ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನಾಯಕನಾಗಿ ಟೀಮ್ ಇಂಡಿಯಾ ಮಾಜಿ ಕಪ್ತಾನ ಸೌರವ್ ಗಂಗೂಲಿಯವರನ್ನು ಮತ್ತೆ ಆಯ್ಕೆ ಮಾಡಲಾಗಿದೆ. ಜತೆಗೆ ಡೇವ್ ವಾಟ್ಮೋರ್‌ರನ್ನು ತಂಡದ ತರಬೇತುದಾರನ್ನಾಗಿ ನೇಮಕಗೊಳಿಸಲಾಗಿದೆ.
ಶಾರೂಖ್ ಖಾನ್ ಮಾಲಕತ್ವದ ಐಪಿಎಲ್ ಪ್ರಾಂಚೈಸಿ ಕೆಕೆಆರ್‌ಗೆ ಕಳೆದ ಆವೃತ್ತಿಯಲ್ಲಿ ತರಬೇತುದಾರರಾಗಿದ್ದ ಜಾನ್ ಬುಚನಾನ್ ಚಿತಾವಣೆಯಿಂದ ಗಂಗೂಲಿ ನಾಯಕತ್ವ ಕಳೆದುಕೊಂಡಿದ್ದರು. ಅವರ ಬದಲಿಗೆ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್‌ರನ್ನು ತರಲಾಗಿತ್ತು.
ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ ನಂತರ ವಿವಾದಗಳಿಂದ ಮುಳುಗೇಳುತ್ತಿದ್ದ ತಂಡವನ್ನು ಹೊಸ ರೂಪ ನೀಡುವ ನಿಟ್ಟಿನಲ್ಲಿ ಬುಚನಾನ್‌ಗೆ ಕೊಕ್ ನೀಡಲಾಗಿತ್ತು.
ಇದೀಗ ಬುಚನಾನ್ ಜಾಗಕ್ಕೆ ಡೇವ್ ವಾಟ್ಮೋರ್‌ರನ್ನು ಹಾಗೂ ಮೆಕಲಮ್ ಸ್ಥಾನಕ್ಕೆ ಗಂಗೂಲಿಯವರನ್ನು ಅಧಿಕೃತವಾಗಿ ಆಯ್ಕೆಗೊಳಿಸಲಾಗಿದೆ. ಅಲ್ಲದೆ ದೆಹಲಿ ರಣಜಿ ತಂಡದ ಕೋಚ್ ವಿಜಯ್ ದಾಹಿಯಾ ಕೆಕೆಆರ್ ಸಹಾಯಕ ಕೋಚ್ ಆಗಲಿದ್ದರೆ, ಪಾಕಿಸ್ತಾನದ ಖ್ಯಾತ ವೇಗಿ ವಾಸಿಂ ಅಕ್ರಮ್ ಸಲಹೆಗಾರರಾಗಿ ಐಪಿಎಲ್ ಮೂರನೇ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಆಂಡ್ರ್ಯೂ ಲೀಪಸ್ ಮತ್ತು ಆಡ್ರಿಯಾನ್ ಲೇ ರಾಕ್ಸ್‌ರನ್ನು ಕ್ರಮವಾಗಿ ಫಿಸಿಯೋ ಮತ್ತು ತಂಡದ ಟ್ರೈನರ್ ಆಗಿ ನೇಮಕ ಮಾಡಲಾಗಿದೆ ಎಂದು ಕೊಲ್ಕತ್ತಾ ತಂಡ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಗಂಗೂಲಿಯವರ ನಾಯಕ ಸ್ಥಾನ ಕೇವಲ ಶಿಷ್ಟಾಚಾರಕ್ಕಷ್ಟೇ ಸೀಮಿತವಲ್ಲ ಎಂದು ಸ್ಪಷ್ಟಪಡಿಸಿರುವ ಕೆಕೆಆರ್, ಅತ್ಯುತ್ತಮ ತಂಡವನ್ನಾಗಿ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಲಿದ್ದಾರೆ. 2010ರ ಅವಧಿಯ ಐಪಿಎಲ್ ಆವೃತ್ತಿಯ ಕ್ರಿಕೆಟ್ ಸಂಬಂಧಿತ ಎಲ್ಲಾ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದೆ.
ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ನಾಯಕನಾಗಿದ್ದ ಗಂಗೂಲಿಯವರನ್ನು ಬುಚನಾನ್ ತನ್ನ ಬಹುನಾಯಕತ್ವ ವಿಧಾನಕ್ಕೆ ಬಲಿ ಪಡೆದುಕೊಂಡಿದ್ದರು. ಇದಕ್ಕೆ ತೀವ್ರ ಟೀಕೆಗಳು ಎದುರಾದ ನಂತರ ಬಹುನಾಯಕತ್ವವನ್ನು ಕೈ ಬಿಟ್ಟರೂ ನಾಯಕನನ್ನಾಗಿ ಮೆಕಲಮ್‌ರನ್ನು ಆರಿಸಲಾಗಿತ್ತು.