ಪಾಕಿಸ್ತಾನದ ಆಲ್-ರೌಂಡರ್ ಸೋಹೆಲ್ ತನ್ವೀರ್ ಅವರಿಗೆ ಜುಲೈ 6 ರಂದು ಲಂಡನ್‌ನಲ್ಲಿ ನಡೆಯಲಿರುವ ಮಿಡ್ಲ್‌ಸೆಕ್ಸ್ ತಂಡದ ವಿರುದ್ಧದ ಧರ್ಮಾರ್ಥ ಪಂದ್ಯದಲ್ಲಿ, ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ಪರವಾಗಿ ಆಡಲು ಪಾಕ್ ಕ್ರಿಕೆಟ್ ಮಂಡಳಿ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಬ್ರಿಟಿಷ್ ಏಷಿಯನ್ ಟ್ರಸ್ಟ್ ಆಯೋಜಿಸಿದ ಪಂದ್ಯಾವಳಿಯಲ್ಲಿ, ರಾಜಸ್ಥಾನ ರಾಯಲ್ಸ್ ಪರವಾಗಿ ಪಾಕ್ ಆಟಗಾರ ಸೋಹೆಲ್ ತನ್ವೀರ್ ಅವರು ಆಡಲಿದ್ದಾರೆ ಎಂದು ತನ್ವೀರ್ ಅವರ ಪ್ರಾಯೋಜಕ ಕಂಪೆನಿ ತಿಳಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಮೊದಲ ಆವೃತ್ತಿಯಲ್ಲಿ, ರಾಜಸ್ಥಾನ ರಾಯಲ್ಸ್ ಪರವಾಗಿ ಉತ್ತಮ ಪ್ರದರ್ಶನ ನೀಡಿದ ತನ್ವೀರ್ , ಬೆಸ್ಟ್‌ಬೌಲರ್ ಗೌರವಕ್ಕೆ ಪಾತ್ರರಾಗಿ ರಾಯಲ್ಸ್ ತಂಡ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಆದರೆ , ಕಳೆದ ನವೆಂಬರ್ ತಿಂಗಳಿನಲ್ಲಿ ಮುಂಬೈಯಲ್ಲಿ ನಡೆದ ಉಗ್ರರ ದಾಳಿಯ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನ ವಾತವಾರಣದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡದ ಆಟಗಾರರನ್ನು ಭಾರತಕ್ಕೆ ಕಳುಹಿಸಬಾರದು ಎಂದು ಪಾಕ್ ವಿದೇಶಾಂಗ ಸಚಿವಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಐಪಿಎಲ್‌ನ ಎರಡನೇ ಆವೃತ್ತಿಯಲ್ಲಿ ಸೋಹೆಲ್ ಭಾಗವಹಿಸಲು ಸಾಧ್ಯವಾಗಲಿಲ್ಲ.
ನಂತರ ಇಂಡಿಯನ್ ಪ್ರೀಮಿಯರ್ ಲೀಗ್ , ದಕ್ಷಿಣ ಆಫ್ರಿಕಾದಲ್ಲಿ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಿತ್ತು. ಆದರೆ ಪಾಕ್ ಆಟಗಾರರು ಪಂದ್ಯಾವಳಿಗೆ ಲಭ್ಯವಾಗದ ಹಿನ್ನೆಲೆಯಲ್ಲಿ ಐಪಿಎಲ್ ಫ್ರಾಂಚೈಸಿಗಳು , ಪಾಕಿಸ್ತಾನದ ಆಟಗಾರರ ಗುತ್ತಿಗೆಯನ್ನು ರದ್ದುಪಡಿಸುವ ಅಥವಾ ಅಮಾನತುಗೊಳಿಸುವ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿದ್ದವು. .
ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕರಾದ ಶಿಲ್ಪಾ ಶೆಟ್ಟಿ , ತನ್ವೀರ್ ತಂಡಕ್ಕೆ ಸೇರ್ಪಡೆಯಾಗುತ್ತಿರುವುದು ತುಂಬಾ ಸಂತಸವಾಗಿದೆ ಎಂದು ಹೇಳಿದ್ದಾರೆ. |