ನಾಯಕ ಯೂನಿಸ್ ಖಾನ್ ಬೇಡಿಕೆಗೆ ಮಣಿದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಉಪಕಪ್ತಾನ ಶಾಹಿದ್ ಆಫ್ರಿದಿ ಮತ್ತು ತಂಡದ ವ್ಯವಸ್ಥಾಪಕ ಅಬ್ದುಲ್ ರಾಕಿಬ್‌ರನ್ನು ಪ್ರಸಕ್ತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ತಂಡದ ಪ್ರವಾಸಿ ಆಯ್ಕೆ ಸಮಿತಿಯಿಂದ ಕೈ ಬಿಟ್ಟಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯು ಅಬುಧಾಬಿ ಮತ್ತು ದುಬೈಗಳಲ್ಲಿ ನಡೆಯುತ್ತಿದೆ. ಇದೀಗ ಪಿಸಿಬಿ ಪ್ರಕಟಿಸಿರುವ ನೂತನ ನಿಯಮಗಳ ಪ್ರಕಾರ, ಪ್ರತೀ ಪಂದ್ಯಕ್ಕೂ ಮೊದಲು ಅಂತಿಮ 11 ಸದಸ್ಯರನ್ನು ತಂಡಕ್ಕೆ ಆಯ್ಕೆ ಮಾಡುವ ಸಮಿತಿಯಲ್ಲಿ ನಾಯಕ, ತರಬೇತುದಾರ ಮತ್ತು ಮುಖ್ಯ ಆಯ್ಕೆಗಾರ ಮಾತ್ರ ಸ್ಥಾನ ಹೊಂದಿರುತ್ತಾರೆ.
ಈ ಹಿಂದೆ ತಂಡದ ಮ್ಯಾನೇಜರ್ ಮತ್ತು ಉಪನಾಯಕ ಕೂಡ ಅಂತಿಮ 11 ಸದಸ್ಯರನ್ನು ಪ್ರತೀ ಪಂದ್ಯಕ್ಕೆ ಆರಿಸುವ ಸಮಿತಿಯಲ್ಲಿ ಸ್ಥಾನ ಹೊಂದಿದ್ದರು. ಈ ಪ್ರಕ್ರಿಯೆಯಲ್ಲಿ ನಾವು ಕೂಡ ಭಾಗವಹಿಸಬಹುದಿತ್ತು ಎಂದು ಸಮಿತಿಯಿಂದ ಪದಚ್ಯುತಗೊಂಡಿರುವ ರಾಕಿಬ್ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ನಂತರ ತಂಡದ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಯೂನಿಸ್ ಖಾನ್, ತನ್ನ ಬೇಡಿಕೆಗಳನ್ನು ಒಪ್ಪಿಕೊಂಡರೆ ಮಾತ್ರ ನಾಯಕನಾಗಿ ಮುಂದುವರಿಯುವುದಾಗಿ ಹೇಳಿದ್ದರು. ಉಪಕಪ್ತಾನ ಮತ್ತು ತಂಡದ ಮ್ಯಾನೇಜರ್ ಪ್ರವಾಸದ ಆಯ್ಕೆ ಸಮಿತಿ ಪ್ರಕ್ರಿಯೆಯಲ್ಲಿ ಸ್ಥಾನ ಪಡೆಯಬಾರದು ಎಂಬುದು ಕೂಡ ಆ ಬೇಡಿಕೆಗಳಲ್ಲಿ ಒಂದಾಗಿತ್ತು ಎಂದು ಪಿಸಿಬಿ ಮೂಲಗಳು ಹೇಳಿವೆ.
ಪ್ರವಾಸದ ಸಂದರ್ಭದಲ್ಲಿ ಮುಖ್ಯ ಆಯ್ಕೆಗಾರರನ್ನು ಮುಖತಃ ಅಥವಾ ದೂರವಾಣಿ ಮುಖಾಂತರ ಸಂಪರ್ಕಿಸಿ ಮಾತುಕತೆ ನಡೆಸಿದ ನಂತರ ನಾಯಕ ಮತ್ತು ತರಬೇತುದಾರ ಮಾತ್ರ ಅಂತಿಮ 11 ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದು ಯೂನಿಸ್ ಪಿಸಿಬಿ ಅಧ್ಯಕ್ಷರಲ್ಲಿ ಸ್ಪಷ್ಟಪಡಿಸಿದ್ದರು ಎಂದು ಮೂಲವೊಂದು ಬಹಿರಂಗಪಡಿಸಿದೆ.
ಈ ಹಿಂದೆ ಮ್ಯಾನೇಜರ್ ಮತ್ತು ಉಪನಾಯಕರಲ್ಲದೆ ಕೆಲವು ಹಿರಿಯ ಆಟಗಾರರು ಕೂಡ ಮಧ್ಯಪ್ರವೇಶ ಮಾಡುತ್ತಿದ್ದ ಕಾರಣ ಯೂನಿಸ್ ಮತ್ತು ಕೋಚ್ ಇಂತಿಕಾಬ್ ಆಲಂ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಈಗ ಅಂತಿಮ 11 ಸದಸ್ಯರನ್ನು ಆಯ್ಕೆ ಮಾಡಲು ಅವರಿಗೆ ಮುಕ್ತ ಅವಕಾಶಗಳಿವೆ ಎಂದು ಅವರು ತಿಳಿಸಿದ್ದಾರೆ.