ಸೆಹ್ವಾಗ್ 'ಗಂಭೀರ' ಶತಕ, ದ್ರಾವಿಡ್ ಅರ್ಧಶತಕ; ಭಾರತ 417/2
ಇಶಾಂತ್-ಮಿಶ್ರಾಗೆ ಕೊಕ್; ಶ್ರೀಶಾಂತ್-ಓಜಾ ಸೇರ್ಪಡೆ
ಕಾನ್ಪುರ, ಮಂಗಳವಾರ, 24 ನವೆಂಬರ್ 2009( 17:28 IST )
PTI
PTI
ಆರಂಭಿಕರಾದ ಗೌತಮ್ ಗಂಭೀರ್ (167) ಹಾಗೂ ವೀರೇಂದ್ರ ಸೆಹ್ವಾಗ್ (131) ಬಾರಿಸಿದ ಭರ್ಜರಿ ಶತಕಗಳ ನೆರವಿನಿಂದ ಆತಿಥೇಯ ಭಾರತ ತಂಡವು ಪ್ರವಾಸಿ ಶ್ರೀಲಂಕಾ ವಿರುದ್ಧ ಇಲ್ಲಿನ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ 90 ಓವರ್‌ಗಳಲ್ಲಿ 417ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಭಾರತ ಮೊದಲ ದಿನದಲ್ಲೇ ಗರಿಷ್ಠ ಮೊತ್ತ ಪೇರಿಸಿತು. ಮೊದಲ ಟೆಸ್ಟ್ ನಡೆದ ಅಹಮಾಬಾದ್‌ನಲ್ಲೂ ಭಾರತ ಮೊದಲ ದಿನದಲ್ಲೇ 385ರನ್ ಪೇರಿಸಿತ್ತು.
ಟಾಸ್ ಗೆದ್ದ ಭಾರತೀಯ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರು. ನಾಯಕನ ನಿರ್ಧಾರ ಸರಿಯೆಂದು ಸಾಬೀತುಪಡಿಸಿದ ಸೆಹ್ವಾಗ್-ಗೌತಮ್ ಜೋಡಿ ಆತಿಥೇಯರಿಗೆ ಭರ್ಜರಿ ಆರಂಭವನ್ನೇ ಒದಗಿಸಿದರು.
ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ವೀರೂ-ಗೌಟಿ ಮೊದಲ ವಿಕೆಟ್‌ಗೆ 41.2 ಓವರ್‌ಗಳಲ್ಲಿ 233ರನ್ ಪೇರಿಸಿದರು. ಇದು ಟೆಸ್ಟ್‌ನಲ್ಲಿ ವೀರೂ-ಗೌಟಿ ಜೋಡಿ ಮೊದಲ ವಿಕೆಟ್‌ಗೆ ಪೇರಿಸಿದ ಗರಿಷ್ಠ ಜೊತೆಯಾಟವಾಗಿದೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮೈದಾನದಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ 218ರನ್ ಪೇರಿಸಿತ್ತು.
ಮೊದಲ ಹತ್ತು ಓವರ್‌ಗಳಲ್ಲಿ ಚೇತರಿಕೆಯ ಆಟವಾಡಿದ ವೀರೂ-ಗೌಟಿ ನಂತರ ನಿಧಾನವಾಗಿ ಬ್ಯಾಟ್ ಬೀಸ ತೊಡಗಿದರು. ಈ ಜೋಡಿ ಊಟದ ವಿರಾಮದ ವೇಳೆಗೆ 26 ಓವರ್‌ಗಳಲ್ಲಿ 131ರನ್ ಪೇರಿಸಿತ್ತು.
ಸೆಹ್ವಾಗ್ 102 ಎಸೆತಗಳಲ್ಲಿ ಟೆಸ್ಟ್ ಜೀವನದ 16ನೇ ಶತಕವನ್ನು ಪೂರೈಸಿದರು. ಒಟ್ಟು 116 ಎಸೆತ ಎದುರಿಸಿದ ಅವರು 18 ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್ ನೆರವಿನಿಂದ 131ರನ್ ಬಾರಿಸಿದರು.
ವೆಲೆಗೆಡರಾ ಎಸೆದ ದಿನದ ಪ್ರಥಮ ಓವರ್‌ನಲ್ಲೇ ವಿಕೆಟ್ ಕೀಪರ್ ಪ್ರಸನ್ನ ಜಯವರ್ಧನೆ ಸೆಹ್ವಾರ್‌ರ ಕ್ಯಾಚ್ ಕೈಚೆಲ್ಲಿದ್ದು ಪ್ರವಾಸಿಗರಿಗೆ ಮುಳುವಾಗಿ ಪರಿಣಮಿಸಿತ್ತು. ಆ ವೇಳೆ ಸೆಹ್ವಾಗ್ ತನ್ನ ಖಾತೆಯನ್ನು ಕೂಡಾ ತೆರೆದಿರಲಿಲ್ಲ.
ಮೊದಲ ಆರು ರನ್ನಿಗಾಗಿ 24ಎಸೆತಗಳನ್ನು ತೆಗೆದುಕೊಂಡಿದ್ದ ಸೆಹ್ವಾಗ್ ನಂತರ ಎಂದಿನಂತೇ ಬ್ಯಾಟ್ ಬೀಸ ತೊಡಗಿದರು.
PTI
PTI
ಅದೇ ರೀತಿ ಗೌತಮ್ ಕೂಡಾ ಟೆಸ್ಟ್ ಜೀವನದ ಎಂಟನೇ ಶತಕ ಪೂರೈಸಿದರು. 215 ಎಸೆತಗಳನ್ನು ಎದುರಿಸಿದ ಅವರು 15 ಬೌಂಡರಿಗಳ ನೆರವಿನಿಂದ 167ರನ್ ಬಾರಿಸಿದ್ದರು. ಗೌತಮ್ ಮೊದಲ ಟೆಸ್ಟ್ ಪಂದ್ಯದಲ್ಲೂ ಶತಕ ಬಾರಿಸಿದ್ದರು.
ನಂತರ ಬಂದ 'ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್, ಗಂಭೀರ್ ಜೊತೆ ಸೇರಿ ಎರಡನೇ ವಿಕೆಟ್‌ಗೆ 137ರನ್‌ಗಳ ಜತೆಯಾಟ ನೀಡಿದರು. 153 ಎಸೆತ ಎದುರಿಸಿದ ದ್ರಾವಿಡ್ ಎಂಟು ಬೌಂಡರಿಗಳ ನೆರವಿನಿಂದ ಅಜೇಯ 85 ರನ್ ಗಳಿಸಿದ್ದು, ಶತಕದತ್ತ ಮುನ್ನಡೆದಿದ್ದಾರೆ.
ಕೊನೆಗೆ ಬಂದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೂಡಾ 20 ರನ್ ಗಳಿಸಿದ್ದು, ದ್ರಾವಿಡ್ ಜೊತೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಿನದಲ್ಲಿ ಪತನಗೊಂಡ ಎರಡೂ ವಿಕೆಟ್‌ಗಳೂ ಮುರಳೀಧರನ್ ಪಾಲಾಯಿತು.
ಇಶಾಂತ್-ಮಿಶ್ರಾ ಔಟ್; ಶ್ರೀಶಾಂತ್-ಓಜಾ ಇನ್... ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಿಕೊಳ್ಳಲಾಗಿದೆ. ವೇಗಿ ಇಶಾಂತ್ ಶರ್ಮಾ ಮತ್ತು ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾಗೆ ಕೊಕ್ ನೀಡಲಾಗಿದ್ದು, ತಂಡಕ್ಕೆ ಕೇರಳ ವೇಗಿ ಶಾಂತಕುಮಾರನ್ ಶ್ರೀಶಾಂತ್ ಹಾಗೂ ಎಡಗೈ ಆಫ್ ಸ್ಪಿನ್ನರ್ ಪ್ರಗ್ಯಾನ್ ಓಜಾ ಸೇರಿಕೊಂಡಿದ್ದಾರೆ.
ಶ್ರೀಶಾಂತ್ ಕಳೆದ ಒಂದುವರೆ ವರ್ಷದಿಂದ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರಲಿಲ್ಲ. ತನ್ನ ಒರಟು ಬುದ್ಧಿಯಿಂದಲೇ ಪ್ರಚಾರ ಗಿಟ್ಟಿಸಿಕೊಳ್ಳುವ ಶ್ರೀ ಬೌಲಿಂಗ್ ದಾಳಿಯಲ್ಲಿ ಮಿಂಚುವರೆ ಎಂಬುದನ್ನು ಕಾದು ನೋಡಬೇಕಾಗಿದೆ. ಅದೇ ವೇಳೆ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಅಮಿತ್ ಸ್ಥಾನ ಕಳೆದುಕೊಂಡಿದ್ದಾರೆ.
ಶ್ರೀಲಂಕಾ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಗಾಯಾಳು ಧಮ್ಮಿಕಾ ಪ್ರಸಾದ್ ಬದಲು ಕ್ಯಾರಂ ಬಾಲ್ ಸ್ಪೆಶಲಿಸ್ಟ್ ಅಜಂತಾ ಮೆಂಡೀಸ್ ತಂಡಕ್ಕೆ ಸೇರಿಕೊಂಡಿದ್ದಾರೆ. ಈ ಮೂಲಕ ಮೂರು ಸ್ಪಿನ್ನರ್‌ಗಳೊಂದಿಗೆ ಲಂಕಾ ತಂಡ ಕಣಕ್ಕಿಳಿದಿದೆ.
ಅಂತಿಮ 11ರ ಬಳಗ
ಭಾರತ: ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿ.ವಿ.ಎಸ್. ಲಕ್ಷ್ಮಣ್, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ (ನಾಯಕ, ವಿಕೆಟ್ ಕೀಪರ್), ಹರಭಜನ್ ಸಿಂಗ್, ಜಹೀರ್ ಖಾನ್, ಎಸ್. ಶ್ರೀಶಾಂತ್ ಮತ್ತು ಪ್ರಗ್ಯಾನ್ ಓಜಾ.