ದುಬೈಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ವಿವಾದಾತ್ಮಕ ಬೌಲರ್ ಮೊಹಮ್ಮದ್ ಆಸಿಫ್‌ಗೆ, 10 ಲಕ್ಷ ರೂಪಾಯಿಗಳ ದಂಡ ವಿಧಿಸಿದ್ದು, ದಂಡ ಪಾವತಿಸಿದ ಹಿನ್ನೆಲೆಯಲ್ಲಿ ಮುಂಬರುವ ವರ್ಷದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೂಫಿ ಪಂದ್ಯಾವಳಿಗೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ. ಕಳೆದ ವರ್ಷ ದುಬೈ ವಿಮಾನನಿಲ್ದಾಣದಲ್ಲಿ 0.23 ಗ್ರಾಂ ಹಶೀಷ್ ಹೊಂದಿದ ಆರೋಪದ ಮೇಲೆ ಬಂಧಿತನಾಗಿದ್ದ ಮೊಹಮ್ಮದ್ ಆಸಿಫ್ ಅವರನ್ನು ತಪ್ಪಿತಸ್ಥ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಮೂರು ಮಂದಿ ಸದಸ್ಯರ ಸಮಿತಿ ಶಿಫಾರಸ್ಸಿನ ಮೇಲೆ ದಂಡ ವಿಧಿಸಲಾಗಿದೆ. 2008 ರ ಜೂನ್ ತಿಂಗಳಲ್ಲಿ ಇಂಡೀಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಮೊಹಮ್ಮದ್ ಆಸೀಫ್ ಡೋಪ್ ಪರೀಕ್ಷೆಯಲ್ಲಿ ಅನುತೀರ್ಣರಾಗಿ ಭಾರತದಿಂದ ಮರಳುತ್ತಿರುವ ಸಂದರ್ಭದಲ್ಲಿ ದುಬೈ ವಿಮಾನನಿಲ್ದಾಣದಲ್ಲಿ ಮಾದಕ ವಸ್ತುವನ್ನು ಹೊಂದಿದ ಆರೋಪದ ಮೇಲೆ ಬಂಧಿತನಾಗಿ 19 ದಿನಗಳ ಜೈಲುವಾಸ ಅನುಭವಿಸಿದ್ದರು. ಡೋಪ್ ಪರೀಕ್ಷೆಯಲ್ಲಿ ಅನುತೀರ್ಣರಾಗಿರುವುದು ,ದುರ್ನಡತೆ ಹಾಗೂ ದುಬೈಯಲ್ಲಿ ಹಶೀಷ್ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು,ಸಮಿತಿ , ಆಸೀಫ್‌ಗೆ ಒಂದು ವರ್ಷ ನಿಷೇಧ ಹಾಗೂ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಿತ್ತು. ದಂಡ ಪಾವತಿಸಿ ಒಂದು ವರ್ಷ ಕಳೆದ ನಂತರ ತಂಡಕ್ಕೆ ಮರಳಬಹುದು ಎಂದು ಆದೇಶ ನೀಡಿದೆ. |