ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶನ (ಅಜೇಯ 46 ರನ್, 34ಎಸೆತ) ನೆರವಿನಿಂದ ಆತಿಥೇಯ ವೆಸ್ಟ್‌ಇಂಡೀಸ್ ವಿರುದ್ಧದ ನಾಲ್ಕು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯವನ್ನು ಡಕ್ ವರ್ಥ್ ಲೂವಿಸ್ ನಿಯಮದಡಿ ಭಾರತ ಆರು ವಿಕೆಟ್‌ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ. ಅಂತಿಮ ಓವರ್‌ನ ಎರಡನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ನಾಯಕ ಧೋನಿ ಭಾರತಕ್ಕೆ ಸರಣಿಯಲ್ಲಿ 2-1ರ ಮುನ್ನಡೆ ದೊರಕಿಸಿಕೊಟ್ಟರು.ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಮೊದಲು ಓವರ್‌ಗಳನ್ನು 41ಕ್ಕೆ ಇಳಿಸಲ್ಪಟ್ಟರೂ ಅಮೇಲೆ 27ಕ್ಕೆ ನಿಗದಿಪಡಿಸಲಾಯಿತು. ಸರಣಿಯಲ್ಲಿ ಸತತ ಮೂರನೇ ಬಾರಿಯೂ ಟಾಸ್ ಅದೃಷ್ಟ ಒಲಿದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆಮಾಡಿದರು.ಆರಂಭದಲ್ಲೇ ಭಾರತೀಯ ವೇಗದ ಬೌಲರ್‌ಗಳನ್ನು ದಂಡಿಸಿದ ವಿಂಡೀಸ್ ನಾಯಕ ಕ್ರಿಸ್ ಗೇಲ್ ಹಾಗೂ ರುನಾರ್ಕೊ ಮೊರ್ಟಾನ್ ಮೊದಲ ವಿಕೆಟ್‌ಗೆ 3.4 ಓವರ್‌ಗಳಲ್ಲಿ 27ರನ್ ಪೇರಿಸಿದರು. 14 ಎಸೆತಗಳನ್ನು ಎದುರಿಸಿದ ಗೇಲ್ 27ರನ್ ಬಾರಿಸಿದರು. ಇದರಲ್ಲಿ ಆರು ಬೌಂಡರಿಗಳು ಸೇರಿದ್ದವು. ನಂತರ ಬಂದ ರಾಮ್‌ನರೇಶ್ ಸರ್ವಾನ್ ಜತೆ ಸೇರಿ ಮೊರ್ಟಾನ್ 51 ರನ್‌ಗಳ ಜತೆಯಾಟ ನೀಡಿದರು. ಮೊರ್ಟಾನ್ 22ರನ್ ಗಳಿಸಿದ್ದಾಗ ಹರ್ಭಜನ್ ಎಸೆತಕ್ಕೆ ಬಲಿಯಾದರು. ನಂತರ ಬಂದ ಎಡಗೈ ಬ್ಯಾಟ್ಸ್‌ಮಾನ್ ಶಿವನಾರಾಯಣ್ ಚಂದ್ರಪಾಲ್(14) ಸಹ ಸರ್ವಾನ್‌ಗೆ ಉತ್ತಮ ಬೆಂಬಲ ನೀಡಿದರು.59 ಎಸೆತಗಳನ್ನು ಎದುರಿಸಿದ ಸರ್ವಾನ್ 62ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಕೊನೆಗೆ ಬಂದ ಬ್ರಾವೋ(21ರನ್, 15ಎಸೆತ), ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮಾನ್ ರಾಮ್‌ದಿನ್ (ಅಜೇಯ 14) ವೇಗದಲ್ಲಿ ರನ್ ಪೇರಿಸಿದರು. ಒಟ್ಟಾರೆ ವಿಂಡೀಸ್ 27 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 186 ರನ್‌ಗಳ ಉತ್ತಮ ಮೊತ್ತ ಪೇರಿಸಿತು. ಭಾರತ ಪರ ಪ್ರಭಾವಿ ಬೌಲಿಂಗ್ ದಾಳಿ ಸಂಘಟಿಸಿದ ಆಶಿಸ್ ನೆಹ್ರಾ 21 ರನ್ ತೆತ್ತು 3 ಹಾಗೂ ಹರ್ಭಜನ್ 2 ವಿಕೆಟ್ ಕಬಳಿಸಿದರು.187 ರನ್ ಸವಾಲಿನ ಮೊತ್ತ ಬೆನ್ನತ್ತಿದ ಭಾರತಕ್ಕೆ ಓಪನರ್ ಗೌತಮ್ ಗಂಭೀರ್ ಹಾಗೂ ದಿನೇಶ್ ಕಾರ್ತಿಕ್ ಉತ್ತಮ ಆರಂಭವನ್ನೇ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 12.1 ಓವರ್‌ಗಳಲ್ಲಿ 84 ರನ್ ಪೇರಿಸಿದರು. ಈ ಹಂತದಲ್ಲಿ 47 ರನ್ ಗಳಿಸಿದ ಕಾರ್ತಿಕ್ ರನೌಟ್‌ಗೆ ಬಲಿಯಾದರು. 43 ಎಸೆತಗಳನ್ನು ಎದುರಿಸಿದ ಕಾರ್ತಿಕ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದ್ದರು. ಭಾರತದ 13.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದ್ದಾಗ ಮತ್ತೆ ಮಳೆ ಅಡ್ಡಿಪಡಿಸಿದ್ದರಿಂದ ಡರ್ಕ್ ವರ್ತ್ ಲೂವಿಸ್ ನಿಯಮದಡಿ ಭಾರತಕ್ಕೆ ಗೆಲುವಿನ ಗುರಿ 22 ಓವರ್‌ಗಳಲ್ಲಿ 159 ರನ್ ನಿಗದಿಪಡಿಸಲಾಯಿತು.ಈ ಹಂತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಗೌತಮ್ 38 ಎಸೆತಗಳಲ್ಲಿ 44ರನ್ ಗಳಿಸಿ ಬೆನ್‌ಗೆ ವಿಕೆಟ್ ಒಪ್ಪಿಸಿದರು. ಮೊದಲ ಪಂದ್ಯದ ಹಿರೋ ಯುವರಾಜ್ ಸಿಂಗ್ (2) ಮಿಂಚಲಾಗಲಿಲ್ಲ. ರೋಹಿತ್ ಶರ್ಮಾ(11) ಮತ್ತೆ ವಿಫಲರಾದರೂ ಕೊನೆಯ ಹಂತದಲ್ಲಿ ಧೋನಿಗೆ ಉತ್ತಮ ಸಾಥ್ ನೀಡಿದರು.ಒನ್‌ಡೌನ್ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ನಾಯಕ ಮಹೇಂದ್ರ ಸಿಂಗ್ ಧೋನಿ ಅತ್ಯುತ್ತಮವಾಗಿ ಆಡಿ ಪಂದ್ಯದಲ್ಲಿ ಭಾರತದ ಹಿಡಿತವನ್ನು ಬಿಗಿಗೊಳಿಸಿದರು. ಯೂಸುಫ್ ಪಠಾಣ್ ಸಹ 1 ರನ್ ಗಳಿಸಿ ಅಜೇಯರಾಗುಳಿದರು.ಭಾರತಕ್ಕೆ ಅಂತಿಮ ಓವರ್‌ನಲ್ಲಿ ಗೆಲ್ಲಲ್ಲು 11 ರನ್‌ಗಳ ಅವಶ್ಯಕತೆಯಿತ್ತು. ಆದರೆ ವಿಚಲಿತರಾಗದ 'ಕೂಲ್' ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರು ಟೇಲರ್ ಎಸೆದ ಅಂತಿಮ ಓವರ್‌ನ ಎರಡನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಭಾರತದ ಗೆಲುವನ್ನು ಸುಲಭಗೊಳಿಸಿದರು. ಅಂತಿಮವಾಗಿ ಭಾರತ ಒಂದು ಎಸೆತ ಬಾಕಿ ಉಳಿದಿರುವಾಗಲೇ ಗೆಲುವಿನ ಗುರಿ ತಲುಪಿತು. ಉತ್ತಮವಾಗಿ ಆಡಿದ ಮಹಿ 34 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿ ಪಂದ್ಯದ ಹಿರೋ ಆಗಿ ಮೆರೆದರು. ಧೋನಿ ಅವರ ಜವಾಬ್ದಾರಿಯುತ ಆಟದಲ್ಲಿ ಎರಡು ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ಸೇರಿದ್ದು, ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.ನಾಲ್ಕು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಇದೀಗಲೇ 2-1 ರ ಮುನ್ನಡೆ ದಾಖಲಿಸಿದ್ದು, ಸರಣಿಯ ಅಂತಿಮ ಪಂದ್ಯ ಇದೇ ಅಂಗಳದಲ್ಲಿ ಭಾನುವಾರ ನಡೆಯಲಿದೆ. |