ಟೆಸ್ಟ್ ತಂಡ ಎಂದು ಹೀಗಳೆದವರೆಲ್ಲ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿರುವ ವಿಜಯ್ ಮಲ್ಯ ಒಡೆತನದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಸೆಮಿಫೈನಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಬಗ್ಗುಬಡಿದು ಆರು ವಿಕೆಟ್‌ಗಳ ಅಂತರದಿಂದ ವಿಜಯಮಾಲೆ ಧರಿಸಿ ಫೈನಲ್ ತಲುಪಿದೆ.ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದ ಮನೀಷ್ ಪಾಂಡೆ ಬೆಂಗಳೂರು ರಾಯಲ್ ಪಡೆಗೆ ಈ ಬಾರಿಯೂ ಅದೃಷ್ಟದೈವವಾದರು. ಪಾಂಡೆ ಜತೆಗೂಡಿದ ರಾಹುಲ್ ದ್ರಾವಿಡ್ ಕೂಡಾ ಈ ಬಾರಿ ರಾಯಲ್ ಬಳಗವನ್ನು ಫೈನಲ್ ಗಡಿಗೆ ತಲುಪಲು ಉತ್ತಮ ಸಾಥ್‌ನ್ನೇ ನೀಡಿದರು.ಟಾಸ್ ಗೆದ್ದು ಕುಂಬ್ಳೆ ನಾಯಕತ್ವದ ರಾಯಲ್ ಬಳಗ ಚೆನ್ನೈ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಚೆನ್ನೈ ಪರ ಆರಂಭಿಕ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಹಾಗೂ ಮ್ಯಾಥ್ಯೂ ಹೈಡನ್ ಉತ್ತಮ ಜತೆಯಾಟವನ್ನೇ ನೀಡಿ 61 ರನ್ ಪೇರಿಸಿದರು. 19 ಎಸೆತಗಳಲ್ಲಿ 26 ರನ್ ಪೇರಿಸಿದ ಹೈಡನ್ ಕುಮಾರ್ ಎಸೆತಕ್ಕೆ ಮನೀಷ್ ಪಾಂಡೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಾಯಕ ಧೋನಿ 30 ಎಸೆತಗಳಿಗೆ 28 ರನ್ ಕಲೆ ಹಾಕಿ ಔಟಾದರೆ, ಸುರೇಶ್ ರೈನಾ 19 ಎಸೆತಗಳಲ್ಲಿ 20, ಹಾಗೂ ಜಾಕೋಬ್ ಓರಮ್ ಏಳು ಎಸೆತಗಳಲ್ಲಿ 9 ರನ್ ಪಡೆದರು. 17 ಎಸೆತಗಳಲ್ಲಿ 20* ರನ್ ಪಡೆದ ಆಲ್ಬೀ ಮಾರ್ಕೆಲ್ ಹಾಗೂ ಸುಬ್ರಹ್ಮಣ್ಯಂ ಬದ್ರಿನಾಥ್ (1)* ಅಜೇಯರಾಗಿ ಉಳಿದರು. 20 ಓವರ್‌ಗಳಲ್ಲಿ 146ರ ಗುರಿಯನ್ನು ಚೆನ್ನೈ ಬೆಂಗಳೂರಿಗೆ ನೀಡಿತು.ಬೆಂಗಳೂರು ಪರ ಮೊದಲು ಬ್ಯಾಟಿಂಗ್‌ಗೆ ಇಳಿದ ಜಾಕಸ್ ಕ್ಯಾಲಿಸ್ ಹಾಗೂ ಮನೀಶ್ ಪಾಂಡೆ ಉತ್ತಮ ಆರಂಭವನ್ನೇ ನೀಡಿದರು. ಆದರೆ, ತಂಡದ ಮೊತ್ತ 17 ತಲುಪುವಷ್ಟರಲ್ಲೇ ಕ್ಯಾಲಿಸ್ ಪಾರ್ಥಿವ್ ಪಟೇಲ್‌ಗೆ ಸುಲಭ ಕ್ಯಾಚ್ ನೀಡಿ ಔಟಾದರು. ನಂತರ ಮನೀಷ್ ಪಾಂಡೆಗೆ ಜತೆಯಾದ ರಾಲ್ಫ್ ವ್ಯಾನ್ ಡಿರ್‌ಮೆರ್ವೆ ಕೂಡಾ ಎರಡೇ ರನ್ ಗಳಿಸುವಷ್ಟರಲ್ಲಿ ಔಟಾದರು. ಆಗ ತಂಡದ ಮೊತ್ತ 22. ಕೇವಲ 2.5 ಓವರುಗಳಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಮನೀಷ್ಗೆ ಜತೆಯಾದ ರಾಹುಲ್ ದ್ರಾವಿಡ್ ಉತ್ತಮ ಸಾಥ್ ನೀಡಿದರು. ಇವರಿಬ್ಬರ ಜತೆಯಾಟದಲ್ಲಿ ಬೆಂಗಳೂರು ರಾಯಲ್ ತಂಡ 12.3 ಓವರುಗಳಲ್ಲಿ 94 ರನ್‌ಗಳನ್ನು ಪೇರಿಸಿ ಗೆಲುವಿನ ಆಸೆ ಚಿಗುರಿಸಿದರು.ಮನೀಷ್ ಪಾಂಡೆ ಈ ಬಾರಿಯೂ ಮೈದಾನದಲ್ಲಿ ಅಕ್ಷರಶಃ ಮಿಂಚಿದರು. 35 ಎಸೆತಗಳಲ್ಲಿ 48 ರನ್ ಕಲೆಹಾಕಿದ ಪಾಂಡೆ ಏಳು ಆಕರ್ಷಕ ಬೌಂಡರಿಗಳನ್ನು ಸಿಡಿಸಿ ಔಟಾದರು. ನಂತರ ಬಂದ ವಿರಾಟ್ ಕೊಹ್ಲಿ ಕೂಡಾ ದ್ರಾವಿಡ್‌ಗೆ ಉತ್ತಮ ಜತೆಯಾಟ ನೀಡಿದರು. ತಂಡ 15.1 ಓವರುಗಳಲ್ಲಿ 110 ರನ್‌ಗಳ ಭರವಸೆಯ ರನ್ ಕಲೆ ಹಾಕಿದ ಮೇಲೆ ರಾಹುಲ್ ದ್ರಾವಿಡ್ ಮುತ್ತಯ್ಯ ಮುರಳೀಧರನ್ ಎಸೆತಕ್ಕೆ ಎಲ್‌ಬಿಡಬ್ಲ್ಯು ಆಗಬೇಕಾಯಿತು.ವಿರಾಟ್‌ಗೆ ಜತೆಯಾದ ರೋಸ್ ಟೈಲರ್ 12 ಎಸೆತಗಳಲ್ಲಿ 17* ರನ್ ಸಿಡಿಸಿ ಅಜೇಯರಾಗಿ ಉಳಿದರೆ, ವಿರಾಟ್ 17 ಎಸೆತಗಳಲ್ಲಿ 24* ರನ್ ಸಿಡಿಸಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಫೈನಲ್ ತಲುಪಲು ಒತ್ತಾಸೆಯಾದರು.ಕಳೆದ ಬಾರಿ ಏನೂ ಸಾಧಿಸಲಾಗದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಈ ಬಾರಿ ಫೈನಲ್ ತಲುಪಿರುವುದು ಸಹಜವಾಗಿಯೇ ಮಲ್ಯ ಮುಖದಲ್ಲಿ ನಗು ಚಿಮ್ಮಿಸಿದೆ. ಆಟದುದ್ದಕ್ಕೂ ಕುಳಿತು ಆಸಕ್ತಿಯಿಂದ ವೀಕ್ಷಿಸುತ್ತಿದ್ದ ಮಲ್ಯ ಅಂತಿಮ ಕ್ಷಣದಲ್ಲಿ ಸಂಭ್ರಮದಲ್ಲಿ ಮಿಂದುಹೋದರು. ಮನೀಷ್ ಪಾಂಡೆಗೆ ಸಹಜವಾಗಿಯೇ ಪಂದ್ಯಪುರುಷ ಗೌರವ ದಕ್ಕಿತು. ಇಂದು ಸಂಜೆ ಫೈನಲ್ ತಲುಪಿದ ಡೆಕ್ಕನ್ ಚಾರ್ಜರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಫೈನಲ್ ಕಿರೀಟಕ್ಕಾಗಿ ಸೆಣೆಸಲಿವೆ. |