ಮೊಹಾಲಿಯಲ್ಲಿ ಒಬ್ಬನೇ ಒಬ್ಬ ಬ್ಯಾಟುಗಾರ ಅರ್ಧ ಶತಕ ದಾಖಲಿಸಲಾರದೆ, ಪಂದ್ಯ ಗೆದ್ದು ಐಸಿಸಿ ಏಕದಿನ ಪಟ್ಟಿಯಲ್ಲಿ ನಂ.1 ಆಗುವ ಅವಕಾಶ ಮತ್ತು ಸಚಿನ್ ತೆಂಡುಲ್ಕರ್ ಅವರು 17 ಸಾವಿರ ರನ್ ಪೂರೈಸುವ ಕನಸುಗಳನ್ನು ನುಚ್ಚುನೂರು ಮಾಡಿಕೊಂಡ ಭಾರತ, ಪ್ರವಾಸೀ ಆಸೀಸ್ ನೀಡಿದ್ದ 251 ರನ್ನುಗಳ ಗುರಿ ಬೆಂಬತ್ತಲಾರದೆ, 46.4 ಓವರುಗಳಲ್ಲಿ 226 ರನ್ನಿಗೆ ಸರ್ವಪತನ ಕಂಡು 24 ರನ್ನುಗಳಿಂದ ಸೋಲೊಪ್ಪಿಕೊಂಡಿತು.
ಅಂತಿಮ ಓವರುಗಳಲ್ಲಿ ಹರಭಜನ್ ಸಿಂಗ್ (25 ಎಸೆತದಲ್ಲಿ 31 ರನ್) ಮತ್ತೊಮ್ಮೆ ಆಶಾಭಾವ ಚಿಗುರಿಸಿದರಾದರೂ, ಅವರ ಬ್ಯಾಟಿನ 'ಸ್ಫೋಟ' ಸಾಕಾಗಲಿಲ್ಲ. ಡೋಗ್ ಬೊಲಿಂಜರ್ (38/3), ಶೇನ್ ವಾಟ್ಸನ್ (29/3) ಮತ್ತು ನಥಾನ್ ಹೌರಿಟ್ಜ್ (31/2) ಅವರು ಮಾರಕ ದಾಳಿ ಸಂಘಟಿಸಿ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಅಕ್ಷರಶಃ ಕಟ್ಟಿ ಹಾಕಿದರು.
ಆರಂಭದಲ್ಲಿ ವೀರೇಂದ್ರ ಸೆಹ್ವಾಗ್ (19 ಎಸೆತಗಳಲ್ಲಿ 30 ರನ್) ಸಿಡಿಸಿದರಾದರೂ, ಅದು ಯಾವುದೇ ಪ್ರಯೋಜನಕ್ಕೆ ಬಾರಲಿಲ್ಲ. ಸಚಿನ್ ತೆಂಡುಲ್ಕರ್ ಕೂಡ ಎಂದಿನ ಆಟ ಪ್ರದರ್ಶಿಸದೆ ಆಟಕ್ಕೆ ಹೊಂದಿಕೊಳ್ಳಲು ತಡಕಾಡಿ 68 ಎಸೆತಗಳಲ್ಲಿ 40 ರನ್ ಮಾಡುವಷ್ಟರಲ್ಲಿ ಸುಸ್ತಾದರು. ಕೊನೆಗೆ ಹೌರಿಟ್ಜ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು, ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 17 ಸಾವಿರ ರನ್ನುಗಳನ್ನು ತಲುಪುವ ಗುರಿಯಿಂದ 7 ರನ್ನುಗಳಷ್ಟು ಹಿಂದೆ ಉಳಿದುಬಿಟ್ಟರು.
ಉಳಿದಂತೆ ನಾಯಕ ಧೋನಿ 26 ರನ್ ಮಾಡಿ ಔಟಾದರೆ, ರೈನಾ 17, ಯುವರಾಜ್ 12, ಕೋಹ್ಲಿ 10 ರನ್ ಗಳಿಸಲಷ್ಟೇ ಶಕ್ತರಾದರು. ರವೀಂದ್ರ ಜಡೇಜಾ (7) ಮತ್ತೆ ವಿಫಲರಾದರು.
ಇಷ್ಟೆಲ್ಲದರ ನಡುವೆಯೂ, ಸರಣಿಗೆ ಮುನ್ನ ಬೌನ್ಸರ್‌ನಿಂದ ಭಾರತವನ್ನು ಕಂಗೆಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಮಿಶೆಲ್ ಜಾನ್ಸನ್ ದಯನೀಯ ವೈಫಲ್ಯ ಕಂಡು 9 ಓವರುಗಳಲ್ಲಿ 74 ರನ್ ಬಿಟ್ಟುಕೊಡಬೇಕಾಯಿತು.
ಸ್ಫೋಟಕ ಆರಂಭ ದೊರಕಿಸಿಕೊಟ್ಟ ವೀರೇಂದ್ರ ಸೆಹ್ವಾಗ್ 19 ಎಸೆತಗಳಿಂದ 30 ರನ್ ಚಚ್ಚಿ ವಿಕೆಟ್ ಒಪ್ಪಿಸಿದರು. ಅಂತಾರಾಷ್ಟ್ರೀಯ ಏಕದಿನದಲ್ಲಿ 17,000 ರನ್ ಪೂರ್ಣಗೊಳಿಸುವ ನಿರೀಕ್ಷೆಯಲ್ಲಿದ್ದ ಸಚಿನ್ ತೆಂಡೂಲ್ಕರ್‌ರನ್ನು ನಿರಾಸೆ ಮಾಡಿದವರು ನಥಾನ್ ಹೌರಿಟ್ಜ್. ಅವರು ತಾಳ್ಮೆಯುತ ಬ್ಯಾಟಿಂಗ್ ಮಾಡುತ್ತಿದ್ದಾಗ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು. ಮಾಸ್ಟರ್ ಬ್ಲಾಸ್ಟರ್ 68 ಎಸೆತಗಳಿಂದ 40 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಬೆನ್ನಿಗೆ 12 ರನ್ ಗಳಿಸಿದ್ದ ಯುವರಾಜ್ ಸಿಂಗ್ ರನ್ನೌಟಿಗೆ ಬಲಿಯಾದರು. ಅವರು 21 ಎಸೆತಗಳನ್ನೆದುರಿಸಿದ್ದರು. ಅದಕ್ಕೂ ಮೊದಲು ವಿರಾಟ್ ಕೋಹ್ಲಿ 10 ರನ್ ಗಳಿಸಿ ಡಾಗ್ ಬೊಲ್ಲಿಂಜರ್‌ಗೆ ವಿಕೆಟ್ ಒಪ್ಪಿಸಿದ್ದರು. ಬಳಿಕ 46 ಎಸೆತಗಳಲ್ಲಿ 26 ರನ್ ಮಾಡಿದ್ದ ಮಹೇಂದ್ರ ಸಿಂಗ್ ಧೋನಿ 32ನೇ ಓವರಿನಲ್ಲಿ ವಿಕೆಟ್ ಒಪ್ಪಿಸಿದಾಗ ತಂಡದ ಮೊತ್ತ 145 ಮಾತ್ರ. ಹೆಚ್ಚು ಕಾಲ ನಿಲ್ಲದ ಸುರೇಶ್ ರೈನಾ 17 ರನ್ ಮಾಡಿ ನಿರ್ಗಮಿಸಿದರು.
ಆಸ್ಟ್ರೇಲಿಯಾ ಇನ್ನಿಂಗ್ಸ್... ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸೀಸ್, ಭಾರತೀಯ ಬೌಲರುಗಳ ಕ್ರಮಬದ್ಧ ದಾಳಿಯೆದುರು 250ಕ್ಕೆ ಸರ್ವಪತನ ಕಂಡಿದ್ದರು. ಆಸ್ಟ್ರೇಲಿಯಾ 49.2 ಓವರುಗಳಲ್ಲಿ 250 ರನ್ ಗಳಿಸಲಷ್ಟೇ ಶಕ್ತವಾಯಿತು.
ಕ್ಯಾಮರೂನ್ ವೈಟ್ (62) ಮತ್ತು ರಿಕಿ ಪಾಂಟಿಂಗ್ (52) ಅರ್ಧಶತಕಗಳು ಹಾಗೂ ಶೇನ್ ವಾಟ್ಸನ್ (49) ಮತ್ತು ಮೈಕೆಲ್ ಹಸ್ಸಿ(40)ಯವರ ಅಮೂಲ್ಯ ಆಟ ಆಸ್ಟ್ರೇಲಿಯಾಕ್ಕೆ ಜೀವಜಲವಾಗಿತ್ತು. ಪ್ರವಾಸಿಗರಲ್ಲಿ ನಾಲ್ವರು 40ರ ಗಡಿಯನ್ನು ದಾಟಿದ್ದರೂ ಯಾರೊಬ್ಬರೂ ಬೃಹತ್ ಇನ್ನಿಂಗ್ಸ್ ಕಟ್ಟುವ ಸಾಹಸದಲ್ಲಿ ಸಫಲರಾಗಲಿಲ್ಲ.
ಆಶಿಶ್ ನೆಹ್ರಾ ಮೂರು, ಹರಭಜನ್ ಸಿಂಗ್ ಎರಡು ಹಾಗೂ ಯುವರಾಜ್ ಸಿಂಗ್ ಒಂದು ವಿಕೆಟ್ ಪಡೆದರೆ, ಈ ಪಂದ್ಯದಲ್ಲಿ ನಾಲ್ಕು ರನ್ನೌಟುಗಳು ದಾಖಲಾದವು. ಆ ಮೂಲಕ ಫೀಲ್ಡಂಗ್ ಕೊಂಚ ಸುಧಾರಿಸಿದೆ ಎಂಬ ಸಂಕೇತವನ್ನು ಟೀಮ್ ಇಂಡಿಯಾ ನೀಡಿದೆ.
ಕಳೆದ ಪಂದ್ಯದಿಂದ ಹೊರಗುಳಿದಿದ್ದ ಶಾನ್ ಮಾರ್ಷ್ ಜತೆ ಆರಂಭಿಕ ಆಟಗಾರರಾಗಿ ಶೇನ್ ವಾಟ್ಸನ್ ಕಣಕ್ಕಿಳಿದಿದ್ದರು. 23 ಎಸೆತಗಳನ್ನೆದುರಿಸಿದರೂ ಹೆಚ್ಚು ರನ್ ಕಲೆ ಹಾಕಲು (5) ವಿಫಲರಾದ ಮಾರ್ಷ್‌ರವರು ಆಶಿಶ್ ನೆಹ್ರಾರವರಿಂದ ಔಟಾದರು.
ನಂತರ ವಾಟ್ಸನ್ ಜತೆ ಸೇರಿದ್ದು ನಾಯಕ ಪಾಂಟಿಂಗ್. ಇವರಿಬ್ಬರ ಜತೆಯಾಟ ಆಸ್ಟ್ರೇಲಿಯಾಕ್ಕೆ ಅಲ್ಪ ಮಟ್ಟದ ಚೇತರಿಕೆ ನೀಡಿತು. ಎರಡನೇ ವಿಕೆಟಿಗೆ ಇವರು 10.3 ಓವರುಗಳಲ್ಲಿ 64 ರನ್ನುಗಳ ಭಾಗೀದಾರಿಕೆ ನೀಡಿದ್ದರು.
ಈ ಹೊತ್ತಲ್ಲಿ ಕಳಚಿಕೊಂಡವರು ವಾಟ್ಸನ್. ಅರ್ಧಶತಕದಂಚಿನಲ್ಲಿದ್ದ (49) ಅವರನ್ನು ಹರಭಜನ್ ಸಿಂಗ್ ಮೊದಲ ಎಸೆತದಲ್ಲೇ ಪೆವಿಲಿಯನ್‌ಗೆ ಕಳುಹಿಸಿದ್ದರು. ವಾಟ್ಸನ್ ಎದುರಿಸಿದ್ದ 52 ಎಸೆತಗಳಲ್ಲಿ ಆರನ್ನು ಬೌಂಡರಿ ಗೆರೆ ಮುಟ್ಟಿಸಿದ್ದರು.
ಬಳಿಕ ಪಾಂಟಿಂಗ್‌ರನ್ನು ಸೇರಿಕೊಂಡ ಹಸ್ಸಿ ಕಳೆದ ಮೂರು ಪಂದ್ಯಗಳ ಆಟವನ್ನು ನೆನಪಿಸಿದರೂ ಅರ್ಧಶತಕ ಪೂರೈಸಲು ಸಾಧ್ಯವಾಗಲಿಲ್ಲ. ಹಸ್ಸಿ ಜತೆ ಪಾಂಟಿಂಗ್ ನಾಲ್ಕನೇ ವಿಕೆಟಿಗೆ ಅಗತ್ಯ ಪಾಲುದಾರಿಕೆ ನೀಡಿದ್ದರು. ಅವರಿಬ್ಬರು 11.2 ಓವರುಗಳಲ್ಲಿ 73 ರನ್ ಮಾಡುವ ಮೂಲಕ ತಂಡ ತೀರಾ ಆಪತ್ತಿಗೆ ಸಿಲುಕುವುದರಿಂದ ರಕ್ಷಿಸಿದ್ದರು.
52 ರನ್ ಗಳಿಸಿದ್ದ ಪಾಂಟಿಂಗ್‌ರನ್ನು ಔಟ್ (ರನ್ನೌಟ್) ಮಾಡಿದ್ದು ರವೀಂದ್ರ ಜಡೇಜಾ. ಪಾಂಟಿಂಗ್ ಪತನದೊಂದಿಗೆ ಮೂರನೇ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ 27 ಓವರುಗಳಲ್ಲಿ 123 ರನ್ ಗಳಿಸಿತ್ತು.
ಮತ್ತೊಂದು ಕಡೆಯಿಂದ ಆಕರ್ಷಕ ಹೊಡೆತಗಳಿಗೆ ಮುಂದಾಗುತ್ತಿದ್ದ ಹಸ್ಸಿ 40 ರನ್ ಗಳಿಸಿದ್ದಾಗ ಯುವರಾಜ್ ಸಿಂಗ್ ಎಸೆತವನ್ನು ಇಶಾಂತ್ ಶರ್ಮಾ ಕೈಗೆ ನೀಡಿ ಹೊರಟು ಹೋದರು. ಆ ಮೂಲಕ ಸತತ ನಾಲ್ಕನೇ ಅರ್ಧಶತಕ ದಾಖಲಿಸುವ ಅವರ ಕನಸು ನನಸಾಗಲಿಲ್ಲ.
ಈ ನಡುವೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಕ್ಯಾಮರೂನ್ ವೈಟ್‌ರನ್ನು ತಡೆದದ್ದು ನೆಹ್ರಾ. 71 ಎಸೆತ ಎದುರಿಸಿದ್ದ ಅವರು 62 ರನ್ ದಾಖಲಿಸಿದ್ದಾಗ ನೆಹ್ರಾ ಬೌಲಿಂಗ್‌ನ ಎಸೆತದಲ್ಲಿ ಅವರಿಂದಲೇ ರನ್ನೌಟಿಗೊಳಗಾದರು.
ಮೋಯೆಸೆಸ್ ಹೆನ್ರಿಕ್ಸ್ (6)ರನ್ನು ಹರಭಜನ್ ಹಾಗೂ ಮಿಚ್ಚೆಲ್ ಜಾನ್ಸನ್ (8) ಮತ್ತು ಪೀಟರ್ ಸಿದ್ಲೇ (1) ಯವರಿಗೆ ನೆಹ್ರಾ ಪೆವಿಲಿಯನ್ ದಾರಿ ತೋರಿಸಿದರು. ಗ್ರಹಾಂ ಮನಾವ್ (7) ಮತ್ತು ಡಾಗ್ ಬೊಲ್ಲಿಂಜೆರ್ (0) ರನ್ನೌಟಾಗಿದ್ದರು.
ಪಂದ್ಯಕ್ಕೆ ಗಾಯಾಳುವಾಗಿರುವ ಗೌತಮ್ ಗಂಭೀರ್ ಲಭ್ಯರಿರಲಿಲ್ಲ. ಆದರೆ ವೀರೇಂದ್ರ ಸೆಹ್ವಾಗ್ ಫಿಟ್ನೆಸ್ ಕಂಡುಕೊಂಡಿದ್ದು, ಕಣಕ್ಕಿಳಿದಿದ್ದರು. ಗಂಭೀರ್ ಮತ್ತು ಸೆಹ್ವಾಗ್ ಇಬ್ಬರದ್ದೂ ಮೊಹಾಲಿ ಏಕದಿನ ಪಂದ್ಯಕ್ಕೆ ಸಂಶಯ ಎನ್ನಲಾಗಿತ್ತು. ಆದರೆ ಸೆಹ್ವಾಗ್ ಸುಧಾರಿಸಿಕೊಂಡಿದ್ದಾರೆ. ಗಂಭೀರ್ ಬದಲಿಗೆ ವಿರಾಟ್ ಕೋಹ್ಲಿ ಆಡಿದ್ದರು.
ಏಳು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಸೋತಿದ್ದ ಭಾರತ ನಂತರದ ಎರಡೂ ಪಂದ್ಯಗಳಲ್ಲಿ ಜಯ ದಾಖಲಿಸುವ ಮೂಲಕ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿತ್ತು. ಇದೀಗ ಸರಣಿಯು ಸಮಬಲದಲ್ಲಿದೆ. ಮುಂದಿನ ಪಂದ್ಯ ಗುರುವಾರ (ನ.5ರಂದು) ಹೈದರಾಬಾದಿನಲ್ಲಿ ನಡೆಯಲಿದೆ.