ಭಾರತ ಕ್ರಿಕೆಟ್ ಮಂಡಳಿ ದೇವಧರ್ ಟ್ರೋಫಿಯನ್ನು ರದ್ದುಗೊಳಿಸಿದಲ್ಲಿ ಘೋರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಶಿವಸೇನೆ ಎಚ್ಚರಿಸಿ, ಬಿಸಿಸಿಐ ಕಚೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.ದೇವಧರ್ ಟ್ರೋಫಿಯನ್ನು ರದ್ದುಗೊಳಿಸಿ ಮಹಾರಾಷ್ಟ್ರದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಆಯೋಜಿಸಲು ಭಾರತ ಕ್ರಿಕೆಟ್ ಮಂಡಳಿ ಯೋಜನೆಯನ್ನು ರೂಪಿಸಿದೆ. ಮರಾಠಿಗರ ಅಭಿಮಾನದ ಸಂಕೇತವಾದ ಪ್ರೊಫೆಸರ್ .ಡಿ.ಬಿ.ದೇವಧರ್ ಟ್ರೋಫಿಯನ್ನು ರದ್ದುಗೊಳಿಸಿರುವುದು ಮರಾಠಿಗರಿಗೆ ಅವಮಾನ ಮಾಡಿದಂತಾಗಿದೆ ಎಂದು ಶಿವಸೇನಾ ಮುಖಂಡರಾದ ಸುಭಾಷ್ ದೇಸಾಯಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರತ್ನಾಕರ್ ಶೆಟ್ಟಿಯವರಿಗೆ ಬಿಸಿಸಿಐ ನಿರ್ಧಾರವನ್ನು ಖಂಡಿಸಿ , ಮನವಿಯನ್ನು ಸಲ್ಲಿಸಲಾಗಿದೆ ಎಂದು ದೇಸಾಯಿ ತಿಳಿಸಿದ್ದಾರೆ.ಶಿವಸೇನಾ ನಿಯೋಗಕ್ಕೆ ರತ್ನಾಕರ್ ಶೆಟ್ಟಿಯವರು ದೇವಧರ್ ಟ್ರೋಫಿಯನ್ನು ಆಯೋಜಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ದೇವಧರ್ ಟ್ರೋಫಿಯನ್ನು ರದ್ದುಗೊಳಿಸಿದಲ್ಲಿ , ರಾಜ್ಯದಾದ್ಯಂತ ಐಪಿಎಲ್‍ನ ಒಂದು ಪಂದ್ಯವನ್ನೂ ಆಡಲು ಬಿಡುವುದಿಲ್ಲ ಎಂದು ದೇಸಾಯಿ ಎಚ್ಚರಿಸಿದ್ದಾರೆ. |