ಬೌಲರುಗಳು ಉತ್ಕೃಷ್ಟ ಪ್ರದರ್ಶನ ನೀಡದೇ ನಿರಾಶೆ ಮೂಡಿಸಿರುವುದರಿಂದ ಭಾರತವು ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾನುವಾರ ಬಲಿಷ್ಠ ಶ್ರೀಲಂಕಾವನ್ನು ಎದುರಿಸುವ ನಿಟ್ಟಿನಲ್ಲಿ ತನ್ನ ಬ್ಯಾಟ್ಸ್‌ಮನ್‌ಗಳ ಮೇಲೆಯೇ ಸಂಪೂರ್ಣ ಅವಲಂಬಿತವಾಗಿದ್ದರೆ, ಶ್ರೀಲಂಕಾವು ಏಷ್ಯಾ ಕಪ್ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಸ್ಪಿನ್ನರ್ ಅಜಂತಾ ಮೆಂಡಿಸ್ ಮೇಲೆ ಪೂರ್ಣ ಭರವಸೆ ಇರಿಸಿದೆ.
ಇಲ್ಲಿನ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುವ ಹೊನಲು ಬೆಳಕಿನ ಪಂದ್ಯದಲ್ಲಿ ಭಾರತ ಮತ್ತು ಹಾಲಿ ಚಾಂಪಿಯನ್ ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಭಾರತೀಯ ಬೌಲರುಗಳು ಇದುವರೆಗೆ ಸರಣಿಯಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ. ಬ್ಯಾಟಿಂಗ್ ಪಿಚ್ ಆಗಿರುವ ಕರಾಚಿ ಸ್ಟೇಡಿಯಂನಲ್ಲಿ ಇದುವರೆಗೆ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತಗಳನ್ನು ಚೇಸ್ ಮಾಡುವಲ್ಲಿ ಯಶಸ್ವಿಯೂ ಆಗಿದ್ದಾರೆ.
ಭಾನುವಾರ ನಡೆಯುವ ಪ್ರಶಸ್ತಿಗಾಗಿನ ಕಾದಾಟದಲ್ಲಿಯೂ ಇದೇ ಸಂಗತಿ ಪುನರಾವರ್ತನೆಯಾಗಬಹುದಾಗಿದ್ದು, ಭಾರತ ತಂಡವು ಬೌಲಿಂಗ್ ಮತ್ತು ಫೀಲ್ಡಿಂಗ್ ಸುಧಾರಿಸುವತ್ತ ಗಮನ ಹರಿಸಬೇಕಾಗುತ್ತದೆ.
ಮೆಂಡಿಸ್ ಅವರು ಮುರಳೀಧರನ್ ಜತೆ ಸೇರಿಕೊಂಡು ಭಿನ್ನ ಭಿನ್ನ ಶೈಲಿಗಳಿಂದ ಬ್ಯಾಟ್ಸ್‌ಮನ್‌ಗಳನ್ನು ಎದೆಗುಂದಿಸುವಲ್ಲಿ ಯಶಸ್ವಿಯಾಗಿದ್ದು, ಸರಣಿಯ ನಾಲ್ಕು ಪಂದ್ಯಗಳಲ್ಲಿ 11 ವಿಕೆಟ್ ಕಿತ್ತು ಗರಿಷ್ಠ ಅಗ್ರಗಣ್ಯರೆನಿಸಿದ್ದಾರೆ.
ಇದಲ್ಲದೆ, ಲಂಕಾ ನಾಯಕ ಮಹೇಲ ಜಯವರ್ಧನೆ ಅವರು ಭಾರತದೆದುರಿನ ಸೂಪರ್ ಫೋರ್ ಪಂದ್ಯದಲ್ಲಿ ಮೆಂಡಿಸ್ ಅವರನ್ನು ಕಣಕ್ಕಿಳಿಸದೆ ಫೈನಲ್‌ನಲ್ಲಿ ಭಾರತವು ಯೋಚನೆಯಲ್ಲಿ ಸಿಲುಕುವಂತೆ ಮಮಾಡಿದ್ದಾರೆ.
ಭಾರತಕ್ಕೆ ಸಂಬಂಧಿಸಿ, ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೇಹ್ವಾಗ್ ಅವರ ಬಿರುಸಿನ ಆರಂಭವು ಇದುವರೆಗೆ ಭಾರತಕ್ಕೆ ಅತ್ಯಂತ ಭದ್ರ ಬುನಾದಿ ಒದಗಿಸಿಕೊಟ್ಟಿದ್ದು, ಉಭಯ ಆರಂಭಿಕ ಆಟಗಾರರು ಮತ್ತೊಮ್ಮೆ ಕ್ಲಿಕ್ ಆದಲ್ಲಿ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಕಡಿಮೆಯಾಗಬಹುದು ಎಂಬುದು ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯ.
ಗಂಭೀರ್, ಸೇಹ್ವಾಗ್, ಧೋನಿ, ರೋಹಿತ್ ಶರ್ಮಾ, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಎಲ್ಲರು ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇವರ ನೆರವಿನಿಂದ ಸೂಪರ್ ಲೀಗ್ ಹಂತದಲ್ಲಿ ಭಾರತೀಯರು ಭಾರೀ ಮೊತ್ತ ಕಲೆಹಾಕಿದ್ದಾರೆ ಇಲ್ಲವೇ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಹಿಂಬಾಲಿಸಿದ್ದಾರೆ. ಸರಣಿಯಲ್ಲಿ ಅವರು ಸೋತದ್ದು ಪಾಕಿಸ್ತಾನ ವಿರುದ್ಧ ಮಾತ್ರ. ಇಲ್ಲಿ 308 ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಬೌಲರುಗಳು ವಿಫಲರಾಗಿದ್ದರು.
ಗಾಯದ ಸಮಸ್ಯೆಯಿಂದಾಗಿ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಇರ್ಫಾನ್ ಪಠಾಣ್ ಪಾಕಿಸ್ತಾನದ ವಿರುದ್ಧ ಪಂದ್ಯಕ್ಕೆ ಮರಳಿದ್ದರಾದರೂ ಅತ್ಯಂತ ದುಬಾರಿ ಎನಿಸಿದ್ದರು.
ಇದೀಗ ಪಂದ್ಯ ಗೆಲ್ಲಬೇಕಿದ್ದರೆ ಭಾರತೀಯರು ತಮ್ಮ ಬೌಲಿಂಗ್ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಪ್ರಗ್ಯಾನ್ ಓಝಾ ಕೂಡ ಶ್ರೀಲಂಕಾದ ಅಜಂತಾ ಮೆಂಡಿಸ್ ಅಥವಾ ಮುತ್ತಯ್ಯ ಮುರಳೀಧರನ್‌ರಷ್ಟು ಅಪಾಯಕಾರಿಯಾಗಿ ಮೂಡಿಬಂದಿಲ್ಲದಿರುವುದರಿಂದ ಬೌಲಿಂಗ್ ಕಾಂಬಿನೇಷನ್ ಬಗ್ಗೆ ಧೋನಿ ಚಿಂತೆ ಮಾಡಲಾರಂಭಿಸಿದ್ದಾರೆ.
|