ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಸರ್ವಿಸಸ್ ಕ್ಷಮೆಯಾಚಿಸಿದರೂ ಪಟ್ಟು ಸಡಿಲಿಸದ ಬಿಸಿಸಿಐ (BCCI | Services team | Ranji Trophy | Jammu and Kashmir)
Feedback Print Bookmark and Share
 
ಜಮ್ಮು-ಕಾಶ್ಮೀರ ವಿರುದ್ಧದ ಶ್ರೀನಗರದ ರಣಜಿ ಟ್ರೋಫಿ ಪಂದ್ಯವೊಂದರಿಂದ ಹೊರಗುಳಿದ ಸರ್ವಿಸಸ್ ನಿಷೇಧದ ನಂತರ ಕ್ಷಮೆಯಾಚಿಸಿ ಮತ್ತೆ ಆಡಲು ಸಿದ್ಧ ಎಂದು ಪ್ರಕಟಿಸಿದ ಹೊರತಾಗಿಯೂ ಬಿಸಿಸಿಐ ಪಟ್ಟು ಸಡಿಲಿಸಲು ನಿರಾಕರಿಸಿದೆ.

ಪ್ರಸಕ್ತ ವರ್ಷದ ರಣಜಿ ಟ್ರೋಫಿಯಿಂದ ಸರ್ವಿಸಸ್ ತಂಡವನ್ನು ನಾವು ಅನರ್ಹಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ತೀರ್ಮಾನ ಈಗಾಗಲೇ ಪ್ರಕಟವಾಗಿರುವುದರಿಂದ ಅದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಬಿಸಿಸಿಐ ವಕ್ತಾರ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.

ಸರ್ವಿಸಸ್ ಕ್ಷಮೆಯಾಚಿಸಿದ ನಂತರ ಬಿಸಿಸಿಐ ಉನ್ನತ ಮಟ್ಟದ ಸಭೆ ನಡೆಸಿದ್ದು, ನಿಷೇಧ ನಿರ್ಧಾರ ಬದಲಾಯಿಸದಿರುವ ತೀರ್ಮಾನ ತೆಗೆದುಕೊಳ್ಳಲಾಯಿತು.

ಕಳೆದ ಐದು ವರ್ಷಗಳ ನಂತರ ಶ್ರೀನಗರದ ಶೇರ್-ಇ-ಕಾಶ್ಮೀರ್ ಕ್ರೀಡಾಂಗಣದಲ್ಲಿ ರಣಜಿ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಪಂದ್ಯಕ್ಕೆ ಹಾಜರಾಗಬೇಕಿದ್ದ ಸರ್ವಿಸಸ್ ತಂಡವು ಕೊನೆ ಕ್ಷಣದಲ್ಲಿ ಸಾಧ್ಯವಿಲ್ಲ ಎಂದು ಹೇಳಿತ್ತು. ಇದಕ್ಕಾಗಿ ಸರ್ವಿಸಸ್ ಮೇಲೆ ಬಿಸಿಸಿಐ ನಿಷೇಧ ಹೇರಿದೆ.

ಶ್ರೀನಗರ ಪಂದ್ಯದಿಂದ ಹಿಂದಕ್ಕೆ ಸರಿದದ್ದರಿಂದ ಆಕ್ರೋಶಗೊಂಡಿದ್ದ ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಸರ್ವಿಸಸ್ ತಂಡದ ಮೇಲೆ ಕಿಡಿ ಕಾರಿತ್ತು. ಕ್ರಿಕೆಟ್ ಮಂಡಳಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಕಠಿಣ ಕ್ರಮಕ್ಕಾಗಿ ಒತ್ತಾಯಿಸಿದ್ದರು.

ಪ್ರಧಾನಮಂತ್ರಿಗಳ ಕಚೇರಿ ಮಧ್ಯಪ್ರವೇಶದ ನಂತರ ಸರ್ವಿಸಸ್ ತಂಡವು ಬಿಸಿಸಿಐಯಲ್ಲಿ ಕ್ಷಮೆಯಾಚಿಸಿತ್ತಲ್ಲದೆ, ಹೊಸ ದಿನಾಂಕಗಳನ್ನು ನಿಗದಿಪಡಿಸಿದರೆ ಶ್ರೀನಗರಕ್ಕೆ ಹೋಗಿ ಆಡಲು ತಾನು ಸಿದ್ಧ ಎಂದು ಪ್ರಕಟಿಸಿತ್ತು.

ಸರ್ವಿಸಸ್ ತಂಡವು ಶ್ರೀನಗರದಲ್ಲಿ ಆಡಲು ಸಿದ್ಧವಿದೆ. ಪಂದ್ಯದಿಂದ ತಪ್ಪಿಸಿಕೊಂಡಿರುವುದಕ್ಕಾಗಿ ಬಿಸಿಸಿಐಯಲ್ಲಿ ಸರ್ವಿಸಸ್ ಕ್ರೀಡಾ ನಿಯಂತ್ರಣ ಮಂಡಳಿ (ಎಸ್ಎಸ್‌ಸಿಬಿ) ಕ್ಷಮೆ ಯಾಚಿಸಿದ್ದು, ಹೊಸ ದಿನಾಂಕಗಳನ್ನು ನಿಗದಿಪಡಿಸಲು ಮನವಿ ಮಾಡಿದೆ ಎಂದು ಸರ್ವಿಸಸ್ ಅಧಿಕಾರಿಗಳು ಹೇಳಿದ್ದರು.

ಆದರೆ ಬಿಸಿಸಿಐ ತನ್ನ ನಿಲುವಿಗೆ ಅಂಟಿಕೊಂಡಿದ್ದು, ನಿರ್ಧಾರ ಬದಲಾಯಿಸಲು ನಿರಾಕರಿಸಿದೆ. ಇದರೊಂದಿಗೆ ಈ ವರ್ಷದ ರಣಜಿ ಟ್ರೋಫಿಯಿಂದ ಸರ್ವಿಸಸ್ ಹೊರಗುಳಿಯಬೇಕಾಗಿರುವುದು ಅನಿವಾರ್ಯ.
ಸಂಬಂಧಿತ ಮಾಹಿತಿ ಹುಡುಕಿ