ಭಾನುವಾರ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನೂ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ಬುಟ್ಟಿಗೆ ಹಾಕಿಕೊಳ್ಳಲಿದ್ದೇವೆ ಎಂದು 7 ಏಕದಿನ ಪಂದ್ಯಗಳ ಸರಣಿಯಲ್ಲಿ 3-2 ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ ತಂಡದ ಉಪ ನಾಯಕ ಮೈಕೆಲ್ ಹಸ್ಸೀ ದೃಢ ವಿಶ್ವಾಸದಿಂದ ಹೇಳಿದ್ದಾರೆ.
ಭಾನುವಾರದ ಪಂದ್ಯವೂ ರೋಚಕ ಅಂತ್ಯ ಕಾಣಲಿದೆ ಎಂದು ಶನಿವಾರ ನುಡಿದ ಅವರು, ಮುಂಬೈಯಲ್ಲಿ ನಡೆಯುವ ಕೊನೆಯ ಪಂದ್ಯದವರೆಗೆ ಕಾಯುವ ಬದಲು, ಭಾನುವಾರವೇ ಸರಣಿ ಕೈವಶ ಮಾಡಿಕೊಳ್ಳಲು ತಮ್ಮ ತಂಡ ಉತ್ಸುಕತೆಯಲ್ಲಿದೆ ಎಂದರು.
ಇಲ್ಲಿ ಕೂಡ ರೋಚರ ಹಣಾಹಣಿ ಏರ್ಪಡಲಿದೆ ಎಂದು ನನ್ನ ಅನಿಸಿಕೆ. ಆದರೆ ಭಾನುವಾರ ಸರಣಿ ನಮ್ಮ ಕೈಯಲ್ಲಿರುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ನಾವಿದ್ದೇವೆ. ನಾವಿನ್ನೂ ಹೈದರಾಬಾದ್‌ನ ರೋಮಾಂಚಕಾರಿ ವಿಜಯದ ಉತ್ಸಾಹದಲ್ಲಿ ತೇಲುತ್ತಿದ್ದೇವೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಹಸ್ಸೀ ನುಡಿದರು.