ಆಸ್ಟ್ರೇಲಿಯಾ ವಿರುದ್ಧದ ಏಳು ಏಕದಿನ ಸರಣಿಯು ಇದೀಗ 2-2ರ ಸಮಬಲದಲ್ಲಿದ್ದು, ಇದುವರೆಗಿನ ಅಂಕಿ-ಅಂಶಗಳ ಪ್ರಕಾರ ಈ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ.
ಕಳೆದ ಪಂದ್ಯದಲ್ಲಿ 26 ರನ್ ಗಳಿಸಿದ ಧೋನಿ ಸರಣಿಯ ಉಭಯ ತಂಡಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರು 85ರ ಸರಾಸರಿಯಲ್ಲಿ 255 ರನ್ ಗಳಿಸಿದ್ದಾರೆ.
ಇದರಲ್ಲಿ ಒಂದು ಶತಕ (124), ಒಂದು ಅರ್ಧಶತಕ, 21 ಬೌಂಡರಿಗಳು ಹಾಗೂ ಮೂರು ಸಿಕ್ಸರ್‌ಗಳು ಸೇರಿವೆ. ಇದೇ ಪಂದ್ಯದಲ್ಲಿ ದಾಖಲಾದ ಕೆಲವು ವಿಶಿಷ್ಟತೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
- ಧೋನಿ ನಂತರದ ಸ್ಥಾನದಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರನಾಗಿ ಮೈಕೆಲ್ ಹಸ್ಸಿ ಕಾಣಿಸಿಕೊಂಡಿದ್ದಾರೆ. ಅವರು ನಾಲ್ಕು ಪಂದ್ಯಗಳಲ್ಲಿ 82ರ ಸರಾಸರಿಯಲ್ಲಿ 247 ರನ್ ಪೇರಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕ, 19 ಬೌಂಡರಿ ಹಾಗೂ ಮೂರು ಸಿಕ್ಸರುಗಳು ಸೇರಿವೆ.
- 68 ಎಸೆತಗಳಿಂದ 40 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಮೊಹಾಲಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡಿದ್ದಾರೆ. ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕಗಳ ಸಹಿತ 281 ರನ್ ಗಳಿಸಿರುವ ಅವರದ್ದು 56.20ರ ಸರಾಸರಿ.
- 38ಕ್ಕೆ ಮೂರು ವಿಕೆಟ್ ಪಡೆಯುವ ಮೂಲಕ ಡಾಗ್ ಬೊಲ್ಲಿಂಜೆರ್ ಭಾರತದ ವಿರುದ್ಧ ತನ್ನ ಅತ್ಯುತ್ತಮ ಪ್ರದರ್ಶನ ದಾಖಲಿಸಿದರು.
- ಮೊಹಾಲಿಯಲ್ಲಿ ಹರಭಜನ್ ಸಿಂಗ್ ತನ್ನ ಎರಡನೇ ಗರಿಷ್ಠ ವೈಯಕ್ತಿಕ ಮೊತ್ತ (31) ದಾಖಲಿಸಿದ್ದಾರೆ. ಈ ಹಿಂದೆ 2007ರ ನವೆಂಬರ್ 8ರಂದು ಪಾಕಿಸ್ತಾನ ವಿರುದ್ಧ ಅವರು ಅಜೇಯ 38 ರನ್ ದಾಖಲಿಸಿದ್ದು ಮೊಹಾಲಿಯಲ್ಲಿ ಅವರು ಗರಿಷ್ಠ ಮೊತ್ತ.
- 29 ರನ್ನುಗಳಿಗೆ ಮೂರು ವಿಕೆಟು ಪಡೆಯುವುದರೊಂದಿಗೆ ಶೇನ್ ವಾಟ್ಸನ್ ಭಾರತ ವಿರುದ್ಧ ತನ್ನ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.
- ಇದುವರೆಗೆ ಭಾರತದ ವಿರುದ್ಧ ಎಂಟು ಏಕದಿನ ಪಂದ್ಯಗಳನ್ನು ಆಡಿರುವ ವಾಟ್ಸನ್ ಮೊತ್ತ ಮೊದಲ ಬಾರಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗೆದ್ದರು.
- ನಾಯಕ ರಿಕಿ ಪಾಂಟಿಂಗ್ ಭಾರತದ ವಿರುದ್ಧ ಈ ಪಂದ್ಯದಲ್ಲಿ ಒಂಬತ್ತನೇ ಅರ್ಧಶತಕ (52) ದಾಖಲಿಸಿದರು. ಒಟ್ಟಾರೆ ಏಕದಿನದಲ್ಲಿ ಇದು 73ನೇ ಅರ್ಧಶತಕದ ಕೀರ್ತಿ ಅವರದ್ದು.
- ಈ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪೇರಿಸಿದ ಅತಿ ಕಡಿಮೆ ಮೊತ್ತ (226) ಕಳೆದ ಪಂದ್ಯದಲ್ಲಿ ದಾಖಲಾಯಿತು.