ನವದೆಹಲಿ: 'ಹಣದ ಸಮರ' ಎಂದೇ ಖ್ಯಾತಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸಮರವು ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ನಡೆದಿರುವುದರಿಂದ ಉತ್ತೇಜಿತಗೊಂಡಿರುವ ಐಪಿಎಲ್ ಆಯುಕ್ತ ಲಲಿತ್ ಮೋದಿ, ವರ್ಷಕ್ಕೆರಡು ಐಪಿಎಲ್ ಟೂರ್ನಿ ನಡೆಸುವ ಬಗ್ಗೆ ಸುಳಿವು ನೀಡಿದ್ದು, ಒಂದು ಭಾರತದಲ್ಲಿ, ಇನ್ನೊಂದು ಸರಣಿ ವಿದೇಶದಲ್ಲಿ ನಡೆಸುವ ಇರಾದೆ ವ್ಯಕ್ತಪಡಿಸಿದ್ದಾರೆ.
ಮೂಲತಃ ಐಪಿಎಲ್ ಟೂರ್ನಿ ಭಾರತದಲ್ಲೇ ನಡೆಯುತ್ತದೆ. ಆದರೆ ವರ್ಷದ ಎರಡನೇ ಸರಣಿಯೊಂದನ್ನು ವಿದೇಶದಲ್ಲಿ ನಡೆಸಿ, ಅಲ್ಲಿ ಮಾರುಕಟ್ಟೆ ದೊರೆಯುತ್ತದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದೇವೆ. ಈ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಬ್ರಿಟಿಷ್ ದೈನಿಕವೊಂದಕ್ಕೆ ಮೋದಿ ಹೇಳಿದ್ದಾರೆ.
ಚುನಾವಣೆ ಕಾರಣದಿಂದಾಗಿ ದಕ್ಷಿಣ ಆಫ್ರಿಕಾಕ್ಕೆ ವರ್ಗಾವಣೆಯಾದ ಐಪಿಎಲ್ ಟೂರ್ನಿಯಲ್ಲಿ ನಾವು ಸವಾಲುಗಳು ಮತ್ತು ಅಡೆತಡೆಗಳನ್ನೆಲ್ಲಾ ಅವಕಾಶಗಳನ್ನಾಗಿ ಪರಿವರ್ತಿಸಿದ್ದೇವೆ. ಟೂರ್ನಮೆಂಟ್ ಯಾವುದೇ ದೇಶದಲ್ಲಿ ಯಾವುದೇ ಪ್ರದೇಶದಲ್ಲಿ ನಡೆಯಬಹುದು ಎಂಬುದನ್ನು ಟೂರ್ನಿಯ ಯಶಸ್ಸಿಗೆ ಮೂಲ ಕಾರಣರಾದ ಅಭಿಮಾನಿಗಳು ತೋರಿಸಿಕೊಟ್ಟಿದ್ದಾರೆ. ಇದರಿಂದಾಗಿ ಹೊಸ ಅವಕಾಶಗಳೂ ತೆರೆದುಕೊಂಡಂತಾಗಿದೆ ಎಂದವರು ತಿಳಿಸಿದ್ದಾರೆ. |