ಶುಕ್ರವಾರ ಇಲ್ಲಿ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬ್ರೆಂಡಾನ್ ಮೆಕಲಂ ಅವರ ಬಿರುಸಿನ ಶತಕ ಮತ್ತು ಸ್ಕಾಟ್ ಸ್ಟೈರಿಸ್ ಅವರ 3 ವಿಕೆಟ್ ಗೊಂಚಲ ಸಾಧನೆಯಿಂದ ನ್ಯೂಜಿಲೆಂಡ್ ತಂಡವು ಪಾಕಿಸ್ತಾನದ ವಿರುದ್ಧ 64 ರನ್ ಜಯ ದಾಖಲಿಸಿತು.
ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಆರಂಭಿಕ ಮೆಕಲಂ ಅವರ 131 ರನ್ನುಗಳ ನೆರವಿನಿಂದ ಕಿವೀಸ್ ತಂಡವು 8 ವಿಕೆಟ್ ನಷ್ಟಕ್ಕೆ 303 ರನ್ ಪೇರಿಸಿತ್ತು. ಬಳಿಕ ಪಾಕಿಸ್ತಾನವನ್ನು 47.2 ಓವರುಗಳಲ್ಲಿ 239 ರನ್ನುಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಕಿವೀಸ್ ಈ ವಿಜಯದೊಂದಿಗೆ ಸರಣಿ 1-1 ಸಮಬಲದಲ್ಲಿದೆ.
ಸಲ್ಮಾನ್ ಬಟ್ (59) ಮತ್ತು ಖಾಲಿದ್ ಲತೀಫ್ (45) ಪಾಕಿಸ್ತಾನಕ್ಕೆ ಉತ್ತಮ ಆರಂಭ ಒದಗಿಸಿದರು. ಆರಂಭಿಕ ವಿಕೆಟಿಗೆ ಅವರು 16 ಓವರುಗಳಲ್ಲಿ 77 ರನ್ ದಾಖಲಿಸಿದ್ದರು. ಆದರೆ ವೇಗಿ ಸ್ಟೈರಿಸ್ ಅವರು 3 ಪ್ರಮುಖ ವಿಕೆಟ್ ಕಿತ್ತು ಮಧ್ಯಮ ಕ್ರಮಾಂಕದ ಪತನಕ್ಕೆ ನಾಂದಿ ಹಾಡಿ ಪಾಕಿಸ್ತಾನವನ್ನು ತಲೆತಗ್ಗಿಸುವಂತೆ ಮಾಡಿದರು. ಎರಡು ವಿಕೆಟ್‌ಗಳನ್ನು ನಾಯಕ ವೆಟ್ಟೋರಿ ಪಡೆದುಕೊಂಡರು.
ಇದಕ್ಕೆ ಮೊದಲು, ಕಿವೀಸ್ ಇನ್ನಿಂಗ್ಸ್ ಆರಂಭಿಸಿದ್ದ ವಿಕೆಟ್ ಕೀಪರ್ ಮೆಕಲಂ, 129 ಎಸೆತಗಳಲ್ಲಿ 131 ರನ್ ಚಚ್ಚಿದ್ದರು. ಇದರಲ್ಲಿ 14 ಬೌಂಡರಿಗಳು, 3 ಸಿಕ್ಸರ್‌ಗಳು ಸೇರಿದ್ದವು. ಅವರ ಶತಕವು 107 ಎಸೆತಗಳಲ್ಲಿ ಬಂದಿತ್ತು.