ಜಯಸೂರ್ಯ ಅವರ ಆರಂಭಿಕ ಅಬ್ಬರವನ್ನು ಮುಂದುವರಿಸಲು ಭಾರತೀಯ ಬೌಲರುಗಳು ಅವಕಾಶ ನೀಡದಿದ್ದರೂ, ಮಧ್ಯಮ ಕ್ರಮಾಂಕದ ಕಪುಗೆಡೆರಾ, ಜಯವರ್ಧನೆ, ಚಾಮರ ಸಿಲ್ವ ಅವರ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾವು, ಫೈನಲಿಗೇರಲು ಈ ಪಂದ್ಯವನ್ನು ಗೆದ್ದೇ ತೀರಬೇಕಿರುವ ಭಾರತದ ಗೆಲುವಿಗೆ 309 ರನ್ ಗುರಿ ಒಡ್ಡಿದೆ.
ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, ನಿಗದಿತ 50 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 308 ರನ್ ಕಲೆಹಾಕಿತು.
ಲಂಕಾ ಮೊದಲ ವಿಕೆಟನ್ನು ಸಂಗಕ್ಕಾರ (7) ರೂಪದಲ್ಲಿ ಬೇಗನೇ ಕಳೆದುಕೊಂಡಿತು. ಆದರೆ ತಮ್ಮ ಎಂದಿನ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ಸನತ್ ಜಯಸೂರ್ಯ 37 ಎಸೆತಗಳಲ್ಲಿ 43 ರನ್ ಸಿಡಿಸಿ, ಪಂದ್ಯದಲ್ಲಿ ಇಶಾಂತ್ ಶರ್ಮಾಗೆ ಎರಡನೇ ಬಲಿಯಾದರು. ಇದರಲ್ಲಿ 8 ಬೌಂಡರಿಗಳು ಸೇರಿದ್ದವು.
ನಾಯಕ ಜಯವರ್ಧನೆ ಕೂಡ ಆತಂಕಕಾರಿಯಾಗಿ ಕಂಡುಬಂದು ಜಯಸೂರ್ಯ ಜತೆ ಎರಡನೇ ವಿಕೆಟಿಗೆ 42 ಎಸೆತಗಳಲ್ಲೇ 50 ರನ್ ಸೇರಿಸಲು ನೆರವಾದರು. ಜಯಸೂರ್ಯ ವಿಕೆಟ್ ಒಪ್ಪಿಸಿದ ಬಳಿಕ ನಾಯಕ ಜಯವರ್ಧನೆ ಅವರನ್ನು ಕೂಡಿಕೊಂಡ ಕಪುಗೆಡೆರಾ (78 ಎಸೆತದಲ್ಲಿ 75 ರನ್) ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು. ಅವರ ಆಕರ್ಷಕ ಇನ್ನಿಂಗ್ಸಿನಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು.
ಅವರು ಪ್ರವೀಣಿ ಕುಮಾರ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆಗಿ ವಿಕೆಟ್ ಒಪ್ಪಿಸಿದಾಗ, ಶ್ರೀಲಂಕಾವು 37.3 ಓವರುಗಳಲ್ಲಿ 217 ರನ್ ಮಾಡಿ ಭದ್ರ ಸ್ಥಿತಿಯಲ್ಲಿತ್ತು. ನಂತರ ಉತ್ತಮ ಶತಕಾರ್ಧ ದಾಖಲಿಸಿದ ಚಾಮರ ಸಿಲ್ವ (50) ಅವರು 46ನೇ ಓವರಿನಲ್ಲಿ ಆರ್.ಪಿ.ಸಿಂಗ್-ಧೋನಿ ಅವರ ರನೌಟ್ ಕೈಚಳಕಕ್ಕೆ ಬಲಿಯಾದರು.
ದಿಲ್ಶಾನ್ ಹೆಚ್ಚು ಹೊತ್ತು ನಿಲ್ಲದೆ 15 ರನ್ ಮಾಡಿದರು. ವೀರರತ್ನೆ ಮತ್ತು ಮಿರಾಂಡೋ ಕಡಿಮೆ ಎಸೆತಗಳಲ್ಲಿ ತಲಾ 23 ರನ್ ಮಾಡಿ ತಂಡದ ಮೊತ್ತ ಏರಿಸುವಲ್ಲಿ ನೆರವಾದರೆ, ಕೊನೆಯಲ್ಲಿ ಕುಲಶೇಖರ (6) ಹಾಗೂ ಮುರಳೀಧರನ್ (1) ಅಜೇಯರಾಗುಳಿದರು.
ಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡಿದವರು ಇಶಾಂತ್ ಶರ್ಮಾ. 10 ಓವರು ಬೌಲ್ ಮಾಡಿದ ಅವರು 55 ರನ್ ನೀಡಿ 2 ವಿಕೆಟ್ ಕಿತ್ತರು. ಪ್ರಗ್ಯಾನ್ ಓಝಾ 55/1 ವಿಕೆಟ್ ಕಿತ್ತರೆ, ಆರ್.ಪಿ.ಸಿಂಗ್ ನಿಯಂತ್ರಿತ ಬೌಲಿಂಗ್ ನಡೆಸಿ 10 ಓವರುಗಳಲ್ಲಿ 44 ರನ್ ನೀಡಿ 1 ವಿಕೆಟ್ ಕಬಳಿಸಿದರು.
ಇರ್ಫಾನ್ ಪಠಾಣ್ ಕೊಂಚ ದುಬಾರಿಯಾಗಿ, 10 ಓವರುಗಳಲ್ಲಿ 80 ರನ್ ನೀಡಿ 1 ವಿಕೆಟ್ ಕಿತ್ತರು. ಪ್ರವೀಣ್ ಕುಮಾರ್ 36ಕ್ಕೆ 1 ವಿಕೆಟ್ ತಮ್ಮದಾಗಿಸಿಕೊಂಡರು.
|