ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ರಣಜಿಯಲ್ಲಿ ಪಾಂಡೆ, ದ್ರಾವಿಡ್ ದ್ವಿಶತಕದ ಜತೆಯಾಟ (Ranji Trophy | Rahul Dravid | Manish Pandey | Karnataka)
Feedback Print Bookmark and Share
 
ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಮಿಂಚಿರುವ ಮನೀಷ್ ಪಾಂಡೆ ಅಜೇಯ ಶತಕ (194*) ಹಾಗೂ ರಾಹುಲ್ ದ್ರಾವಿಡ್ ಅರ್ಧಶತಕ (97) ನೆರವಿನಿಂದ ಉತ್ತರ ಪ್ರದೇಶ ವಿರುದ್ಧ ಕರ್ನಾಟಕ 372 ರನ್ ದಾಖಲಿಸಿದೆ.

ಇಲ್ಲಿನ ಸಿವಿಲ್ ಲೈನ್ಸ್‌ನ ವಿಕ್ಟೋರಿಯಾ ಪಾರ್ಕ್ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಸೂಪರ್ ಲೀಗ್ ಬಿ ಗುಂಪಿನ ನಾಲ್ಕು ದಿನಗಳ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಉತ್ತರ ಪ್ರದೇಶ ಫೀಲ್ಡಿಂಗ್ ಆಯ್ದುಕೊಂಡಿತ್ತು. ದ್ರಾವಿಡ್ ಮತ್ತು ಪಾಂಡೆ ಅಮೋಘ ಆಟದ ನೆರವಿನಿಂದ ಪ್ರವಾಸಿ ಕರ್ನಾಟಕ ದಿನದಂತ್ಯಕ್ಕೆ (90 ಓವರು) ಐದು ವಿಕೆಟ್ ಕಳೆದುಕೊಂಡಿದೆ.

ಹನ್ನೆರಡು ಓವರುಗಳಲ್ಲಿ ಮೊದಲ ಮೂರು ವಿಕೆಟುಗಳನ್ನು ಕಳೆದುಕೊಂಡು ಕರ್ನಾಟಕ ಸಂಕಷ್ಟದಲ್ಲಿದ್ದಾಗ ಜತೆಯಾಗಿ ಅದ್ಭುತ ಪ್ರದರ್ಶನದ ಮೂಲಕ ನೆರವಾದದ್ದು ಮನೀಷ್ ಪಾಂಡೆ ಮತ್ತು ನಾಯಕ ರಾಹುಲ್ ದ್ರಾವಿಡ್. ಈ ಜೋಡಿ ನಾಲ್ಕನೇ ವಿಕೆಟಿಗೆ 61.1 ಓವರುಗಳಲ್ಲಿ 273 ರನ್ನುಗಳ ಜತೆಯಾಟ ನೀಡಿತ್ತು. ಪತನದ ಹಾದಿಯಲ್ಲಿದ್ದ ತಂಡಕ್ಕೆ ಇವರ ಭಾಗೀದಾರಿಕೆ ಪುಷ್ಠಿ ನೀಡಿತ್ತು.

185 ಎಸೆತಗಳಿಂದ 15 ಬೌಂಡರಿಗಳಿಗೆ ಕಾರಣರಾಗಿದ್ದ ದ್ರಾವಿಡ್ ಶತಕದಂಚಿನಲ್ಲಿದ್ದಾಗ (97) ರವಿಕಾಂತ್ ಶುಕ್ಲಾ ಮತ್ತು ಪ್ರವೀಣ್ ಗುಪ್ತಾ ಜಂಟಿ ಸಾಹಸದ ಪರಿಣಾಮ ರನ್ನೌಟಾಗಿ ವಿಕೆಟ್ ಒಪ್ಪಿಸಿದ್ದರು. ತನ್ನ ಕ್ರಿಕೆಟ್ ಶಕ್ತಿಯನ್ನು ಪ್ರಶ್ನಿಸುವವರಿಗೆ ಅವರು ದೇಶೀಯ ಮಟ್ಟದಲ್ಲಿ ಸ್ಪಷ್ಟ ಉತ್ತರವನ್ನು ನೀಡಿದ್ದನ್ನು ಕಂಡು ಅಭಿಮಾನಿಗಳು ಸಂಭ್ರಮದಿಂದ ಕುಣಿದಾಡಿದರೂ, ಶತಕವಂಚಿತರಾಗಿದ್ದಕ್ಕೆ ಮರುಗಿದ್ದಾರೆ.

ಎಗ್ಗಿಲ್ಲದೆ ಬ್ಯಾಟಿಂಗ್ ಮಾಡಿದ ಪಾಂಡೆ 238 ಎಸೆತಗಳನ್ನು ತಾಳ್ಮೆಯಿಂದ ಎದುರಿಸುವುದರೊಂದಿಗೆ ಪಂದ್ಯಕ್ಕೆ ಚುರುಕುತನವನ್ನೂ ನೀಡಿದ್ದರು. ಅವರು ತನ್ನ ಇನ್ನಿಂಗ್ಸ್‌ನಲ್ಲಿ 27 ಬೌಂಡರಿ ಹಾಗೂ ಒಂದು ಸಿಕ್ಸರನ್ನು ಎತ್ತಿದ್ದು, ಅಜೇಯ 194 ರನ್ನುಗಳನ್ನು ಗಳಿಸಿದ್ದಾರೆ.

ಬಾಲಚಂದ್ರ ಅಖಿಲ್ (17*) ಪಾಂಡೆಗೀಗ ಸಾಥ್ ನೀಡುತ್ತಿದ್ದು, ಆಟವನ್ನು ನಾಳೆಗೆ ಮುಂದೂಡಿದ್ದಾರೆ.

ಇದಕ್ಕೂ ಮೊದಲು ಆರಂಭಿಕ ಆಟಗಾರರಾದ ಕೆ.ಬಿ. ಪವನ್ (15) ಮತ್ತು ರಾಬಿನ್ ಉತ್ತಪ್ಪ (0), ಅಮಿತ್ ವರ್ಮಾ (5), ತಿಲಕ್ ನಾಯ್ಡು (12) ಬೇಗನೆ ವಿಕೆಟ್ ಕಳೆದುಕೊಂಡಿದ್ದರು.

ಉತ್ತರ ಪ್ರದೇಶ ಪರ ಭುವನೇಶ್ವರ್ ಕುಮಾರ್ ಎರಡು, ಆರ್.ಪಿ. ಸಿಂಗ್ ಮತ್ತು ಸಾಲಬ್ ಶ್ರೀವಾತ್ಸವ ತಲಾ ಒಂದೊಂದು ವಿಕೆಟ್ ಪಡೆದರು.
ಸಂಬಂಧಿತ ಮಾಹಿತಿ ಹುಡುಕಿ