ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವುದರಿಂದ ಡೆಲ್ಲಿ ಡೇರ್‌ಡೆವಿಲ್ಸ್ ಈ ಬಾರಿಯ ಪ್ರಶಸ್ತಿ ಗೆಲ್ಲಬಹುದು ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಶೇನ್ ವಾರ್ನೆಯವರ ಪ್ರಕಾರ ತಪ್ಪು. ಅವರ ಅಂದಾಜಿನಲ್ಲಿ ವೀರೇಂದ್ರ ಸೆಹ್ವಾಗ್ ಪಡೆಗಿಂತ ಮಹೇಂದ್ರ ಸಿಂಗ್ ಧೋನಿಯ ಚೆನ್ನೈ ಪಾಳಯವೇ ಈ ಬಾರಿಯ ಗೆಲ್ಲುವ ನೆಚ್ಚಿನ ತಂಡ.
ಡೆಲ್ಲಿ ಡೇರ್‌ಡೆವಿಲ್ಸ್ ಆಡಿದ 13 ಪಂದ್ಯಗಳಲ್ಲಿ ಒಂಬತ್ತನ್ನು ಗೆದ್ದುಕೊಂಡು 18 ಅಂಕಗಳನ್ನು ಸಂಪಾದಿಸುವುದರೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಮುಂಚೂಣಿ ತಂಡವಾಗಿ ಗುರುತಿಸಿಕೊಂಡಿದೆ. ಅಲ್ಲದೆ ಅತ್ಯುತ್ತಮ ಸಮತೋಲನ ಹೊಂದಿರುವ ತಂಡವೆಂದೂ ಗುರುತಿಸಲಾಗುತ್ತಿದೆ.
ಆದರೆ ರಾಜಸ್ತಾನ ರಾಯಲ್ಸ್ ನಾಯಕ ಹಾಗೂ ಆಸ್ಟ್ರೇಲಿಯಾದ ಮಾಜಿ ಲೆಗ್-ಸ್ಪಿನ್ನರ್ ಪ್ರಕಾರ ಅದು ಸರಿಯಲ್ಲ.
"ಈ ಕೂಟದಲ್ಲಿ ಪ್ರಶಸ್ತಿ ಪಡೆಯಲು ಡೆಲ್ಲಿ ಡೇರ್‌ಡೆವಿಲ್ಸ್ ನೆಚ್ಚಿನ ತಂಡವೆಂದು ನನಗನ್ನಿಸುತ್ತಿಲ್ಲ. ನನ್ನ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಅತ್ಯುತ್ತಮ ತಂಡವಾಗಿ ಕಾಣಿಸುತ್ತಿದೆ. ಬಹುಶಃ ಚೆನ್ನೈಯೇ ಇಲ್ಲಿ ಗೆಲುವು ಸಾಧಿಸುವ ಫೇವರಿಟ್ ತಂಡ" ಎಂದು ವಾರ್ನೆ ತಿಳಿಸಿದ್ದಾರೆ.
ಕಳೆದ ವರ್ಷದ ಚಾಂಪಿಯನ್ ರಾಜಸ್ತಾನ ರಾಯಲ್ಸ್ ಈ ಬಾರಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಸೆಮಿಫೈನಲ್ ಹಂತ ತಲುಪಲೂ ಸಾಧ್ಯವಾಗಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಯುವರಾಜ್ ಸಿಂಗ್ ನಾಯಕತ್ವದ ಕಿಂಗ್ಸ್ XI ಪಂಜಾಬ್ ತಂಡವನ್ನು ಕಳೆದ ರಾತ್ರಿ ಮಣಿಸುವ ಮೂಲಕ ಅಂತಿಮ ನಾಲ್ಕರ ಹಂತಕ್ಕೆ ಪ್ರವೇಶ ಪಡೆದಿದ್ದು, ಅಂಕಪಟ್ಟಿಯಲ್ಲಿ 17ರೊಂದಿಗೆ ಎರಡನೇ ಸ್ಥಾನ ಗಿಟ್ಟಿಸಿದೆ.
ಕಳೆದ ವರ್ಷದ ರನ್ನರ್-ಅಪ್ ತಂಡವನ್ನು ಈ ಬಾರಿ ಗೆಲ್ಲುವ ನೆಚ್ಚಿನ ತಂಡ ಎಂದಿರುವುದಕ್ಕೆ ಸಹಜವಾಗಿಯೇ ನಾಯಕ ಮಹೇಂದ್ರ ಸಿಂಗ್ ಧೋನಿ ಸಂತಸ ವ್ಯಕ್ತಪಡಿಸಿದ್ದಾರೆ.
"ಈ ಟೂರ್ನಮೆಂಟ್‌ನಲ್ಲಿ ನೀವು ಗೆಲ್ಲುವ ಫೇವರಿಟ್ ಎಂದು ಯಾರಾದರೂ ಹೇಳಿದಾಗ ಖುಷಿಯಾಗುತ್ತದೆ" ಎಂದು ಧೋನಿ ಪ್ರತಿಕ್ರಿಯೆಸಿದ್ದಾರೆ.
|