ಗೆವಿನ್ ಹ್ಯಾಮಿಲ್ಟನ್ ಅವರ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಶತಕದ ನೆರವಿನಿಂದ ಬುಧವಾರದ ತ್ರಿಕೋನ ಸರಣಿಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸ್ಕಾಟ್ಲೆಂಡ್ 5 ವಿಕೆಟ್ ಜಯ ಸಾಧಿಸಿತು.
ಯಾರ್ಕ್‌ಶೈರ್ ಹಾಗೂ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗನಾಗಿರುವ ಹ್ಯಾಮಿಲ್ಟನ್, 152 ಎಸೆತಗಳಲ್ಲಿ 115 ರನ್ ದಾಖಲಿಸಿ, ಐರ್ಲೆಂಡ್ 8 ವಿಕೆಟ್ ಕಳೆದುಕೊಂಡು ಗಳಿಸಿದ್ದ 210 ರನ್ ಅನ್ನು ಸ್ಕಾಟ್ಲೆಂಡ್ ಇನ್ನೂ 15 ಎಸೆತ ಇರುವಂತೆಯೇ ದಾಟುವಲ್ಲಿ ನೆರವಾದರು.
ಈ ವಿಜಯದೊಂದಿಗೆ ತ್ರಿಕೋನ ಸರಣಿಯ ಫೈನಲಿನಲ್ಲಿ ಸ್ಕಾಟ್ಲೆಂಡ್ ತಂಡವು ನ್ಯೂಜಿಲೆಂಡನ್ನು ಎದುರಿಸಲಿದೆ. ಸೋಮವಾರದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಐರ್ಲೆಂಡನ್ನು 290 ರನ್ನುಗಳ ದಾಖಲೆಯ ಅಂತರದಿಂದ ಕೆಡಹಿತ್ತು. ಈ ವಿಜಯವು ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಅತ್ಯಂತ ಗರಿಷ್ಠ ಅಂತರದ ಗೆಲುವು ಆಗಿ ಇತಿಹಾಸ ಸೇರಿತ್ತು.
ಸ್ಕಾಟ್ಲೆಂಡ್ ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡು ಆತಂಕದಲ್ಲಿ ಸಿಲುಕಿತ್ತು. ಆದರೆ ಹ್ಯಾಮಿಲ್ಟನ್ ಮತ್ತು ಸ್ಥಳೀಯರಾದ ಕಾಲಿನ್ ಸ್ಮಿತ್ (59) ಅವರು 3ನೇ ವಿಕೆಟಿಗೆ 122 ರನ್ ಜತೆಯಾಟ ನೀಡಿ ತಂಡವನ್ನು ಆಧರಿಸಿದರು.
ಇದಕ್ಕೆ ಮೊದಲು, ಸ್ಕಾಟ್ಲೆಂಡ್ ಪರವಾಗಿ, ದಕ್ಷಿಣ ಆಫ್ರಿಕಾ ಸಂಜಾತ ಮತ್ತು ವಾರ್ಸಿಸ್ಟರ್‌ಶೈರ್ ವೇಗದ ಬೌಲರ್ ಡೆವಾಲ್ಡ್ ನೆಲ್ ಅವರು 25 ರನ್ನಿಗೆ 4 ವಿಕೆಟ್ ಕಿತ್ತು ಮಿಂಚಿದ್ದರು.
|