ಏಷ್ಯಾ ಕಪ್ ಟೂರ್ನಿಯಲ್ಲಿ ಉಳಿಯಬೇಕಿದ್ದರೆ ಗೆಲ್ಲಲೇ ಬೇಕಿರುವ ಅನಿವಾರ್ಯತೆಗೆ ಸಿಲುಕಿದ ಆತಿಥೇಯ ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸಾಂಪ್ರದಾಯಿಕ ಎದುರಾಳಿ ಭಾರತ, ನಾಯಕ ಧೋನಿ ಮತ್ತು ರೋಹಿತ್ ಶರ್ಮಾ ಅವರ ಶತಕಾರ್ಧಗಳ ನೆರವಿನಿಂದ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಮಾಡಿದೆ.
ಧೋನಿ ಅವರು ಸೊಹೇಲ್ ತನ್ವೀರ್‌ಗೆ ವಿಕೆಟ್ ಒಪ್ಪಿಸುವ ಮುನ್ನ ತಾಳ್ಮೆಯಿಂದ ಆಟವಾಡಿ 96 ಎಸೆತಗಳಲ್ಲಿ 76 ರನ್ ಸೇರಿಸಿ ತಂಡಕ್ಕೆ ಆಧಾರವಾದರೆ, ರೋಹಿತ್ ಶರ್ಮಾ ಕೂಡ ಅರ್ಧ ಶತಕದ ಬೆಂಬಲ ನೀಡಿದರು.
ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ, ಉತ್ತಮ ಆರಂಭ ಪಡೆದ ಭಾರತವು ವೀರೇಂದ್ರ ಸೆಹ್ವಾಗ್ ಅವರ ಬ್ಯಾಟಿಂಗ್ ಅಬ್ಬರ (33 ಎಸೆತಗಳಲ್ಲಿ 49 ರನ್, 6 ಬೌಂಡರಿ, 2 ಸಿಕ್ಸರ್) ಮತ್ತು ಗೌತಮ್ ಗಂಭೀರ್ (32 ಎಸೆತ, 35 ರನ್, ನಾಲ್ಕು ಬೌಂಡರಿ) ಅವರ ಬಿಡುಬೀಸುಗೆಯ ನೆರವಿನಿಂದ ಕೇವಲ 38 ಎಸೆತಗಳಲ್ಲೇ 50 ರನ್ ಪೇರಿಸಿತ್ತು. ಆದರೆ 10.3 ಓವರುಗಳಲ್ಲಿ 88 ರನ್ ಒಟ್ಟುಗೂಡಿಸಿದ್ದ ಈ ಜೋಡಿ ಬೇರ್ಪಟ್ಟಿದ್ದು ಗಂಭೀರ್ ಅವರು ಇಫ್ತಿಕಾರ್ ಅಂಜುಮ್ ಅವರ ಎಸೆತದಲ್ಲಿ ಶಾಹಿದ್ ಅಫ್ರಿದಿಗೆ ಕ್ಯಾಚ್ ನೀಡಿ ಹೊರನಡೆದಾಗ.
ನಂತರ ಮಧ್ಯಮ ಕ್ರಮಾಂಕದ ನಾಲ್ಕು ವಿಕೆಟುಗಳು ಲಗುಬಗನೆ ಉರುಳಿದವು. 12ನೇ ಓವರಿನಲ್ಲಿ ವೀರೇಂದ್ರ ಸೇಹ್ವಾಗ್ ಔಟಾದರೆ, ಸುರೇಶ್ ರೈನಾ ಕೇವಲ 1 ರನ್ ಮಾಡಿ ಅಬ್ದುರ್ ರವೂಫ್ ಎಸೆತದಲ್ಲಿ ಸಲ್ಮಾನ್ ಬಟ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆ ಬಳಿಕ ಬಂದ ಯುವರಾಜ್ ಸಿಂಗ್ ತ್ವರಿತಗತಿಯಲ್ಲಿ 37 ರನ್ (32 ಎಸೆತ, 4 ಬೌಂಡರಿ, ಒಂದು ಸಿಕ್ಸರ್) ಸೇರಿಸಿ ಔಟಾದರು. 129 ರನ್ನಿಗೆ ನಾಲ್ಕು ವಿಕೆಟ್ ಪತನವಾಗಿದ್ದರೂ, ರನ್ ಗತಿಯಲ್ಲಿ ವ್ಯತ್ಯಯ ಕಂಡುಬರಲಿಲ್ಲ.
ಆದರೆ ಕುಸಿಯುವಂತಿದ್ದ ತಂಡಕ್ಕೆ ಆಧಾರ ನೀಡಿದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ (58 ರನ್, 71 ಎಸೆತ, 4 ಬೌಂಡರಿ), ತಾಳ್ಮೆಯಿಂದ ಆಟವಾಡಿ ವಿಕೆಟ್ ಉರುಳದಂತೆ ನೋಡಿಕೊಂಡರು. ನಿಧಾನವಾಗಿಯೇ ರನ್ ಸಂಗ್ರಹಿಸತೊಡಗಿದ ಅವರ ಜತೆಯಾಟದ ಆರಂಭದಲ್ಲಿ ರನ್ ಗತಿ ಕುಸಿತ ಕಂಡಿತಾದರೂ, ಚೇತರಿಸಿಕೊಂಡಿತು.
ಪಾಕ್ ಪರವಾಗಿ ಇಫ್ತಿಕಾರ್ ಅಂಜುಮ್ ಅವರು 52 ರನ್ನಿಗೆ 3 ಪ್ರಮುಖ ವಿಕೆಟ್‌ಗಳನ್ನು (ಗಂಭೀರ್, ಯುವರಾಜ್, ರೋಹಿತ್ ಶರ್ಮಾ) ಕಿತ್ತು ಮಿಂಚಿದರು. ಅಬ್ದುಲ್ ರವೂಫ್ 66 ರನ್ನಿಗೆ 2 ವಿಕೆಟ್ ಕಬಳಿಸಿದರು.
ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಪಾಕಿನ ಸಯೀದ್ ಅಜ್ಮಾಲ್ ಅವರು ಯೂಸುಫ್ ಪಠಾಣ್ ಅವರನ್ನು ಶೂನ್ಯಕ್ಕೇ ವಾಪಸ್ ಕಳುಹಿಸುವ ಮೂಲಕ ಚೊಚ್ಚಲ ವಿಕೆಟ್ ಪಡೆದರು.
ಭಾರತೀಯರಿಂದ ನಿರ್ದಯವಾಗಿ ದಂಡಿಸಿಕೊಂಡವರೆಂದರೆ ಐಪಿಎಲ್ ಹೀರೋ ಸೊಹೇಲ್ ತನ್ವೀರ್. ಮೊದಲ ನಾಲ್ಕು ಓವರುಗಳಲ್ಲಿ 43 ರನ್ ನೀಡಿದ್ದ ಅವರು, ಅಂತಿಮವಾಗಿ 10 ಓವರುಗಳಲ್ಲಿ 87 ರನ್ ನೀಡಿ ಧೋನಿ ವಿಕೆಟ್ ಪಡೆದರು.
|