ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ವ್ಯರ್ಥವಾದ ಸಚಿನ್ ಕುಸುರಿ; ಭಾರತಕ್ಕೆ ರೋಚಕ ಸೋಲು (India | Australia | MS Dhoni | Ricky Ponting)
Feedback Print Bookmark and Share
 
ಅಂತಾರಾಷ್ಟ್ರೀಯ ಏಕದಿನದಲ್ಲಿ 17,000 ರನ್ ಮುಟ್ಟಿದ ಪಂದ್ಯವನ್ನು ಸಚಿನ್ ತೆಂಡೂಲ್ಕರ್ ಅಮೋಘ ಶತಕದೊಂದಿಗೆ (175) ಶೋಭಾಯಮಾನವಾಗಿ ಆಡುವ ಮೂಲಕ ಬೃಹತ್ ಮೊತ್ತದ ಹಿಂದೆ ಬಿದ್ದ ಭಾರತವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ.

ಅಗ್ರ ಕ್ರಮಾಂಕದ ದಾಂಡಿಗರು ಕೈ ಕೊಟ್ಟ ಕಾರಣ ಭಾರತಕ್ಕೆ ಮತ್ತೊಂದು ಸೋಲು ಎದುರಾಯಿತು. ಕೇವಲ ಮೂರು ರನ್ನುಗಳಿಂದ ಐದನೇ ಏಕದಿನ ಪಂದ್ಯವನ್ನು ಗೆದ್ದುಕೊಂಡಿರುವ ಆಸ್ಟ್ರೇಲಿಯಾ ಸರಣಿಯಲ್ಲಿ 3-2ರ ಮುನ್ನಡೆ ಪಡೆದುಕೊಂಡಿತು.

ಅಗ್ರ ದಾಂಡಿಗರ ಬೇಜವಾಬ್ದಾರಿಯುತ ಪ್ರದರ್ಶನದಿಂದ ಎಂದಿನಂತೆ ಅಲ್ಪಮೊತ್ತಕ್ಕೆ ವಿಕೆಟುಗಳು ಉರುಳುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಕ್ರಿಕೆಟ್ ಗಾರುಡಿಗ ಸಚಿನ್ ಅನುಭವವನ್ನು ಧಾರೆಯೆರೆದಿದ್ದರು. ಆ ಮೂಲಕ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 17,000 ರನ್ ಪೂರೈಸಿದ ವಿಶ್ವ ದಾಖಲೆಯನ್ನೂ ನಿರ್ಮಿಸಿದರು.

ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ವೀರೇಂದ್ರ ಸೆಹ್ವಾಗ್ (38), ಗೌತಮ್ ಗಂಭೀರ್ (8), ಯುವರಾಜ್ ಸಿಂಗ್ (9) ಮತ್ತು ಮಹೇಂದ್ರ ಸಿಂಗ್ ಧೋನಿ (6) ವಿಕೆಟುಗಳನ್ನು ತೀರಾ ಅಗ್ಗವೆಂಬಂತೆ ಬಿಟ್ಟುಕೊಟ್ಟಾಗಲೂ ಸಚಿನ್ ಕಂಗೆಟ್ಟಿರಲಿಲ್ಲ.

ತನ್ನ ಮ್ಯಾರಥಾನ್ ಇನ್ನಿಂಗ್ಸ್ ಸಂದರ್ಭದಲ್ಲಿ ಹಲವಾರು ಜೀವದಾನಗಳನ್ನು ಪಡೆದರೂ ಎದುರಾಳಿ ಪಾಳಯದ ಯಾವುದೇ ಬೌಲರುಗಳಿಗೆ ಕೊನೆಯ ಹಂತದವರೆಗೆ ಅವರ ನಾಗೋಲೋಟವನ್ನು ತಡೆಯಲು ಸಾಧ್ಯವಾಗಲಿಲ್ಲ. ಅಂತಹ ಅನಿರ್ವಚನೀಯ ಮೋಹಕತೆಯನ್ನು ತುಂಬಿದ ಅವರ ಬ್ಯಾಟಿಂಗನ್ನು ಕಾಂಗರೂಗಳು ಕೂಡ ಎದುರಾಳಿ ತಂಡವೆಂಬುದನ್ನೂ ಮರೆತು ಮೈಮರೆತು ಅನುಭವಿಸುತ್ತಿದ್ದರು.

ಯುವಕರನ್ನೂ ನಾಚಿಸುವಂತೆ ಆಡಿದ ಸಚಿನ್ ಆಟವನ್ನು ಪ್ರೇಕ್ಷಕರು ಹೇಗೆ ಆನಂದಿಸಬೇಕೆಂಬುದನ್ನು ತಿಳಿಯದೆ ಕೇಕೆ ಹಾಕುತ್ತಿದ್ದರೆ, ಅವರು ಎಗ್ಗಿಲ್ಲದೆ ಬ್ಯಾಟ್ ಬೀಸುತ್ತಿದ್ದರು. ಆ ಮೂಲಕ ಹಲವು ಸಮಯದಿಂದ ಟೀಕಾಕಾರರಿಗೆ ಅಸ್ತ್ರವಾಗಿದ್ದ ಸಚಿನ್ ತನ್ನ ಎಂದಿನ ಶೈಲಿಯಿಂದಲೇ ಮೌನವಾಗಿ ಉತ್ತರಿಸಿದ್ದಾರೆ.

ಅವರು ಸೆಹ್ವಾಗ್ ಜತೆ 66, ಗಂಭೀರ್ ಜತೆ 26, ಯುವರಾಜ್ ಜತೆ 34, ಧೋನಿ ಜತೆ 36 ಹಾಗೂ ಸುರೇಶ್ ರೈನಾ ಜತೆ 137 ರನ್ನುಗಳ ಜತೆಯಾಟ ನೀಡಿದ್ದರು. ಈ ಸಂದರ್ಭದಲ್ಲಿ ಅತ್ಯಮೋಘ ಬೌಂಡರಿ ಮತ್ತು ಸಿಕ್ಸರುಗಳ ಮೂಲಕ ಹಳೆಯ ದಿನಗಳನ್ನು ನೆನಪಿಸಿದ ಸಚಿನ್ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದರು.

141 ಎಸೆತಗಳನ್ನು ಎದುರಿಸಿದ್ದ ಅವರು 19 ಬೌಂಡರಿ ಹಾಗೂ ನಾಲ್ಕು ಅತ್ಯಾಕರ್ಷಕ ಸಿಕ್ಸರುಗಳನ್ನು ಎತ್ತುವ ಮೂಲಕ ಪ್ರತಿ ಬೌಲರುಗಳನ್ನು ಮೈದಾನದ ಮೂಲೆ ಮೂಲೆಗಟ್ಟಿ ತನ್ನ ತಾಕತ್ತನ್ನು ಪ್ರದರ್ಶಿಸಿದ್ದರು.

ಕೊನೆಗೂ ಸಚಿನ್ ವಿಕೆಟ್ ಪತನ...
ಸುರೇಶ್ ರೈನಾ ಅತ್ಯುತ್ತಮ ಹೋರಾಟ ನೀಡುವ ಮೂಲಕ ಅರ್ಧಶತಕ (59) ದಾಖಲಿಸಿದ್ದರು. ರೈನಾ ಪತನದ ನಂತರ ಬಂದ ಹರಭಜನ್ ಸಿಂಗ್ ಖಾತೆ ತೆರೆಯುವ ಮೊದಲೇ ಹೊರಟು ಹೋದರು. ಮುಂದಿನ ಓವರಿನಲ್ಲೇ ಸಚಿನ್ ವಿಕೆಟ್ ಕಳೆದುಕೊಂಡಾಗ ಇಡೀ ಕ್ರೀಡಾಂಗಣವೇ ಒಕ್ಕೊರಲಿನಿಂದ ಅವರಿಗೆ ಕೃತಜ್ಞತೆ ಸಲ್ಲಿಸಿತು. ಮೆಕ್ಕೇ ಎಸೆತವನ್ನು ನಥಾನ್ ಹೌರಿಟ್ಜ್ ಕ್ಯಾಚ್ ಹಿಡಿಯುವ ಮೂಲಕ ಗಂಡಾಂತರವನ್ನು ತೊಲಗಿಸಿದ ಖುಷಿಯಿಂದ ಇದೇ ಹೊತ್ತಿಗೆ ಕಾಂಗರೂಗಳು ಸಂಭ್ರಮಿಸಿದರು.

ನಂತರ ನಡೆದದ್ದೆಲ್ಲವೂ ನಾಟಕೀಯ ಬೆಳವಣಿಗೆ. ಅದೇ ಓವರಿನಲ್ಲಿ ರವೀಂದ್ರ ಜಡೇಜಾ ರನ್ನೌಟದರೆ, ನಂತರದ ಓವರಿನಲ್ಲಿ ಆಶಿಶ್ ನೆಹ್ರಾ ವಿಕೆಟ್ ಒಪ್ಪಿಸಿದರು. ಕೊನೆಯ ಭರವಸೆಯಾಗಿ ಉಳಿದಿದ್ದ ಮುನಾಫ್ ಪಟೇಲ್ ಮತ್ತು ಪ್ರವೀಣ್ ಕುಮಾರ್ ಜಯದ ಗಡಿ ದಾಟಿಸಲು ವಿಫಲರಾದರು.

ಕೊನೆಯ ಓವರಿನಲ್ಲಿ ಆರು ಎಸೆತಗಳಿಂದ 8 ರನ್ನುಗಳ ಅಗತ್ಯವಿತ್ತು. ಮೊದಲ ಮೂರು ಎಸೆತಗಳಲ್ಲಿ ತಲಾ ಒಂದೊಂದು ರನ್ ಮಾಡಿದ್ದ ಭಾರತ ನಾಲ್ಕನೇ ಎಸೆತದಲ್ಲಿ ಆಲೌಟ್!

ಆ ಮೂಲಕ ಭಾರತದ ಜಯದ ಕನಸು ನುಚ್ಚು ನೂರಾಯಿತು. 49.4 ಓವರುಗಳಲ್ಲಿ ಸರ್ವಪತನ ಕಂಡ ಭಾರತ ಮೂರು ರನ್ನುಗಳ ಅಂತರದಿಂದ ರೋಚಕವಾಗಿ ಸೋಲೊಪ್ಪಿಕೊಂಡಿತು.

ಆಸ್ಟ್ರೇಲಿಯಾ ಇನ್ನಿಂಗ್ಸ್..
ಶಾನ್ ಮಾರ್ಷ್ (112) ಮತ್ತು ಶೇನ್ ವಾಟ್ಸನ್ (93) ಅಮೋಘ ಪ್ರದರ್ಶನದ ನೆರವಿನಿಂದ ಪ್ರವಾಸಿ ಆಸ್ಟ್ಟೇಲಿಯಾ ಭಾರತದ ಗೆಲುವಿಗೆ 351 ರನ್ನುಗಳ ಬೃಹತ್ ಸವಾಲನ್ನು ಮುಂದೊಡ್ಡಿತ್ತು.

ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಯಾವುದೇ ಹಂತದಲ್ಲೂ ಧೃತಿಗೆಡದೆ ಸ್ಥಿರ ಪ್ರದರ್ಶನ ನೀಡುವ ಮೂಲಕ ಬೃಹತ್ ಮೊತ್ತವನ್ನು ಪೇರಿಸಲು ಸಹಕರಿಸಿದರು. ಇದರೊಂದಿಗೆ ಟೀಮ್ ಇಂಡಿಯಾದ ಮೇಲೆ ಭಾರೀ ಒತ್ತಡ ಬಿದ್ದಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ನಾಯಕ ರಿಕಿ ಪಾಂಟಿಂಗ್ ನಿರ್ಧಾರವನ್ನು ಬ್ಯಾಟಿನಿಂದಲೇ ಸಮರ್ಥಿಸಿಕೊಂಡ ಆರಂಭಿಕ ಆಟಗಾರ ವಾಟ್ಸನ್ ಆತಿಥೇಯ ಬೌಲರುಗಳನ್ನು ಮೈದಾನದ ಮೂಲೆ-ಮೂಲೆಗಟ್ಟಿದ್ದರು.

ಮತ್ತೊಬ್ಬ ಆರಂಭಿಕ ಆಟಗಾರ ಮಾರ್ಷ್ ನಿಧಾನವಾಗಿ ತನ್ನ ಇನ್ನಿಂಗ್ಸನ್ನು ಆರಂಭಿಸಿದರೂ ನಂತರ ಭಾರತದ ಬೆವರಿಳಿಸಿದರು. ಈ ಜೋಡಿ ಮೊದಲ ವಿಕೆಟಿಗೆ 145 ರನ್ನುಗಳ ಮನಮೋಹಕ ಜತೆಯಾಟ ನೀಡಿತ್ತು.

ವೇಗಿಗಳನ್ನು ವಾಟ್ಸನ್ ಮನಬಂದಂತೆ ಚಚ್ಚುತ್ತಿದ್ದಾಗ ಯುವರಾಜ್ ಸಿಂಗ್, ರವೀಂದ್ರ ಜಡೇಜಾ ಮೂಲಕ ನಾಯಕ ಮಹೇಂದ್ರ ಸಿಂಗ್ ಧೋನಿ ವಾಟ್ಸನ್-ಮಾರ್ಷ್ ಜೋಡಿಯನ್ನು ಬೇರ್ಪಡಿಸಲು ಯತ್ನಿಸಿದ್ದರು. ಕೊನೆಗೂ ಅದರಲ್ಲಿ ಯಶಸ್ಸು ಕಂಡದ್ದು ಹರಭಜನ್ ಸಿಂಗ್.

ಶತಕದತ್ತ ಸಾಗುತ್ತಿದ್ದ (93) ವಾಟ್ಸನ್ ಸ್ಪಿನ್ನರುಗಳೆದುರು ನಿಧಾನಗತಿಯ ಬ್ಯಾಟಿಂಗ್‌ಗೆ ಮೊರೆ ಹೋಗಿದ್ದರು. ಈ ಸಂದರ್ಭದಲ್ಲಿ ಹರಭಜನ್ ಎಸೆತವನ್ನು ಜಡೇಜಾ ಕೈಗಿಡುವ ಮೂಲಕ ಆಪತ್ತನ್ನು ಮೈಮೇಳೆದುಕೊಂಡರು.

ಇದಕ್ಕೂ ಮೊದಲು ವಾಟ್ಸನ್ ಸಿಕ್ಸರ್, ಬೌಂಡರಿಗಳ ಸುರಿಮಳೆಯನ್ನೇ ಸುರಿಸುವ ಮೂಲಕ ಅರ್ಧಶತಕ ದಾಖಲಿಸಿದ್ದರು. ಅವರು 89 ಎಸೆತಗಳಿಂದ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿದ್ದು, ಬಹುತೇಕ ಎಲ್ಲಾ ಬೌಲರುಗಳನ್ನು ದಣಿಸಿದ್ದರು.

ವಾಟ್ಸನ್ ಪತನದ ನಂತರ ಬಂದ ಪಾಂಟಿಂಗ್‌ ಕೂಡ ಮಾರ್ಷ್‌ಗೆ ಅತ್ಯುತ್ತಮ ಜತೆಯಾಟ ನೀಡುವ ಮೂಲಕ ಸಹಕರಿಸಿದರು. 45 ಎಸೆತಗಳಿಂದ 45 ರನ್ ಗಳಿಸಿದ್ದ ಪಾಂಟಿಂಗ್‌ರನ್ನು ಔಟ್ ಮಾಡಿದ್ದು ಪ್ರವೀಣ್ ಕುಮಾರ್. ಪಾಂಟಿಂಗ್-ಮಾರ್ಷ್ ಜೋಡಿ 13.3 ಓವರುಗಳಲ್ಲಿ 91 ರನ್ನುಗಳ ಜತೆಯಾಟ ನೀಡಿತ್ತು.

ಎರಡು ವಿಕೆಟ್ ಕಳೆದುಕೊಂಡ ನಂತರ ಮಾರ್ಷ್ ಬಹಳ ಹೊತ್ತು ಕ್ರೀಸಿನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಶತಕ ದಾಖಲಿಸಿದ್ದ ಅವರನ್ನು 42.5ನೇ ಓವರಿನಲ್ಲಿ ಆಶಿಶ್ ನೆಹ್ರಾ ವಿಶ್ರಾಂತಿಗೆ ಕಳುಹಿಸಿದರು.

112 ಎಸೆತಗಳಿಂದ ಅಷ್ಟೇ ರನ್ ಕಲೆ ಹಾಕಿದ್ದ ಅವರ ಬ್ಯಾಟ್‌ನಿಂದ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರುಗಳು ಹೊರ ಬಂದಿದ್ದವು. ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಲು ವಿಫಲರಾಗಿದ್ದ ಅವರು ಈ ಪಂದ್ಯದಲ್ಲಿ ತನ್ನ ಸಾಮರ್ಥ್ಯವನ್ನು ಸಾರಿ ಹೇಳಿದ್ದಾರೆ.

ಅರ್ಧಶತಕ (57) ದಾಖಲಿಸಿದ್ದ ಕ್ಯಾಮರೂನ್ ವೈಟ್ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಪ್ರವೀಣ್ ಕುಮಾರ್ ಎಸೆತವನ್ನು ಸಚಿನ್‌ಗೆ ನೀಡುವ ಮೂಲಕ ಔಟಾದರು. ಮೈಕೆಲ್ ಹಸ್ಸಿ 31 ರನ್ನುಗಳೊಂದಿಗೆ ಅಜೇಯರಾಗುಳಿದರು. ಡೆತ್ ಓವರ್‌ನಲ್ಲಿ ಬೌಲರುಗಳನ್ನು ಸತಾಯಿಸಿದ ವೈಟ್ - ಹಸ್ಸಿ ಜೋಡಿ 80 ರನ್ನುಗಳನ್ನು ಕಲೆ ಹಾಕಿತ್ತು.

ಒಟ್ಟಾರೆ 50 ಓವರುಗಳಲ್ಲಿ ಮೂರು ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ 341 ರನ್ನುಗಳನ್ನು ಪೇರಿಸಿತ್ತು.

ಕನ್ನಡದಲ್ಲೇ ಸ್ಕೋರ್ ಬೋರ್ಡ್ ಲಭ್ಯವಿದೆ- ಇಲ್ಲಿ ಕ್ಲಿಕ್ ಮಾಡಿ.
ಸಂಬಂಧಿತ ಮಾಹಿತಿ ಹುಡುಕಿ