ಮುನ್ನುಗ್ಗುತ್ತಿದ್ದ ಯೂನಿಸ್ ಖಾನ್ ಅವರೆದುರು ನಮ್ಮ ಬೌಲರುಗಳು ನಿಸ್ಸಹಾಯಕರಾದರು ಎಂದು ತಿಳಿಸಿರುವ ಭಾರತೀಯ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ತಂಡದಲ್ಲಿ ಅನುಭವಿ ಸ್ಪಿನ್ನರ್ ಕೊರತೆಯಿದೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ.
ಬುಧವಾರದ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ ಯೂನಿಸ್ ಖಾನ್, ಭಾರತ ಒಡ್ಡಿದ್ದ 309 ರನ್ನುಗಳ ಗುರಿಯನ್ನು ಬೆನ್ನಟ್ಟಿ, ಪಾಕಿಸ್ತಾನಕ್ಕೆ ಎಂಟು ವಿಕೆಟ್ ಸಮಗ್ರ ವಿಜಯ ದೊರಕಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
ಯೂನಿಸ್ ಖಾನ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಅವರ ವಿರುದ್ಧ ಬೌಲರುಗಳು ಎಲ್ಲ ತಂತ್ರಗಳನ್ನು ಪ್ರಯತ್ನಿಸಿದರಾದರೂ, ಯೂನಿಸ್ ಯಾವತ್ತೂ ಅವರಿಗಿಂತ ಮುಂದಿದ್ದರು. ಅವರೆಂದಿಗೂ ಒತ್ತಡವನ್ನು ಹೇರಿಕೊಳ್ಳಲೇ ಇಲ್ಲ ಎಂದು ಧೋನಿ ಶ್ಲಾಘಿಸಿದರು.
ಇದೀಗ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಸ್ಥಾನ ಪಡೆಯಬೇಕಿದ್ದರೆ ಭಾರತಕ್ಕೆ ಶ್ರೀಲಂಕಾ ವಿರುದ್ಧದ ಸೂಪರ್ ಫೋರ್ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
ಇದು ಉತ್ತಮ ಬ್ಯಾಟಿಂಗ್ ಪಿಚ್ ಆಗಿದ್ದು, 308 ರನ್ನುಗಳು ಕೂಡ ಸಮರ್ಥಿಸಿಕೊಳ್ಳಲು ಕಡಿಮೆಯೇ. ನಾವು ಏನೆಲ್ಲಾ ಪ್ರಯತ್ನ ಮಾಡಿದರೂ ಯಾವುದೂ ಫಲ ನೀಡಲಿಲ್ಲ. ನಾನು ಮತ್ತು ರೋಹಿತ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಬೇಗನೇ ವಿಕೆಟ್‌ಗಳು ಪತನವಾಗಿದ್ದರಿಂದ ನಮ್ಮ ಮೇಲೆ ಒತ್ತಡವಿತ್ತು. ಇಂಥ ಟ್ರ್ಯಾಕ್‌ಗಳಲ್ಲಿ ವಿಕೆಟ್ ಕೀಳುವುದೇ ವಿಜಯಕ್ಕೆ ಅತ್ಯಂತ ಪ್ರಧಾನವಾಗಿರುತ್ತದೆ ಎಂದು ಧೋನಿ ನುಡಿದರು.
ಇಂಥ ಪಿಚ್‌ಗಳಿಗೆ ಗುಣಮಟ್ಟದ ಮತ್ತು ಅನುಭವಿ ಸ್ಪಿನ್ನರ್‌ಗಳ ಅಗತ್ಯವಿದೆ ಎಂದೂ ಅವರು ನುಡಿದರು.
|