ಜಮ್ಮು-ಕಾಶ್ಮೀರ ತಂಡದ ವಿರುದ್ಧ ಶ್ರೀನಗರದಲ್ಲಿ ನಡೆಯಬೇಕಿದ್ದ ಪಂದ್ಯವೊಂದಕ್ಕೆ ಭದ್ರತಾ ಕಾರಣಗಳನ್ನು ನೀಡಿ ಆಡಲು ನಿರಾಕರಿಸಿದ ಸರ್ವಿಸಸ್ ತಂಡ ಈ ವರ್ಷದ ರಣಜಿ ಟ್ರೋಫಿ ಆಡದಂತೆ ಬಿಸಿಸಿಐ ನಿಷೇಧ ಹೇರಿದೆ. ಕೊನೆಯ ಕ್ಷಣದಲ್ಲಿ ಪಂದ್ಯದಿಂದ ಹಿಂದಕ್ಕೆ ಸರಿದ ಸರ್ವಿಸಸ್ ತಂಡದ ವಿರುದ್ಧ ಜಮ್ಮು-ಕಾಶ್ಮೀರ ಕ್ರಿಕೆಟ್ ಮಂಡಳಿ ಕಿಡಿಕಾರಿದ ನಂತರ ಬಿಸಿಸಿಐ ಈ ಕ್ರಮಕ್ಕೆ ಮುಂದಾಗಿದೆ.
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಮಂಡಳಿ (ಜೆಕೆಸಿಎ) ತಂಡದ ವಿರುದ್ಧ ಶ್ರೀನಗರದಲ್ಲಿ ನವೆಂಬರ್ 3ರಿಂದ ನವೆಂಬರ್ 6ರವರೆಗೆ ಸರ್ವಿಸಸ್ ಕ್ರೀಡಾ ನಿಯಂತ್ರಣ ಮಂಡಳಿ (ಎಸ್ಎಸ್‌ಸಿಬಿ) ರಣಜಿ ಪಂದ್ಯವೊಂದನ್ನು ಆಡಬೇಕಾಗಿತ್ತು. ಸುರಕ್ಷತಾ ಕಾರಣಗಳನ್ನು ಕೊನೆಯ ಕ್ಷಣದಲ್ಲಿ ಮುಂದಿಟ್ಟ ಸರ್ವಿಸಸ್ ಆಡಲು ನಿರಾಕರಿಸಿತ್ತು. ಇದರಿಂದಾಗಿ ಜಮ್ಮು-ಕಾಶ್ಮೀರದ ಕ್ರಿಕೆಟ್ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದರು.
ಪಂದ್ಯದಿಂದ ಹೊರಗುಳಿದ ಎಸ್ಎಸ್‌ಸಿಬಿ, ಶ್ರೀನಗರಕ್ಕೆ ತನ್ನ ತಂಡವನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿತ್ತು. ಈ ಕಾರಣಕ್ಕಾಗಿ ಬಿಸಿಸಿಐ ದೇಶೀಯ ಟೂರ್ನಮೆಂಟ್ ನಿಯಮಾವಳಿಗಳ ಅನುಸಾರ ಎಸ್ಎಸ್‌ಸಿಬಿಯನ್ನು 2009-10ರ ರಣಜಿ ಟ್ರೋಫಿಯಿಂದ ಅನರ್ಹಗೊಳಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಎನ್. ಶ್ರೀನಿವಾಸನ್ ಹೇಳಿಕೆ ನೀಡಿದ್ದಾರೆ.
ಸರ್ವಿಸಸ್ ವರ್ತನೆಯಿಂದ ತೀವ್ರ ಆಕ್ರೋಶಗೊಂಡಿದ್ದ ಜಮ್ಮು-ಕಾಶ್ಮೀರ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಫಾರೂಕ್ ಅಬ್ದುಲ್ಲಾರವರು, ತಾನು ಇದರಿಂದಾಗಿ ತೀವ್ರ ಅಸಮಾಧಾನಗೊಂಡಿದ್ದು ವಿಚಾರವನ್ನು ಪ್ರಧಾನಮಂತ್ರಿ ಮತ್ತು ಬಿಸಿಸಿಐ ಗಮನಕ್ಕೆ ತರಲಿರುವುದಾಗಿ ಹೇಳಿಕೊಂಡಿದ್ದರು.
ಕಾಶ್ಮೀರದಲ್ಲಿ ಸಾಮಾನ್ಯ ಪರಿಸ್ಥಿತಿ ನೆಲೆಸಿದೆ ಎಂದಿರುವ ಪ್ರಧಾನಮಂತ್ರಿ, ರಕ್ಷಣಾ ಮಂತ್ರಿ ಮತ್ತು ಗೃಹಸಚಿವರನ್ನು ಸರ್ವಿಸಸ್ ನಿರ್ಲಕ್ಷಿಸಿದೆ. ಕಾಶ್ಮೀರದಲ್ಲಿನ ಸಾಮಾನ್ಯ ಪರಿಸ್ಥಿತಿಯನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ಬಯಸುತ್ತಿಲ್ಲ ಎಂಬುದನ್ನು ಇದು ತೋರಿಸುತ್ತಿದೆ ಎಂದು ಅಬ್ದುಲ್ಲಾ ಕಿಡಿ ಕಾರಿದ್ದರು.
ಶ್ರೀನಗರದ ಶೇರ್ ಇ ಕಾಶ್ಮೀರ್ ಕ್ರೀಡಾಂಗಣದಲ್ಲಿ ಐದು ವರ್ಷಗಳ ಅಂತರದ ನಂತರ ಮೊತ್ತ ಮೊದಲ ಬಾರಿಗೆ ರಣಜಿ ಪಂದ್ಯವೊಂದನ್ನು ಆಯೋಜಿಸಲಾಗಿತ್ತು. ಸಾಕಷ್ಟು ಭದ್ರತೆಯ ಭರವಸೆಯನ್ನು ನೀಡಲಾಗಿತ್ತಾದರೂ, ಕೊನೆಯ ಕ್ಷಣದಲ್ಲಿ ಸರ್ವಿಸಸ್ ತನ್ನ ನಿರ್ಧಾರವನ್ನು ಬದಲಿಸಿತ್ತು.
ಇತ್ತೀಚೆಗಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟಗಾರನೊಬ್ಬ ಬಂಧನಕ್ಕೊಳಗಾಗುವ ಮೂಲಕ ಜಮ್ಮು-ಕಾಶ್ಮೀರ ಕ್ರಿಕೆಟ್ ಮಂಡಳಿ ಸುದ್ದಿ ಮಾಡಿತ್ತು.
ಈ ತಂಡದ ಫರ್ವೇಜ್ ರಸೂಲ್ ಎಂಬ 22ರ ಹರೆಯದ ಆಟಗಾರನ ಬ್ಯಾಗಿನೊಳಗೆ ಬಾಂಬ್ ಇದೆ ಎಂಬ ಸಂಶಯದ ಮೇಲೆ ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ಆದರೆ ನಂತರ ರಸೂಲ್‌ನನ್ನು ಬಿಡುಗಡೆ ಮಾಡಿದ್ದ ಪೊಲೀಸರು, ಸಾಕಷ್ಟು ಸಾಕ್ಷ್ಯಗಳು ಲಭ್ಯವಿಲ್ಲ ಎಂದಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸರು ಕ್ಷಮೆಯಾಚಿಸಬೇಕೆಂದು ಜಮ್ಮು-ಕಾಶ್ಮೀರ ಆಗ್ರಹಿಸಿತ್ತು.