ದರೆ ಹೇಗಾದರೂ ಮಾಡಿ ಭಾರತದ ವಿರುದ್ಧ ಗೆಲ್ಲಬೇಕು, ಅದು ಕೂಡ ಭಾರೀ ಅಂತರದಿಂದ ಗೆಲುವು ದಾಖಲಿಸಬೇಕು ಮತ್ತು ಶುಕ್ರವಾರ ನಡೆಯುವ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾವನ್ನು ದೊಡ್ಡ ಅಂತರದಿಂದ ಸೋಲಿಸಬೇಕು.
ಇಷ್ಟು ಮಾತ್ರ ಸಾಕಾಗುವುದಿಲ್ಲ. ಭಾನುವಾರ ನಡೆಯುವ ಫೈನಲಿನಲ್ಲಿ ಆಡುವಂತಾಗಬೇಕಿದ್ದರೆ, ಮುಂದಿನ ಪಂದ್ಯದಲ್ಲಿ ಅಜೇಯ ಶ್ರೀಲಂಕಾ ತಂಡವು ಭಾರತವನ್ನು ಸೋಲಿಸಬೇಕಾಗುತ್ತದೆ.
ಡೀಹೈಡ್ರೇಶನ್‌ನಿಂದ ಬಳಲುತ್ತಿದ್ದ ಪಾಕ್ ನಾಯಕ ಶೋಯಬ್ ಮಲಿಕ್ ಅವರು ಆಡಲು ಅರ್ಹ ಎಂದು ಘೋಷಿಸಿರುವುದರೊಂದಿಗೆ ಪಾಕಿಸ್ತಾನ ನಿಟ್ಟುಸಿರು ಬಿಟ್ಟಿದೆ. ಭಾರತಕ್ಕೂ ಇರ್ಫಾನ್ ಪಠಾಣ್ ಲಭ್ಯತೆ ದೃಢಪಟ್ಟಿರುವುದರೊಂದಿಗೆ ಭಾರತ ಪಾಳಯದಲ್ಲಿ ಉತ್ಸಾಹ ಇಮ್ಮಡಿಸಿದೆ.
ಪಾಕಿಸ್ತಾನದಲ್ಲಿ ಎರಡು ಬದಲಾವಣೆಗಳಿರುತ್ತವೆ. ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ಅವರು ಆಲ್‌ರೌಂಡರ್ ಮನ್ಸೂರ್ ಅಮ್ಜದ್ ಸ್ಥಾನದಲ್ಲಿ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಲಿದ್ದರೆ, ಮಧ್ಯಮ ವೇಗಿ ವಹಾಬ್ ರಿಯಾಜ್ ಅವರನ್ನು ಕೈಬಿಟ್ಟು, ವೇಗಿ ಅಬ್ದುಲ್ ರವೂಫ್‌ಗೆ ಸ್ಥಾನ ನೀಡಲು ಆತಿಥೇಯ ಪಾಕಿಸ್ತಾನ ನಿರ್ಧರಿಸಿದೆ.
|