ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಂಡಿಗರ ಎದುರು ಆಸೀಸ್‌ಗೆ 1 ರನ್ ರೋಮಾಂಚಕ ಜಯ  Search similar articles
ಶೇನ್ ವಾಟ್ಸನ್ ಅವರ ಕೈಚಳಕ, ಗೆಲುವಿನ ಗಡಿ ದಾಟಿಸಲು ದೆನೇಶ್ ರಾಮಡಿನ್ ಮತ್ತು ಡರೆನ್ ಸಾಮಿ ಅವರ ಕೊನೆ ಕ್ಷಣದ ವೈಫಲ್ಯದಿಂದಾಗಿ ಆಸ್ಟ್ರೇಲಿಯಾವು ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಒಂದು ರನ್ ಅಂತರದಿಂದ ರೋಮಾಂಚಕಾರಿಯಾಗಿ ಸೋಲಿಸಿತು.

ಆಸ್ಟ್ರೇಲಿಯಾವು ವಿಂಡೀಸ್ ಗೆಲುವಿಗೆ 50 ಓವರುಗಳಲ್ಲಿ 283 ರನ್ ಗುರಿ ಒಡ್ಡಿತ್ತು. ಇದನ್ನು ಸಮರ್ಥವಾಗಿಯೇ ಬೆಂಬತ್ತಿದ ವಿಂಡೀಸ್ ಗೆಲುವಿಗೆ ಕೊನೆಯ ಓವರಿನಲ್ಲಿ 8 ರನ್ ಮಾತ್ರ ಬೇಕಿತ್ತು. ಆದರೆ ಅಂತಿಮ ಓವರ್ ಬೌಲ್ ಮಾಡಿದಜ ವಾಟ್ಸನ್ ಕೇವಲ 6 ರನ್ ಬಿಟ್ಟುಕೊಟ್ಟು ಜಿಪುಣತನ ತೋರಿದ ಪರಿಣಾಮ ಆಸೀಸ್‌ಗೆ ರೋಮಾಂಚಕ ವಿಜಯ.

ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಪ್ರವಾಸೀ ಆಸ್ಟ್ರೇಲಿಯಾವು 4-0 ಅಂತರದ ಗೆಲುವು ದಾಖಲಿಸಿತಲ್ಲದೆ, ವಿಂಡಿಗರನ್ನು ಅವರ ನೆಲದಲ್ಲೇ ಮಣಿಸಿ ಸರಣಿ ಸ್ವೀಪ್ ಮಾಡಿಕೊಳ್ಳುವ ಅಪರೂಪದ ಖ್ಯಾತಿಗೆ ಪಾತ್ರವಾಗುವತ್ತ ದೃಢ ಹೆಜ್ಜೆ ಇರಿಸಿತು.

2005ರಲ್ಲಿ ದಕ್ಷಿಣ ಆಫ್ರಿಕಾ (5-0) ಹಾಗೂ ಪಾಕಿಸ್ತಾನ (3-0)ಗಳು ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದವು.

ಎಸೆತಕ್ಕೊಂದರಂತೆ 92 ರನ್ ಮಾಡಿದ ವಿಂಡೀಸ್ ನಾಯಕ ಕ್ರಿಸ್ ಗೇಯ್ಲ್, 79 ಎಸೆತದಿಂದ 63 ರನ್ ಸೇರಿಸಿದ ರಾಮನರೇಶ್ ಶರವಣ್ ಹಾಗೂ 71 ಎಸೆತದಲ್ಲಿ 53 ರನ್ ಮಾಡಿದ ಶಿವನಾರಾಯಣ್ ಚಂದ್ರಪಾಲ್ ಅವರ ಆಟ ಮುಂದುವರಿಯುತ್ತಿರುವಾಗ ಆಸೀಸ್ ಈ ಸರಣಿಯ ಮೊದಲ ಸೋಲು ಕಾಣಲಿದೆ ಎಂದೇ ನಂಬಲಾಗಿತ್ತು.

ಆದರೆ ಸಕಾಲದಲ್ಲಿ ಆಸ್ಟ್ರೇಲಿಯಾ ಪ್ರಮುಖ ವಿಕೆಟ್ ಕಿತ್ತು ಪಂದ್ಯದ ಗತಿ ಬದಲಿಸಿತು. ಬ್ರೆಟ್ ಲೀ ಅವರು 10 ಓವರುಗಳಲ್ಲಿ 64 ರನ್ ನೀಡಿ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು. ಕ್ಸೇವಿಯರ್ ಮಾರ್ಷಲ್ ಅವರನ್ನು ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿ ಬ್ರೆಟ್ ಲೀ ಶೂನ್ಯಕ್ಕೇ ವಾಪಸ್ ಕಳುಹಿಸಿದ ನಂತರ, ಗೇಯ್ಲ್ ಮತ್ತು ಶರವಣ್ ಎರಡನೇ ವಿಕೆಟಿಗೆ 137 ರನ್ ಸೇರಿಸಿದರು. ಎರಡನೇ ಬಾರಿ ಬೌಲಿಂಗ್ ದಾಳಿಗಿಳಿದ ಬ್ರೆಟ್ ಲೀ 24ನೇ ಓವರಿನಲ್ಲಿ ಶರವಣ್ ಅವರ ಬ್ಯಾಟಿನಿಂದ ಕ್ಯಾಚ್ ಸಿಡಿಯುವಂತೆ ಮಾಡಿ ಈ ಜೋಡಿಯನ್ನು ಬೇರ್ಪಡಿಸಿದರು.

ಬಳಿಕ ಚಂದ್ರಪಾಲ್ ಅವರು ನಾಯಕನನ್ನು ಕೂಡಿಕೊಂಡಾಗ ಆಸೀಸ್ ಮತ್ತೆ ಆತಂಕಕ್ಕೀಡಾಯಿತು. ಅವರಿಬ್ಬರೂ 3ನೇ ವಿಕೆಟಿಗೆ 50 ರನ್ ಸೇರಿಸಿದರು. ಆದರೆ 34ನೇ ಓವರಿನಲ್ಲಿ ಶೇನ್ ವಾಟ್ಸನ್ ತಮ್ಮ ಕೈಚಳಕ ತೋರಿ ಗೇಯ್ಲ್ ಅವರಿಂದ ಕ್ಯಾಚ್ ಕೊಡಿಸಿದರು.

ನಾಲ್ಕನೇ ವಿಕೆಟಿಗೆ ಚಂದ್ರಪಾಲ್ ಮತ್ತು ಡ್ವೇಯ್ನ್ ಬ್ರಾವೋ ಅವರು ಮತ್ತೆ ಚಿಗಿತುಕೊಂಡು 59 ರನ್ ಸೇರಿಸಿದಾಗ ಆಸೀಸ್ ಮತ್ತೆ ಆತಂಕದ ಪರಿಸ್ಥಿತಿ ಎದುರಿಸಿತು. ಆದರೆ 43ನೇ ಓವರಿನಲ್ಲಿ ಜೇಮ್ಸ್ ಹೋಪ್ಸ್ ಅವರು 31 ರನ್ ಮಾಡಿದ್ದ ಬ್ರಾವೋ ಅವರನ್ನು ಪೆವಿಲಿಯನ್‌ಗೆ ಅಟ್ಟಿ ಆಸೀಸ್ ಭಾರ ಕಡಿಮೆ ಮಾಡಿದರು.

ಆಸ್ಟ್ರೇಲಿಯಾ ಆ ಮೇಲೆ ಎರಡು ಮಹತ್ವದ ಹೊಡೆತ ನೀಡಿತು. ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿ 9 ರನ್ ಮಾಡಿದ್ದ ಶಾನ್ ಫಿಂಡ್ಲೇ ಅವರನ್ನು ಲೀ 48ನೇ ಓವರಿನಲ್ಲಿ ಬಲಿ ತೆಗೆದುಕೊಂಡರೆ, ಮುಂದಿನ ಓವರಿನಲ್ಲಿ ನಥಾನ್ ಬ್ರಾಕೆನ್ ಅವರು ಚಂದ್ರಪಾಲ್ ವಿಕೆಟನ್ನು ಬುಟ್ಟಿಗೆ ಹಾಕಿಕೊಂಡರು. ಆಗ ವಿಂಡೀಸ್ ಮೊತ್ತ 6 ವಿಕೆಟಿಗೆ 275 ರನ್.

ಆಗ ಕ್ರೀಸಿನಲ್ಲಿದ್ದ ರಾಮಡಿನ್ ಮತ್ತು ಸಾಮಿ ಜೋಡಿಯು ಗೆಲುವಿಗೆ 6 ಎಸೆತಗಳಲ್ಲಿ ಬೇಕಾಗಿದ್ದ 8 ರನ್ ಒಟ್ಟುಗೂಡಿಸಲು ವಿಫಲವಾಯಿತು.

ಇದಕ್ಕೆ ಮೊದಲು, ಆಂಡ್ರ್ಯೂ ಸೈಮಂಡ್ಸ್ ಅವರ 87, ಡೇವಿಡ್ ಹಸ್ಸೀ ಅವರ 50 ರನ್‌ಗಳ ನೆರವಿನಿಂದ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದ ಆಸ್ಟ್ರೇಲಿಯಾವು ನಿಗದಿತ 50 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 282 ರನ್ ಕಲೆ ಹಾಕಿತ್ತು. 29ನೇ ಓವರಿನಲ್ಲಿ ಆಸೀಸ್ 4 ವಿಕೆಟ್ ಕಳೆದುಕೊಂಡು 124 ರನ್ ಮಾಡಿತ್ತು. ಸೈಮಂಡ್ಸ್ ಮತ್ತು ಡೇವಿಡ್ ಹಸ್ಸೀ ಐದನೇ ವಿಕೆಟಿಗೆ 127 ರನ್ ಸೇರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಒದಗಿಸಿದ್ದರು.

ಆಸೀಸ್ ಆರಂಭ ಉತ್ತಮವಾಗೇನಿರಲಿಲ್ಲ. ಅಬ್ಬರದ ದಾಂಡಿಗರಾದ ಶೇನ್ ವಾಟ್ಸನ್ 20, ಶಾನ್ ಮಾರ್ಷ್ 16 ರನ್ ಮಾಡಲಷ್ಟೇ ಶಕ್ತರಾಗಿ, 12ನೇ ಓವರಿನಲ್ಲಿ ಆಸೀಸ್ ಮೊತ್ತ 2 ವಿಕೆಟಿಗೆ 56 ಇತ್ತು. ರಿಕಿ ಪಾಂಟಿಂಗ್ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ಆಸೀಸ್ ತಂಡವನ್ನು ಏಕದಿನ ಪಂದ್ಯದಲ್ಲಿ ಮುನ್ನಡೆಸುವ ಜವಾಬ್ದಾರಿ ಹೊತ್ತ ಮೈಕೆಲ್ ಕ್ಲಾರ್ಕ್ (36) ಅವರು ಮೈಕ್ ಹಸ್ಸೀ ಅವರನ್ನು ಕೂಡಿಕೊಂಡು, ಮೂರನೇ ವಿಕೆಟಿಗೆ 60 ರನ್ ಸೇರಿಸಿ, ವಿಂಡೀಸ್ ಎಡಗೈ ಸ್ಪಿನ್ನರ್ ನಿಕಿತ ಮಿಲ್ಲರ್ ಅವರ ಚೊಚ್ಚಲ ವಿಕೆಟ್ ಆಗಿ ಔಟಾದರು.

ವಿಂಡೀಸ್ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದ್ದು, ಆಂಡ್ರೆ ಫ್ಲೆಚರ್ ಮತ್ತು ಸುಲೈಮಾನ್ ಬೆನ್ ಜಾಗದಲ್ಲಿ ಫಿಂಡ್ಲೇ ಮತ್ತು ಮಿಲ್ಲರ್ ಅವರಿಗೆ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡುವ ಅವಕಾಶ ಕಲ್ಪಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಒಂದು ಬದಲಾವಣೆಯಿತ್ತು. ಗಾಯಾಳು ಪಾಂಟಿಂಗ್ ಜಾಗದಲ್ಲಿ ಮೈಕೆಲ್ ಹಸ್ಸೀ ಅವರ ಕಿರಿಯ ಸಹೋದರ ಡೇವಿಡ್ ಹಸ್ಸೀ ಅವರಿಗೆ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಅವಕಾಶ ದೊರೆತಿತ್ತು.
ಮತ್ತಷ್ಟು
ಅಖ್ತರ್ ಮೇಲಿನ ನಿಷೇಧ ರದ್ದು: ದಂಡ ಕಡ್ಡಾಯ
ಭಾರತಕ್ಕೆ ಶರಣಾದ ಲಂಕೆ: ಪಾಕಿಸ್ತಾನೀಯರಿಗೆ ಶಂಕೆ
ಓವಲ್ ವಿವಾದ: ಪರಿಹಾರದ ನಿರೀಕ್ಷೆಯಲ್ಲಿ ಇಂಜಿ
ಐಸಿಸಿ: ಗಾವಸ್ಕರ್ ಸ್ಥಾನದಲ್ಲಿ ಕ್ಲೈವ್ ಲಾಯ್ಡ್
ಏಷಿಯಾ ಕಪ್: ಭಾರತ ಫೈನ‌ಲ್‌ಗೆ
309 ರನ್ ಸವಾಲು ಪೇರಿಸಿದ ಶ್ರೀಲಂಕಾ