ಇಲ್ಲಿನ ನೆಹರೂ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಆರನೇ ಏಕದಿನ ಅಂತಾರಾಷ್ಟ್ರೀಯ ಹಣಾಹಣಿಗಾಗಿ ಭಾರತ ಮತ್ತು ಪ್ರವಾಸೀ ಆಸ್ಟ್ರೇಲಿಯಾ ತಂಡಗಳು ಹೈದರಾಬಾದಿನಿಂದ ಲೋಕಪ್ರಿಯ ಗೋಪಿನಾಥ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದವು.
ಭಾರೀ ಭದ್ರತೆಯೊಂದಿಗೆ ಆಟಗಾರರನ್ನು ಹೋಟೆಲ್ ಕೊಠಡಿಗಳಿಗೆ ಕರೆದೊಯ್ಯಲಾಯಿತು. ವಿಮಾನ ನಿಲ್ದಾಣದ ಸುತ್ತಮುತ್ತೆಲ್ಲಾ ಕ್ರಿಕೆಟ್ ಅಭಿಮಾನಿಗಳು ಸಾಲುಗಟ್ಟಿ ನಿಂತು ತಮ್ಮ ನೆಚ್ಚಿನ ಆಟಗಾರರನ್ನು ಸ್ವಾಗತಿಸಿದರು.
ಉಭಯ ತಂಡಗಳನ್ನು ಅಸ್ಸಾಮಿನ ಸಾಂಪ್ರದಾಯಿಕ ಗಮೋಸಾ (ಕೈಯಲ್ಲಿ ಹೆಣೆದ ಶಾಲು)ಗಳ ಮೂಲಕ ಸ್ವಾಗತಿಸಲಾಯಿತು.
ಈ ಮಧ್ಯೆ, ಭಾನುವಾರದ ಪಂದ್ಯಕ್ಕೆ ಪೊಲೀಸ್ ಇಲಾಖೆಯು ಸಂಪೂರ್ಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಯಾವುದೇ ಅಹಿತಕರ ಘಟನೆ ತಡೆಗೆ ಸಜ್ಜಾಗಿದೆ ಎಂದು ಅಸ್ಸಾಂ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಬಿಕಾಶ್ ಬರುವಾ ಹೇಳಿದ್ದಾರೆ.