ಓವಲ್ ಟೆಸ್ಟ್ ವಿವಾದದಲ್ಲಿ ನಾಲ್ಕು ಪಂದ್ಯಗಳ ನಿಷೇಧ ವಿಧಿಸಿದ್ದಕ್ಕಾಗಿ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರು ಐಸಿಸಿಯಿಂದ ಪರಿಹಾರ ಕೋರಿದ್ದಾರೆ.
ಇಂಗ್ಲೆಂಡ್-ಪಾಕಿಸ್ತಾನ ಮಧ್ಯೆ 2006ರಲ್ಲಿ ನಡೆದ ಈ ವಿವಾದಾತ್ಮಕ ಪಂದ್ಯದ ಫಲಿತಾಂಶವನ್ನು ಹಿಂತೆಗೆದುಕೊಂಡಿರುವ ಐಸಿಸಿ ನಿರ್ಧಾರವನ್ನು ಸ್ವಾಗತಿಸಿದ ಅಂದಿನ ಪಾಕ್ ತಂಡದ ನಾಯಕ ಇಂಜಮಾಮ್, ಅಂದು ಇಂಗ್ಲೆಂಡ್ ಪರವಾಗಿ ಪಂದ್ಯವನ್ನು ನೀಡಿದ್ದು ಯಾವತ್ತೂ ನ್ಯಾಯಯುತವಾಗಿರಲಿಲ್ಲ ಎಂದು ಹೇಳಿದ್ದಾರೆ.
ಈ ಪಂದ್ಯದ ಫಲಿತಾಂಶ ಯಾವತ್ತಿಗೂ ನನ್ನ ಮನಸ್ಸನ್ನು ಚುಚ್ಚುತ್ತಿತ್ತು. ನಾವು ಗೆಲ್ಲುವ ಸ್ಥಿತಿಯಲ್ಲಿದ್ದರೂ, ಒಂದು ತಪ್ಪಿನಿಂದಾಗಿ ಗೆಲ್ಲುವ ಅವಕಾಶವನ್ನೇ ಕಿತ್ತುಕೊಳ್ಳಲಾಯಿತು ಎಂದು ಹೇಳಿದರು.
ಐಸಿಸಿ ಅಧಿಕಾರಿಗಳು ನಾನು ಮತ್ತು ನಮ್ಮ ತಂಡವು ಯಾವುದೇ ಚೆಂಡು ವಿರೂಪಗೊಳಿಸುವುದರಲ್ಲಿ ಭಾಗಿಯಾಗಿಲ್ಲ ಎಂದು ದೋಷಮುಕ್ತಿ ನೀಡಿತ್ತು. ಆದರೆ ಅಂಪೈರ್ ಡೆರೆಲ್ ಹೇರ್ ಇದನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂದ ಅವರು, ಕ್ರೀಡೆಗೆ ಅಪಖ್ಯಾತಿ ತಂದಿದ್ದಕ್ಕಾಗಿ ನನ್ನ ಮೇಲೆ ನಿಷೇಧ ಹೇರಲಾಯಿತು. ಇದೀಗ ಐಸಿಸಿಯು ಫಲಿತಾಂಶವನ್ನು ಹಿಂತೆಗೆದುಕೊಂಡಿದೆ. ನನಗಾದ ಕ್ರಿಕೆಟ್ ಆಟದ ನಷ್ಟಕ್ಕೆ ಯಾರು ಪರಿಹಾರ ನೀಡುತ್ತಾರೆ ಎಂದು ನೋಡಬೇಕು. ಈ ನಿಷೇಧದಿಂದಾಗಿ 2006 ಚಾಂಪಿಯನ್ಸ್ ಟ್ರೋಫಿ ಕ್ರಿಕೆಟನ್ನೂ ನಾನು ಕಳೆದುಕೊಳ್ಳಬೇಕಾಯಿತು ಎಂದು ಅವರು ವಿಷಾದದಿಂದ ನುಡಿದಿದ್ದಾರೆ.
ಐಸಿಸಿ ನಿರ್ಧಾರದ ಬಗ್ಗೆ ಇಂಜಮಾಮ್‌ಗೆ ಮೆಚ್ಚುಗೆಯಿದ್ದರೂ, ಹೇರ್ ಅವರು ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಲು ಅವಕಾಶ ನೀಡಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
|