ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಪಕ್ಕಾ ನಿದರ್ಶನ ಈ ಬಾರಿಯ ಐಪಿಎಲ್! ಕ್ರಿಕೆಟ್‌ನ ಅಚ್ಚರಿ ಎಂದರೆ ಇದೇ. ಎಲ್ಲರ ಮೂದಲಿಕೆಗೆ ತುತ್ತಾದರೂ, ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿ ಮುನ್ನಡೆದು ಈಗ ಫೈನಲ್‌ನಲ್ಲಿ ಹೋರಾಡುತ್ತಿರುವ ಎರಡೂ ತಂಡಗಳು ಕಳೆದ ಬಾರಿಯ ಕೊನೆಯ ಸ್ಥಾನದಲ್ಲಿದ್ದ ಹಾಗೂ ಸೆಮಿಫೈನಲ್‌ಗೂ ಏರಲಾಗದೆ ಕಡಿಮೆ ಅಂಕಗಳಿಂದ ಮುಗ್ಗರಿಸಿದ್ದ ತಂಡಗಳು!ಕಳೆದ ವರ್ಷ ಕಳಪೆ ಪ್ರದರ್ಶನ ನೀಡಿ ಏಳನೇ ಸ್ಥಾನದಲ್ಲಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಈ ಬಾರಿ ತನ್ನನ್ನು ಅಲಕ್ಷ್ಯ ಮಾಡುವ ಅಗತ್ಯವಿಲ್ಲ ಎಂದು ತೋರಿಸಿಕೊಟ್ಟಿದೆ. ಕುಂಬ್ಳೆ ನಾಯಕತ್ವದಲ್ಲಿ ಸೆಮಿಫೈನಲ್ ದಾಟಿ ಫೈನಲ್ ತಲುಪಿರುವ ಈ ಬೆಂಗಳೂರು ಪಡೆಗೆ ಇಂದು ಜೋಹಾನ್ಸ್‌ಬರ್ಗ್‌ನಲ್ಲಿ ಅಂತಿಮ ಹಣಾಹಣಿ.ವಿಚಿತ್ರವೆಂದರೆ, ಈ ಬಾರಿ ಫೈನಲ್ ತಲುಪಿರುವ ಎರಡೂ ತಂಡಗಳು ಕಳೆದ ಬಾರಿ ಕಡಿಮೆ ಅಂಕಗಳನ್ನು ಪಡೆದುಕೊಂಡು ಕೊನೆಯ ಸ್ಥಾನದಲ್ಲಿದ್ದ ತಂಡಗಳು. ಹೈದರಾಬಾದ್ ಕಳೆದ ಬಾರಿ ಬೆಂಗಳೂರು ರಾಯಲ್‌ಗಿಂತಲೂ ಕಳಪೆ ಪ್ರದರ್ಶನ ತೋರಿತ್ತು. ಆದರೆ ಈ ಬಾರಿ ಮೊದಲಿನಿಂದಲೂ ಉತ್ತಮ ಪ್ರದರ್ಶನ ತೋರಿಸುತ್ತಲೇ ಬಂದಿದ್ದ ಡೆಕ್ಕನ್ ಬಳಗ ಆಡಮ್ ಗಿಲ್‌ಕ್ರಿಸ್ಟ್‌ರ ಅನುಭವದೊಂದಿಗೆ ಮೈದಾನದಲ್ಲಿ ಮಿಂಚಿತ್ತು. ಕಳೆದ ವರ್ಷ ಟೆಸ್ಟ್ ತಂಡ ಎಂದು ಮೂದಲಿಕೆ ಒಳಾಗಿ ಕುಗ್ಗಿ ಹೋಗಿದ್ದ ರಾಯಲ್ ಚಾಲೆಂಜರ್ಸ್ ಈ ಬಾರಿಯ ಐಪಿಎಲ್‌ನಲ್ಲು ಮೊದಲ ಸುತ್ತಿನಲ್ಲಿ ಅಂತಹ ಮೈನವಿರೇಳಿಸುವ ಪ್ರದರ್ಶನವೇನೂ ನೀಡಲಿಲ್ಲ. ಕಳೆದ ವರ್ಷದಂತೆಯೇ ಈ ಬಾರಿಯೂ ಟೆಸ್ಟ್ ತಂಡ ಎಂದು ಅಲ್ಲರ ಅಲಕ್ಷ್ಯಕ್ಕೆ ತುತ್ತಾಗುವ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ತಂಡ ಕುಂಬ್ಳೆಯಂತ ಅನುಭವಿ ಬೌಲರನ್ನು ನಾಯಕನನ್ನಾಗಿ ಮಾಡಿತು. ಹಾಗಾಗಿ ಸೂರ್ತಿಯುತ ತಂಡವಾಗಿ ಹೊರಹೊಮ್ಮಿದ ಕುಂಬ್ಳೆ ಬಳಗ ನಿಧಾನವಾಗಿ ಚಿಗಿತುಕೊಂಡು ಸೆಮಿಫೈನಲ್‌ನ್ಲಲೂ ಸ್ಥಾನ ಗಿಟ್ಟಿಸಿಕೊಂಡಿತು. ಶನಿವಾರ ನಡೆದ ಸೆಮಿಫೈನಲ‌್‌ನಲ್ಲೂ, ಕಳೆದ ಬಾರಿಯ ಐಪಿಎಲ್‌ನ ರನ್ನರ್ ಅಪ್ ತಂಡ ಹಾಗೂ ಮುಟ್ಟಿದ್ದೆಲ್ಲಾ ಚಿನ್ನವಾಗುವ ಕೈಗುಣವಿರುವ ಧೋನಿ ನಾಯಕತ್ವದ ಚೆನ್ನೈ ಪಡೆಯನ್ನು ಬಗ್ಗುಬಡಿದು ಫೈನಲ್ ತಲುಪಿದೆ. ಫೈನಲ್‌ನಲ್ಲಿ ಸೋತರೂ ರನ್ನರ್ ಅಪ್ ಹೆಗ್ಗಳಿಕೆ ಗ್ಯಾರೆಂಟಿ.ಶುಕ್ರವಾರ ಗಿಲ್‌ಕ್ರಿಸ್ಟ್ ಅವರ ಹಿಗ್ಗಾಮುಗ್ಗ ಶೈಲಿಯ ಬರೋಬ್ಬರಿ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ಪಡೆ ಡೆಲ್ಲಿ ಡೆವಿಲ್‌ಗಳನ್ನು ಮಟ್ಟ ಹಾಕಿ ಫೈನಲ್ ಏರಿತು. ಆದರೆ ಯಾರ ಬ್ಯಾಟ್ಸ್‌ಮನ್‌ನ್ನೂ ಅವಲಂಬಿಸುವಷ್ಟು ಸದೃಢ ಟೀಂ ಬೆಂಗಳೂರು ಬಳಿ ಇಲ್ಲದಿದ್ದರೂ, ತಂಡಸ್ಪೂರ್ತಿಯಿಂದ ಉತ್ತಮವಾಗಿ ಬೆಂಗಳೂರು ಬಳಗ ಧೋನಿ ಪಡೆಯನ್ನು ಬಗ್ಗುಬಡಿದು ಫೈನಲ್ ಏರಿದೆ.ಗಿಲ್‌ಕ್ರಿಸ್ಟ್, ಗಿಬ್ಸ್ ಅಥವಾ ಸೈಮಂಡ್ಸ್ ಹಾಗೂ ರೋಹಿತ್ ಶರ್ಮಾ ತಮ್ಮ ಶಕ್ತಿಯನುಸಾರ ದಾಳಿಯಿಟ್ಟರೆ ಎದುರಾಳಿಯನ್ನು ಮುಗ್ಗರಿಸುವಂತೆ ಮಾಡುವುದು ಹೈದರಾಬಾದ್ ಪಡೆಗೆ ಸುಲಭ. ಅದನ್ನು ಈ ಪಡೆ ಸೆಮಿಫೈನಲ್‌ನಲ್ಲಿ ತೋರಿಸಿಕೊಟ್ಟಿದೆ ಕೂಡಾ. ಆದರೂ, ಬೆಂಗಳೂರು ಪಡೆಯನ್ನೂ ಅಷ್ಟು ಸುಲಭವಾಗಿ ತಳ್ಳಿಹಾಕುವಂತಿಲ್ಲ. ತಂಡಸ್ಪೂರ್ತಿಯಿಂದ ಆಡಿದರೆ ಏನೂ ಮಾಡಲು ಸಾಧ್ಯ ಎಂಬುದನ್ನು ಈ ಹಿಂದಿನ ಮ್ಯಾಚ್‌ಗಳಲ್ಲಿ ಬೆಂಗಳೂರು ಸಾಕ್ಷಿಯಾಗಿ ತೋರಿಸಿದೆ. ಯುವ ಆಟಗಾರರಾದ ವಿರಾಟ್, ಮನೀಷ್ ಪಾಂಡೆಯೂ ತಮಗೆ ಸಾಧ್ಯ ಎಂಬುದನ್ನು ಪ್ರದರ್ಶಿಸಿದ್ದಾರೆ.ಆದರೂ ಒಟ್ಟು ತುಲನೆಯಿಂದ ನೋಡುವುದಾದರೆ ಹೈದರಾಬಾದ್ ಕೈ ಮೇಲೆ ಬರಬಹುದು ಎಂಬುದು ಹಲವರ ಲೆಕ್ಕಾಚಾರ. ಆದರೆ, ಏನೂ ನಡೆಯಬಹುದು ಎಂಬುದಕ್ಕೆ ಬೇರೆ ಸಾಕ್ಷಿ ಹುಡುಕಬೇಕಿಲ್ಲ. ಬೆಂಗಳೂರು ತಂಡವೇ ಇದಕ್ಕೆ ಅತ್ಯಂತ ಸೂಕ್ತ ಸಾಕ್ಷಿ. ಒಟ್ಟಾರೆ ಇಡಿಯ ಐಪಿಎಲ್ ಫೈನಲ್ ಐಟಿ ಸಿಟಿಗಳೆರಡರ ಕದನದಂತೆ ಮಾರ್ಪಟ್ಟಿದ್ದು, ಎಲ್ಲರ ಕುತೂಹಲ ಕೆರಳಿಸಿದೆ. |