ಆಲ್‌ರೌಂಡರ್ ಪ್ರದರ್ಶನ ನೀಡಿದ ಶಾಹಿದ್ ಆಫ್ರಿದಿ (70ರನ್, 2ವಿಕೆಟ್) ನೆರವಿನಿಂದ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ ಅಬುದಾಬಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು 138ರನ್‌ಗಳಿಂದ ಭರ್ಜರಿಯಾಗಿ ಜಯಿಸಿಕೊಂಡಿದೆ.
ಈ ಮೂಲಕ ಪಾಕಿಸ್ತಾನ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0ರ ಅಂತರದ ಮುನ್ನಡೆ ಪಡೆದುಕೊಂಡಿದೆ.
288ರ ಸವಾಲಿನ ಮೊತ್ತವನ್ನು ಬೆನ್ನತ್ತಿದ್ದ ಕಿವೀಸ್ ಕೇವಲ 39.2 ಓವರ್‌ಗಳಲ್ಲಿ 149ಕ್ಕೆ ಸರ್ವಪತನ ಕಂಡಿತ್ತು. ಪಾಕ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ ಶಾಹಿದ್ ಆಫ್ರಿದಿ (50ಎಸೆತಗಳಲ್ಲಿ 70ರನ್) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಾದರು.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನದ ಆರಂಭ ಕೆಟ್ಟದಾಗಿತ್ತು. ಆರಂಭಿಕ ಸಲ್ಮಾನ್ ಭಟ್ ಶೂನ್ಯಕ್ಕೆ ಮರಳಿದರು. ನಂತರ ಬಂದ ನಾಯಕ ಯೂನಿಸ್ ಖಾನ್ ಸಂಪಾದನೆ ಕೂಡಾ ಸೊನ್ನೆ.
ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಖಾಲೀದ್ ಲತೀಫ್ (64) ತಂಡಕ್ಕೆ ಆಸರೆಯಾದರು. ಅವರಿಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ಯೂಸುಫ್ 30ರನ್ ಗಳಿಸಿದರು. ಆದರೆ ಉಮರ್ ಅಕ್ಮಲ್ (9) ವಿಫಲರಾದರು.
ಬಿರುಸಿನ ಆಟ ಪ್ರದರ್ಶಸಿದ ಶಾಹಿದ್ ಆಫ್ರಿದಿ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮಾನ್ ಕಮ್ರಾನ್ ಅಕ್ಮಲ್ ಕಿವೀಸ್ ಬೌಲರ್‌ಗಳನ್ನು ಮನಬಂದತೆ ಚಚ್ಚಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಫ್ರಿದಿ ನಾಲ್ಕು ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 70ರನ್ ಗಳಿಸಿದರು.
ಕೊನೆಯ ಹಂತದಲ್ಲಿ ಸ್ಫೋಟಕ ಆಟಕ್ಕಿಳಿದ ಕಮ್ರಾನ್ 43 ಎಸೆತಗಳಲ್ಲಿ 67ರನ್ ಗಳಿಸಿ ಅಜೇಯರಾಗುಳಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳು ಒಳಗೊಂಡಿದ್ದವು. ಅಬ್ದುಲ್ ರಜಾಕ್ ಕೂಡಾ ಬಿರುಸಿನ 26ರನ್ ಗಳಿಸಿದರು.
ಒಟ್ಟಾರೆ ಪಾಕಿಸ್ತಾನ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 287ರನ್ ಗಳಿಸಿತು.
ಕುಸಿದ ಕಿವೀಸ್.. ಪಂದ್ಯದ ಯಾವುದೇ ಹಂತದಲ್ಲೂ ಪೈಪೋಟಿ ನೀಡದ ವೆಟ್ಟೋರಿ ಪಡೆ 39.2 ಓವರ್‌ಗಳಲ್ಲಿ 149ಕ್ಕೆ ಸರ್ವಪತನ ಕಂಡಿತ್ತು. ಆರಂಭಿಕರಾದ ಬ್ರೆಂಡಮ್ ಮೆಕಲಮ್ (21) ಮತ್ತು ರೆಮಾಂಡ್ (52) ತಂಡಕ್ಕೆ ಉತ್ತಮ ಆರಂಭವನ್ನೇ ಒದಗಿಸಿದ್ದರು.
ಆದರೆ ನಂತರ ಬಂದ ಗುಪ್ಟಿಲ್ (4), ರೋಸ್ ಟೇಲರ್ (0), ಸ್ಕ್ಟಾಟ್ ಸ್ಟೈರಿಸ್ (5) ವಿಫಲರಾದರು. ಸ್ವಲ್ಪ ಪ್ರತಿರೋಧ ತೋರಿದ ನಾಯಕ ವಿಟ್ಟೋರಿ 38ರನ್ ಗಳಿಸಿದರು. ಉಳಿದಂತೆ ಜೇಕಬ್ ಒರಮ್ (9), ವಿಕೆಟ್ ಕೀಪರ್ ಬ್ಯಾಟ್ಸ್‌ಮಾನ್ ಮೆಕಲಮ್ (0), ಬಟ್ಲರ್ (4), ಟಿಮ್ ಸೌಥಿ (1) ಮತ್ತು ಶೇನ್ ಬಾಂಡ್ ಅಜೇಯ 1ರನ್ ಗಳಿಸಿದರು.
ಪಾಕಿಸ್ತಾನ ಪರ ಉಮರ್ ಗುಲ್, ಅಬ್ದುಲ್ ರಜಾಕ್, ಸಯೀದ್ ಅಜ್ಮಲ್ ಮತ್ತು ಶಾಹೀದ್ ಆಫ್ರಿದಿ ತಲಾ ಎರಡು ಹಾಗೂ ಮೊಹಮ್ಮದ್ ಆಮೀರ್ ಒಂದು ವಿಕೆಟ್ ಕಿತ್ತರು.
ಸರಣಿಯ ಮುಂದಿನ ಎರಡು ಪಂದ್ಯಗಳು ಕ್ರಮವಾಗಿ ಶುಕ್ರವಾರ ಹಾಗೂ ಸೋಮವಾರ ನಡೆಯಲಿದೆ.