ಏಷ್ಯಾ ಕಪ್ ಸೂಪರ್ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಶುಕ್ರವಾರ, ಪಾಕಿಸ್ತಾನವು ಬಾಂಗ್ಲಾದೇಶವನ್ನು 10 ವಿಕೆಟ್‌ಗಳ ಭರ್ಜರಿ ಅಂತರದಿಂದ ಸೋಲಿಸಿ, ಟೂರ್ನಿಯ ತನ್ನ ಅಭಿಯಾನಕ್ಕೆ ಮಂಗಳ ಹಾಡಿತು.
ಪಾಕಿಸ್ತಾನದ ಆರಂಭಿಕ ಆಟಗಾರ ಸಲ್ಮಾನ್ ಬಟ್ (56) ಹಾಗೂ ನಾಸಿರ್ ಜಮ್ಶೆಡ್ (52) ಅವರು ಅಜೇಯವಾಗಿಯೇ ಉಳಿದು, ಗೆಲುವಿಗೆ ಬೇಕಾಗಿದ್ದ 116 ರನ್ನುಗಳನ್ನು ಕೇವಲ 19.4 ಓವರುಗಳಲ್ಲಿ ಸಂಪಾದಿಸಿದರು.
ಈ ಮುನ್ನ, ಪಾಕಿಸ್ತಾನವು ಕಠಿಣವಾದ ಬೌಲಿಂಗ್ ದಾಳಿ ಸಂಘಟಿಸಿ ಬಾಂಗ್ಲಾ ತಂಡವನ್ನು ಕೇವಲ 38.2 ಓವರುಗಳಲ್ಲಿ 116 ರನ್ನುಗಳಿಗೆ ನಿಯಂತ್ರಿಸಿತ್ತು. ಅಬ್ದುರ್ ರವೂಫ್ 24/3 ಹಾಗೂ ರಾವ್ ಇಫ್ತಿಕಾರ್ 20/2 ಮಿಂಚಿದರು.
ಟಾಸ್ ಗೆದ್ದ ಬಾಂಗ್ಲಾ ತಂಡದ ನಾಯಕ ಮೊಹಮದ್ ಅಶ್ರಫುಲ್ ನಿರ್ಧಾರ ಅವರಿಗೇ ಮುಳುವಾಯಿತು. ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಮಾತ್ರವೇ ಸ್ವಲ್ಪ ಪ್ರತಿರೋಧ ತೋರಿ ಇನ್ನಿಂಗ್ಸಿನ ಗರಿಷ್ಠ 26 ರನ್ ಮಾಡಿದ್ದರು.
ಇಫ್ತಿಕಾರ್ ಅವರು ಮೊದಲ ಓವರಿನಲ್ಲಿ ಮೂರು ಬೌಂಡರಿಗಳನ್ನು ಹೊಡೆಸಿಕೊಂಡರೂ, 10 ಓವರುಗಳಲ್ಲಿ ಆ ಬಳಿಕ 6 ಮೇಡನ್ ಓವರು ಎಸೆದು ಅಚ್ಚರಿ ಮೂಡಿಸಿದರು. ಉಳಿದಂತೆ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ 19 ರನ್ನಿಗೆ 2 ವಿಕೆಟ್ ಕಿತ್ತರು.
|