ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ಜತೆಗಿನ ವಿವಾದಗಳಿಂದಾಗಿ ಕಳೆದ ಹಲವಾರು ತಿಂಗಳುಗಳಿಂದ ತಂಡದಿಂದ ಹೊರಗುಳಿದಿದ್ದ ಕ್ರಿಸ್ ಗೇಲ್ ಮತ್ತೆ ಸೇರ್ಪಡೆಯಾಗಿದ್ದು, ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ನವೆಂಬರ್ 18ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೆರೆಬಿಯನ್ ತಂಡ ಮೂರು ಟೆಸ್ಟ್‌ಗಳನ್ನು ಆಡಲಿದ್ದು, ಸರಣಿಯಲ್ಲಿ ಗೇಲ್ ನಾಯಕನಾಗಿ ತಂಡವನ್ನು ಮುನ್ನಡೆಸುವರು.
ಇದರೊಂದಿಗೆ ಕಳೆದ ಹಲವಾರು ಸಮಯದಿಂದ ಕತ್ತಲಲ್ಲಿದ್ದ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ಹೊಸ ಕಳೆ ಪಡೆದುಕೊಂಡಂತಾಗಿದೆ. ಇತ್ತೀಚೆಗಷ್ಟೇ ಆಟಗಾರರ ಮತ್ತು ಕ್ರಿಕೆಟ್ ಮಂಡಳಿಯ ನಡುವಿನ ವಿವಾದ ಬಗೆಹರಿದಿತ್ತು.
ತಾನು ಮತ್ತೆ ನಾಯಕನಾಗಲು ಬಯಸುತ್ತಿದ್ದೇನೆ ಎಂದು ಗೇಲ್ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಇದೀಗ ಅವರನ್ನು ನಾಯಕನನ್ನಾಗಿ ಪುನರಾಯ್ಕೆಗೊಳಿಸಲಾಗಿದ್ದರೂ, ಸುದೀರ್ಘಾವಧಿ ಭರವಸೆ ನೀಡಲಾಗಿಲ್ಲ.
ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ತಂಡಕ್ಕೆ ಡೇವಿಡ್ ವಿಲಿಯಮ್ಸ್ ತರಬೇತುದಾರರಾಗಿ ಹಾಗೂ ಮಾಜಿ ವೇಗಿ ಜೋಯೆಲ್ ಗಾರ್ನರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ತಂಡದಿಂದ ಹೊರಗುಳಿದಿದ್ದ ಹಿರಿಯ ಆಟಗಾರರು ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದ್ವಾಯ್ನೆ ಬ್ರಾವೋ, ಶಿವನಾರಾಯಣೆ ಚಂದರಪಾಲ್ ಮರಳಿದ್ದರೆ, ಹಲವು ಹೊಸ ಮುಖಗಳೂ ಕಾಣಿಸಿಕೊಂಡಿವೆ.
ವೆಸ್ಟ್ ಇಂಡೀಸ್ ಪ್ರಕಟಿಸಿರುವ ತಂಡವಿದು: ಕ್ರಿಸ್ ಗೇಲ್ (ನಾಯಕ), ಆಡ್ರಿಯಾನ್ ಭರತ್, ಸುಲೈಮಾನ್ ಬೆನ್, ದ್ವಾಯ್ನೆ ಬ್ರಾವೋ, ಶಿವನಾರಾಯಣೆ ಚಂದರಪಾಲ್, ನರ್ಸಿಂಗ್ ದ್ಯೋನಾರೈನ್, ತ್ರಾವಿಸ್ ದೋಲಿನ್, ಬ್ರೆಂಡನ್ ನಾಶ್, ದನೇಶ್ ರಾಮ್ದಿನ್, ರವಿ ರಾಂಪಾಲ್, ಕೇಮರ್ ರೋಚ್, ಡರೇನ್ ಸಾಮಿ, ರಾಮನರೇಶ್ ಸರ್ವಾನ್, ಜೆರೋಮ್ ಟೇಲರ್ ಮತ್ತು ಗೇವಿನ್ ಟೊಂಗೆ.