ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ರನೌಟ್ ಆಗಿರುವ ಹೊರತಾಗಿಯೂ, ಅವರು ತಮ್ಮ ತಪ್ಪಿನಿಂದ ಪಾಠ ಕಲಿಯುತ್ತಾರೆ ಎಂದು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೈದರಾಬಾದಿನಲ್ಲಿ ನಡೆದ ಐದನೇ ಏಕದಿನ ಪಂದ್ಯದಲ್ಲಿ ವಿಜಯದ ಸಮೀಪ ಇರುವಾಗ ಇಲ್ಲದ ರನ್ ಕಸಿಯಲು ಹೋಗಿದ್ದ ಜಡೇಜಾ ರನೌಟ್‌ಗೆ ಬಲಿಯಾಗುವುದರೊಂದಿಗೆ ಭಾರತದ ಗೆಲುವಿನ ಆಸೆ ಕಮರತೊಡಗಿತ್ತು. ಅಂತಿಮವಾಗಿ ಆಸೀಸ್ ಎದುರು ಭಾರತ 3 ರನ್ ಅಂತರದಿಂದ ಸೋತಿತ್ತು.
ವಿಶೇಷವೆಂದರೆ, ಮೊಹಾಲಿಯಲ್ಲಿ ನಡೆದಿದ್ದ ನಾಲ್ಕನೇ ಏಕದಿನ ಪಂದ್ಯದಲ್ಲಿ ಕೂಡ, ಅತ್ಯಂತ ಮಹತ್ವದ ಹಂತದಲ್ಲಿ ಇದೇ ಜಡೇಜಾ ರನೌಟ್ ಆಗಿದ್ದರು. ನವೆಂಬರ್ 2ರ ಈ ಪಂದ್ಯದಲ್ಲಿಯೂ ಆತಿಥೇಯ ಭಾರತ 24 ರನ್ ಅಂತರದಿಂದ ಸೋಲನ್ನಪ್ಪಿತ್ತು.
ಸರಣಿಯಲ್ಲಿ ಅವರು ಉತ್ತಮವಾಗಿ ಬೌಲ್ ಮಾಡುತ್ತಿದ್ದಾರೆ. ಹೆಚ್ಚು ಹೆಚ್ಚು ಪಂದ್ಯಗಳನ್ನಾಡಿದರೆ, ಅವರು ಉತ್ತಮ ಬ್ಯಾಟ್ಸ್‌ಮನ್ ಕೂಡ ಎಂಬುದನ್ನು ಸಾಬೀತುಪಡಿಸುತ್ತಾರೆ ಎಂದು ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.