ಪಾಕಿಸ್ತಾನ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಬ್ಯಾಟ್ಸ್‌ಮನ್ ನಾಸಿರ್ ಜೆಮ್‌ಶೆಡ್‌ರಿಗೆ ಕಳೆದ ವರ್ಷದ ಪಾಕಿಸ್ತಾನ ಪ್ರವಾಸ ಸಂದರ್ಭದಲ್ಲಿ ಟೀಮ್ ಇಂಡಿಯಾ ದಾಂಡಿಗ ಗೌತಮ್ ಗಂಭೀರ್ ಅಮೂಲ್ಯ ಸಲಹೆಗಳನ್ನು ನೀಡಿದ್ದರಂತೆ.
ಇದೀಗ ಅಬುಧಾಬಿಯಲ್ಲಿ ಮತ್ತು ದುಬೈಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಲಯ ಕಳೆದುಕೊಂಡಿರುವ ಕಾರಣದಿಂದ ಪಾಕಿಸ್ತಾನ ನಾಸಿರ್‌ರನ್ನು ತಂಡಕ್ಕೆ ಪರಿಗಣಿಸಿಲ್ಲ. ಆದರೆ ಕಳೆದ ವರ್ಷದ ಭಾರತದ ಪ್ರವಾಸ ಸಂದರ್ಭದಲ್ಲಿ ಗಂಭೀರ್ ನೀಡಿದ ಸಲಹೆಗಳನ್ನು ಅವರೀಗ ನೆನಪಿಸಿಕೊಂಡಿದ್ದಾರೆ.
ಕಳೆದ ವರ್ಷ ಪಾಕಿಸ್ತಾನಕ್ಕೆ ಭಾರತ ತಂಡವು ಬಂದಿದ್ದಾಗ ಗಂಭೀರ್‌ರನ್ನು ನಾನು ಭೇಟಿಯಾಗಿದ್ದೆ. ಅವರು ಬ್ಯಾಟಿಂಗ್ ಸಂಬಂಧಪಟ್ಟಂತೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದರು ಎಂದು ಕ್ರಿಕೆಟ್ ವೆಬ್‌ಸೈಟ್ ಒಂದಕ್ಕೆ ನಾಸಿರ್ ತಿಳಿಸಿದ್ದಾರೆ.
ಈ ಪ್ರವಾಸದಲ್ಲಿ ನಾನು 43 ಎಸೆತಗಳಿಂದ ಅರ್ಧಶತಕ ದಾಖಲಿಸಿದ್ದೆ. ಆದರೆ ನಂತರ ಗಾಯಾಳುವಾಗಿ ಪಂದ್ಯದಿಂದ ನಿವೃತ್ತಿ ಪಡೆಯಬೇಕಾಯಿತು. ನಂತರ ನಾನು ಗೌತಮ್‌ರನ್ನು ಮುಖಾಮುಖಿಯಾಗಿ, ನನ್ನ ಬ್ಯಾಟಿಂಗ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಮತ್ತು ಎಲ್ಲಿ ಸುಧಾರಣೆ ಅಗತ್ಯವಿದೆ ಎಂದು ಅವರಲ್ಲಿ ಕೇಳಿದ್ದೆ ಎಂದು ನಾಸಿರ್ ಹೇಳಿದ್ದಾರೆ.
ಭಾರತವು ಕಳೆದ ವರ್ಷ ಏಷಿಯಾ ಕಪ್ ಟೂರ್ನಮೆಂಟ್‌ಗಾಗಿ ಪಾಕಿಸ್ತಾನ ಪ್ರವಾಸ ಮಾಡಿತ್ತು. ಈ ಸಂದರ್ಭದಲ್ಲಿ ನಾಸಿರ್ ಪಾಕಿಸ್ತಾನ ತಂಡದ ಸದಸ್ಯರಾಗಿದ್ದರು.
ಗಂಭೀರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಾಸಿರ್, ಅವರೊಬ್ಬ ಸ್ನೇಹಶೀಲ ವ್ಯಕ್ತಿತ್ವದವರಾಗಿದ್ದಾರೆ; ಸಲಹೆ ನೀಡುವಾಗ ತೀರಾ ಪ್ರಾಮಾಣಿಕತೆಯಿಂದ ವರ್ತಿಸುತ್ತಾರೆ ಎಂದರು.
ನನ್ನ ಬ್ಯಾಟಿಂಗ್‌ನಿಂದ ಪ್ರಭಾವಿತನಾಗಿದ್ದೇನೆ ಎಂದಿದ್ದ ಗಂಭೀರ್, ಅತ್ಯುತ್ತಮ ಹೊಡೆತಗಳನ್ನು ಆರಿಸುತ್ತೀರಿ ಎಂದು ಅವರು ಶ್ಲಾಘಿಸಿದ್ದರು ಎಂದು ನಾಸಿರ್ ಹೇಳಿದ್ದಾರೆ.
ದೊಡ್ಡ ದೊಡ್ಡ ಹೊಡೆತಗಳಿಗೆ ಕಾಯುವ ಬದಲು ಹೆಚ್ಚು ಸಿಂಗಲ್ ರನ್ನುಗಳನ್ನು ಗಳಿಸಲು ಯತ್ನಿಸಬೇಕು, ಅದರಲ್ಲೂ ಸ್ಪಿನ್ನರುಗಳು ಬೌಲಿಂಗ್ ಮಾಡುವಾಗ ಇದು ಅತ್ಯಗತ್ಯ. ವೇಗಿಗಳು ಬೌಲಿಂಗ್ ಮಾಡುವಾಗ ಅನಿಶ್ಚಿತತೆಯಿಂದ ನೋಡು, ಟ್ರ್ಯಾಕ್ ಕೆಳಗೆ ನೋಡುತ್ತಿರು, ಕ್ರೀಸ್‌ನ ಸುತ್ತ ಹೋಗುತ್ತಿರು. ಆ ಮೂಲಕ ನೀನೇನು ಮಾಡಲಿದ್ದಿ ಎಂಬುದನ್ನು ವೇಗಿಗಳಿಗೆ ತಿಳಿಯುವಂತೆ ಮಾಡು ಎಂದು ಅವರು ಸಲಹೆ ಮಾಡಿದ್ದರು ಎಂದಿದ್ದಾರೆ ನಾಸಿರ್.