ತಾಯ್ನೆಲದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಸೋಲಿಸಿದ ಆತಿಥೇಯ ರಾಜಸ್ತಾನ್ ರಾಯಲ್ಸ್ ತಂಡವು ಐಲಪಿಎಲ್ ಲೀಗ್ ಟೂರ್ನಿಯಲ್ಲಿ ಪ್ರಥಮ ಕ್ರಮಾಂಕವನ್ನು ತಲುಪಿತು. ಕರಾರು ವಾಕ್ ಬೌಲಿಂಗ್ ಮತ್ತು ಪ್ರಬುದ್ಧ ಬ್ಯಾಟಿಂಗ್ ಪ್ರದರ್ಶಿಸಿದ ರಾಯಲ್ಸ್ ತಂಡವು ಎದುರಾಳಿ ಡೆಕ್ಕನ್ ನೀಗದಿಪಡಿಸಿದ 140ರನ್‌ಗಳ ಗುರಿಯನ್ನು ಇನ್ನೂ ನಾಲ್ಕು ಓವರುಗಳು ಬಾಕಿ ಇರುವಂತೆಯೇ ತಲುಪಿತು.
ಅಡಂ ಗಿಲ್‌ಕ್ರಿಸ್ಟ್ (61) ಅವರ ವಿಕೆಟ್ ಪತನದ ನಂತರ ಪೂರ್ಣ ಬ್ಯಾಟಿಂಗ್ ಕುಸಿತ ಅನುಭವಿಸಿದ ಡೆಕ್ಕನ್ ಚಾರ್ಜರ್ಸ್ ತಂಡವು ಮೈದಾನದಲ್ಲಿ ಬೀಸುತ್ತಿದ್ದ ಧೂಳು ಮಿಶ್ರಿತ ಬಿಸಿಗಾಳಿಯನ್ನು ಸಹಿಸಲಾಗದೇ ಫೀಲ್ಡಿಂಗ್‌ನಲ್ಲಿ ಕೂಡ ವಿಫಲಗೊಂಡಿತು. ಎಂಟು ಪಂದ್ಯಗಳನ್ನು ಆಡಿ ಕೇವಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಡೆಕ್ಕನ್ ಚಾರ್ಜರ್ಸ್ ತಂಡವು ಲೀಗ್ ಹಂತದಲ್ಲಿ ಇನ್ನೂ ಆರು ಪಂದ್ಯಗಳನ್ನು ಆಡಬೇಕಿದ್ದು ಸೆಮಿಫೈನಲ್ ತಲುಪುವುದು ಈ ತಂಡದ ಆಸೆ ಕಮರುತ್ತಿದೆ.
ಡೆಕ್ಕನ್ ತಂಡದ ಇನಿಂಗ್ಸ್ ಆರಂಭಿಸಿದ ಹಂಗಾಮಿ ನಾಯಕ ಗಿಲ್‌ಕ್ರಿಸ್ಟ್ ಮೊದಲನೆ ಓವರಿನಿಂದಲೇ ರಾಯಲ್ಸ್ ಬೌಲಿಂಗ್ ದಾಳಿಯನ್ನು ಚಚ್ಚಲು ಶುರು ಮಾಡಿದರು. ಸೋಹೈಲ್ ತನ್ವೀರ್ ಬೌಲಿಂಗ್‌ನ ಮೊದಲ ಎಸೆತ ಕವರ್ ಡ್ರೈವ್, ಎರಡನೆ ಎಸೆತ ಬ್ಯಾಕ್ ವರ್ಡ್ ಪಾಯಿಂಟ್‌ನಲ್ಲಿ ತಲಾ ನಾಲ್ಕು ರನ್‌ಗಳು ಬರುವ ಮೂಲಕ ಮೊದಲ ಓವರ್‍ನ ಎರಡೇ ಎಸೆತಗಳಲ್ಲಿ ಗಿಲಿ ಎಂಟು ರನ್ ಮಾಡಿದರು.
ರಾಯಲ್ಸ್‌ನ ಗ್ರೇಮ್ ಸ್ಮಿಥ್ ಅವರಿಂದ ಜೀವದಾನ ಪಡೆದ ಹರ್ಷಲ್ ಗಿಬ್ಸ್ (19) ಅವರು ಶೇನ್ ವ್ಯಾಟ್ಸನ್ ಅವರ ಮರು ಎಸೆತವನ್ನು ಕವರ್‌ನಲ್ಲಿ ಪುಡಿಗಟ್ಟಿದರು. ಶೇನ್ ವಾರ್ನ್ ಅವರ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಗಿಬ್ಸ್ ವಿಫಲರಾದರು. ವಾರ್ನ್ ಅವರ ಮೊದಲ ಎಸೆತ ಗಿಬ್ಸ್ ಅವರನ್ನು ಬಲಿ ತೆಗೆದುಕೊಂಡಿತು. ಅತ್ತ ಗಿಲ್‌ಕ್ರಿಸ್ಟ್ 52 ರನ್‌ಗಳೊಂದಿಗೆ ಇದ್ದಾಗ ಸಿದ್ಧಾರ್ಥ್ ತ್ರಿವೇದಿ ಜೀವದಾನ ನೀಡಿದರು.ಅದೇ ಓವರಿನಲ್ಲಿ ಸಿದ್ಧಾರ್ಥ್ ಅವರ ವೈಡ್ ಬಾಲ್‌ನ್ನು ಕೆಣಕಿ ವಿಕೆಟ್ ಕೀಪರ್ ಮಹೇಶ್ ರಾವತ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಹತ್ತು ಓವರುಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 74 ರನ್ ಮಾಡಿದ್ದ ಡೆಕ್ಕನ್ ತಂಡವು ನಾಲ್ಕು ಓವರುಗಳ ಅಂತರದಲ್ಲಿ ಗಿಲ್‍ಕ್ರಿಸ್ಟ್ ವಿಕೆಟ್ ಕಳೆದುಕೊಂಡಿತು. ಹದಿನಾಲ್ಕನೆ ಓವರ್ ಹೊತ್ತಿಗೆ ಮತ್ತೊಂದು ವಿಕೆಟ್‌ನ್ನು ಸ್ಕಾಟ್ ಸ್ಟೈರಿಸ್ (13) ರೂಪದಲ್ಲಿ ಕಳೆದುಕೊಂಡಿತು. ಇನ್ನೂ ವಿಚಿತ್ರ ಎಂದರೆ ಐದು ರನ್‌ಗಳು ಆಗುವಷ್ಟರಲ್ಲಿ ಮತ್ತೇ ಮೂರು ವಿಕೆಟ್ ಕಳೆದುಕೊಂಡು ಆತಂತ್ರ ಪರಿಸ್ಥಿತಿಗೆ ಸಿಕ್ಕಿಕೊಂಡಿತು. ಕೆಳ ಕ್ರಮಾಂಕದಲ್ಲಿ ಶಾಹಿದ್ ಆಫ್ರಿದಿ (1) ವಾರ್ನ್ ಅವರನ್ನು ದಂಡಿಸುವ ಯತ್ನದಲ್ಲಿ ವಿಕೆಟ್ ಚೆಲ್ಲಿದರೆ , ರೋಹಿತ್ ಶರ್ಮಾ (5) ಅವರ ಅಮೂಲ್ಯ ವಿಕೆಟ್ ವಾರ್ನ್ ಅವರ ನೇರ ಎಸೆತಕ್ಕೆ ಸಿಲುಕಿ ರನೌಟ್ ರೂಪದಲ್ಲಿ ಪತನಗೊಂಡಿತು. ಅಜೇಯವಾಗಿ ಉಳಿದ ವೇಣು ಗೋಪಾಲ್ ರಾವ್ ಅವರು 11 ಎಸೆತಗಳಲ್ಲಿ 23 ರನ್ ಮಾಡದಿದ್ದಲ್ಲಿ ತಂಡದ ಪರಿಸ್ಥಿತಿ ಇನ್ನೂ ಚಿಂತಾಜನಕವಾಗುತ್ತಿತ್ತು. ಸಾಧಾರಣ ಮೊತ್ತ ಕಲೆ ಹಾಕಿ ಆತ್ಮ ವಿಶ್ವಾಸವಿಲ್ಲದವರಂತೆ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಇಳಿದ ಡೆಕ್ಕನ್ ಚಾರ್ಜರ್ಸ್‍ನ ಮನಸ್ಥಿತಿ ರಾಜಸ್ತಾನ್ ಪಾಲಿಗೆ ವರವಾಯಿತು. ಇನಿಂಗ್ಸ್ ಆರಂಭಿಸಿದ ಯುಸೂಫ್ ಪಠಾಣ್ (68) ಮತ್ತು ಗ್ರೇಮ್ ಸ್ಮಿಥ್ (40) ಮೊದಲ ವಿಕೆಟ್ ಜೊತೆಯಾಟದಲ್ಲಿ 109 ರನ್ ಮಾಡಿ ಜಯದ ಹಾದಿಯನ್ನು ಪೂರ್ಣ ಪ್ರಮಾಣದಲ್ಲಿ ಮುಕ್ತಗೊಳಿಸಿದರು. ಓಝಾ ಮತ್ತು ಆರ್. ಪಿ. ಸಿಂಗ್ ಬೌಲಿಂಗ್‌ನಲ್ಲಿ ಆರಂಭಿಕ ದಾಂಡಿಗರಿಬ್ಬರ ವಿಕೆಟ್‌ಗಳು ಪತನಗೊಂಡವು. ಅಜೇಯರಾಗಿ ಉಳಿದ ಮಹ್ಮದ್ ಕೈಫ್ (17) ಮತ್ತು ಶೇನ್ ವ್ಯಾಟ್ಸನ್ ಐದು ರನ್ ಮಾಡಿದರು.
ಸೆಮಿಫೈನಲ್ ತಲುಪಬೇಕಾದರೆ ಡೆಕ್ಕನ್ ತಂಡವು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ನಂಬಿ ಕುಳಿತುಕೊಳ್ಳಬೇಕಾಗಿದೆ. ತನ್ನ ಉಳಿದ ಮೂರು ಪಂದ್ಯಗಳಲ್ಲಿ ಡೆಕ್ಕನ್ ಪ್ರಬಲ ಪ್ರತಿಸ್ಪರ್ಧಿಗಳನ್ನು ಎದುರಿಸಬೇಕಿದೆ. ಗೆಲುವಿನ ಹಾದಿಯಲ್ಲಿ ಸಾಗುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಆಡಬೇಕಿದೆ.
|