ಆಸ್ಟ್ರೇಲಿಯಾ ತಂಡದ ಗಾಯಾಳುಗಳ ಪಟ್ಟಿಗೆ ದಿನಕ್ಕೊಬ್ಬರೆಂಬಂತೆ ಆಟಗಾರರು ಸೇರ್ಪಡೆಯಾಗುತ್ತಿದ್ದು, ನಾಲ್ಕನೇ ಏಕದಿನದಲ್ಲಿ ಗಾಯಗೊಂಡಿದ್ದ ವೇಗಿ ಪೀಟರ್ ಸಿದ್ಲೇ ಇದೀಗ ತವರಿಗೆ ಹೊರಟಿದ್ದಾರೆ.
ಮೊಹಾಲಿಯಲ್ಲಿ ಭಾರತ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಸಿದ್ಲೇ ಗಾಯಗೊಂಡಿದ್ದರು. ಅವರು ಸರಣಿಯ ಮಧ್ಯದಲ್ಲೇ ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ ಎಂದು ತಂಡ ಪ್ರಕಟಿಸಿದೆ.
ಭಾರತದ ವಿರುದ್ಧ ಕಳೆದ ರಾತ್ರಿ ಜಯಿಸಿದ ನಾಲ್ಕನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವೇಗದ ಬೌಲರ್ ಪೀಟರ್ ಸಿದ್ಲೇಯವರು ಎಡ ಬದಿಯ ಜುಮ್ಮು ತೊಂದರೆಗೊಳಗಾಗಿದ್ದು, ಅವರು ತವರಿಗೆ ಮರಳಲಿದ್ದಾರೆ. ಮುಂದಿನ ಪಂದ್ಯಗಳಿಗೆ ಅವರು ಲಭ್ಯರಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ತಿಳಿಸಿದೆ.
ನಿನ್ನೆಯ ಪಂದ್ಯದಲ್ಲಿ ಸಿದ್ಲೇಯವರು ಕೇವಲ ಐದು ಓವರುಗಳ ಕಾಲ ಮಾತ್ರ ಬೌಲಿಂಗ್ ಮಾಡಿದ್ದರು. ಅವರ ಗಾಯ ಗಂಭೀರವಾಗಿರದ ಹೊರತೂ ಹೆಚ್ಚಿನ ಅಪಾಯವನ್ನು ತಂದುಕೊಳ್ಳಬಾರದೆಂಬ ದೃಷ್ಟಿಯಿಂದ ವೇಗಿಯನ್ನು ಆಡಿಸದೇ ಇರುವ ನಿರ್ಧಾರಕ್ಕೆ ಬರಲಾಗಿದೆ ಎಂದು ಫಿಸಿಯೋ ಕೆವಿನ್ ಸಿಮ್ಸ್ ತಿಳಿಸಿದ್ದಾರೆ.
ಸಿದ್ಲೇಯವರ ಗಾಯ ಈಗ ಗಂಭೀರವಾಗಿ ಕಾಣಿಸುತ್ತಿಲ್ಲ. ಆದರೂ ಅವರು ಮುಂದಿನ ವಾರದೊಳಗೆ ಸುರಕ್ಷಿತವಾಗಿ ಬೌಲಿಂಗ್ ಮಾಡುತ್ತಾರೆ ಎನ್ನುವುದು ಸಾಧ್ಯವಿಲ್ಲ. ಹಾಗಾಗಿ ಪ್ರವಾಸದಿಂದ ಅವರನ್ನು ವಾಪಸು ಕಳುಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಇದೀಗ ಸಿದ್ಲೇಯವರ ಬದಲಿಗೆ ಬೇರೆ ಆಟಗಾರರನ್ನು ಕಳುಹಿಸುವ ಕುರಿತು ಸಮಾಲೋಚನೆ ನಡೆಸುತ್ತಿದೆ. ಶೀಘ್ರದಲ್ಲೇ ಈ ಸಂಬಂಧ ಪ್ರಕಟಣೆ ನಿರೀಕ್ಷಿಸಬಹುದಾಗಿದೆ ಎಂದು ತಂಡ ತಿಳಿಸಿದೆ.
ಭಾರತ ವಿರುದ್ಧದ ಸರಣಿಯ ಸಂದರ್ಭದಲ್ಲಿ ಪ್ರವಾಸಿ ತಂಡವು ಹಲವು ಗಾಯಾಳು ಸಮಸ್ಯೆಗಳನ್ನೆದುರಿಸುತ್ತಿದೆ. ಉಪನಾಯಕ ಹಾಗೂ ಮಧ್ಯಮ ಕ್ರಮಾಂಕದ ಪ್ರಮುಖ ದಾಂಡಿಗ ಮೈಕೆಲ್ ಕ್ಲಾರ್ಕೆಯವರನ್ನು ಹೊರತುಪಡಿಸಿದ ತಂಡ ಭಾರತ ಪ್ರವಾಸ ಕೈಗೊಂಡ ನಂತರ ವೇಗಿ ಬ್ರೆಟ್ ಲೀ, ಆಲ್-ರೌಂಡರ್ ಜೇಮ್ಸ್ ಹೋಪ್ಸ್, ವಿಕೆಟ್ ಕೀಪರ್ ಟಿಮ್ ಪಾಯ್ನೆ ಗಾಯಾಳುಗಳಾಗಿ ತವರಿಗೆ ಮರಳಿದ್ದರು.
ಪ್ರಸಕ್ತ ಸರಣಿಯು 2-2ರ ಸಮಬಲದಲ್ಲಿದ್ದು, ಐದನೇ ಏಕದಿನ ಪಂದ್ಯ ಗುರುವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.