ಇಂಡಿಯನ್ ಪ್ರಿಮಿಯರ್ ಲೀಗ್ ಪ್ರಾರಂಭವಾದಾಗಿನಿಂದ ಇನ್ನೂ ಒಂದು ಪಂದ್ಯದಲ್ಲಿ ಆಡದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ಸಚಿನ್ ತೆಂಡುಲ್ಕರ್ ಅವರು ಮೇ 14ರಂದು ಚೆನ್ನೈ ಕಿಂಗ್ಸ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ಪಾದಾರ್ಪಣೆ ಮಾಡಲಿದ್ದಾರೆ ಎಂದು ತಂಡದ ಕೋಚ್ ಲಾಲ್‌ಚಂದ್ ರಜಪೂತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕೋಚ್ ರಜಪೂತ್ ಅವರು ಕಳೆದ ಎರಡು ದಿನಗಳಿಂದ ಸಚಿನ್ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಆಡುವುದು ಖಚಿತ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 18 ರಿಂದ ಪ್ರಾರಂಭವಾದ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಸಚಿನ್ ಆಡದಂತೆ ತೊಡೆ ಸಂದಿನ ನೋವು ತಡೆದಿತ್ತು.
ನಿರ್ಣಾಯಕ ಹಂತ ತಲುಪುತ್ತಿರುವ ಸಂದರ್ಭದಲ್ಲಿ ಸಚಿನ್ ತೆಂಡುಲ್ಕರ್ ಅವರು ತಂಡಕ್ಕೆ ಮರಳುತ್ತಿರುವುದರಿಂದ ಎದುರಾಳಿ ತಂಡಗಳ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು ಎಂದು ಅವರು ಹೇಳಿದರು.
ಮೇ 14ರಂದು ಕಿಂಗ್ಸ್ ವಿರುದ್ದ ಆಡುವುದಕ್ಕೆ ಸಚಿನ್ ಸಮರ್ಥರಾದಲ್ಲಿ ತಂಡದ ನಾಯಕತ್ವವನ್ನು ಅವರೇ ಪೊಲ್ಲಾಕ್‌ರಿಂದ ವಹಿಸಿಕೊಳ್ಳಲಿದ್ದಾರೆ. ಕಳೆದ ಮೂರು ಪಂದ್ಯಗಳನ್ನು ಪೊಲ್ಲಾಕ್ ನಾಯಕತ್ವದಲ್ಲಿ ತಂಡ ಗೆಲುವು ಸಾಧಿಸಿದ್ದು ಅವರ ಕೊಡುಗೆ ತಂಡಕ್ಕೆ ಅಪಾರವಾಗಿದೆ. ಸಚಿನ್ ತಂಡಕ್ಕೆ ಮರಳಿದ ನಂತರ ಎಲ್ಲ ಕ್ರಿಕೆಟಿಗರು ಸಚಿನ್ ಸುತ್ತಲೇ ಇರುವುದರಿಂದ ಅವರಿಗೆ ಕಪ್ತಾನ್‌ಗಿರಿಯನ್ನು ವಹಿಸುವುದು ಸರಿಯಾದ ತೀರ್ಮಾನ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದರು. ಮೇ 14ರಂದು ನಡೆಯಲಿರುವ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಅವರು ಸನತ್ ಜಯಸೂರ್ಯ ಅವರೊಂದಿಗೆ ಇನಿಂಗ್ಸ್ ಆರಂಭಿಸಬಹುದು. ಏಳು ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ತಂಡವು ಮೂರು ಪಂದ್ಯಗಳಲ್ಲಿ ಗೆಲುವು ಸಾದಿಸಿ ನಾಲ್ಕನೆ ಸ್ಥಾನದಲ್ಲಿದೆ.
|