ಮುಂದಿನ ಪಂದ್ಯಗಳಲ್ಲಿ ವೈಯಕ್ತಿಕ ಪ್ರದರ್ಶನಗಳು ಗೆಲುವಿನಲ್ಲಿ ಹೆಚ್ಚಿನ ಪ್ರಾಧಾನ್ಯತೆ ಪಡೆದುಕೊಳ್ಳಲಿವೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಚೆನ್ನೈ ತಂಡವು ಡೆಲ್ಲಿ ಡೇರ್‌ಡೆವಿಲ್ಸ್ ಜತೆ ಸೇರಿಕೊಂಡಿದ್ದು, ಕಳೆದ ರಾತ್ರಿ ಕಿಂಗ್ಸ್ XI ಪಂಜಾಬ್ ತಂಡವನ್ನು 24 ರನ್ನುಗಳಿಂದ ಮಣಿಸಿತ್ತು.
"ಈಗಿನಿಂದ ಪಂದ್ಯಗಳು ಒಂದು ರೀತಿಯಲ್ಲಿ ಲಾಟರಿಯಂತೆ. ಒಬ್ಬ ದಾಂಡಿಗ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾದರೆ ಆತ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಶಕ್ತನಾಗಬಹುದು. ಇದುವರೆಗೆ ಇಡೀ ತಂಡವಾಗಿ ಪ್ರದರ್ಶನ ನೀಡಬೇಕಾಗಿದ್ದರೆ ಮುಂದಕ್ಕೆ ಮೂರು ಗಂಟೆಗಳ ಸಮಯದಲ್ಲಿ ಎಲ್ಲವೂ ನಿರ್ಧಾರವಾಗಲಿದೆ" ಎಂದರು.
"ಮ್ಯಾಥ್ಯೂ ಹೇಡನ್ ಅಥವಾ ಸುರೇಶ್ ರೈನಾರಂತಹ ಅಥವಾ ಮುತ್ತಯ್ಯ ಮುರಳೀಧರನ್‌ರಂತಹ ಬೌಲರುಗಳು ನಮ್ಮನ್ನು ಮುಂದಕ್ಕೆ ತಳ್ಳಬಹುದು. ನನ್ನ ಪ್ರಕಾರ ಸೆಮಿಫೈನಲ್ ಅರ್ಹತೆ ಪಡೆದುಕೊಳ್ಳುವ ನಾಲ್ಕೂ ತಂಡಗಳು ಪ್ರಬಲವಾಗಿರುತ್ತವೆ" ಎಂದು ಧೋನಿ ತಿಳಿಸಿದ್ದಾರೆ.
ಅದೇ ಹೊತ್ತಿಗೆ ಸೆಮಿಫೈನಲ್‌ನಲ್ಲಿ ನಮಗೆ ಎದುರಾಳಿ ತಂಡ ಯಾವುದಿರುತ್ತದೆ ಎಂಬ ಬಗ್ಗೆ ಚಿಂತೆ ಮಾಡುವುದಿಲ್ಲ ಎಂದಿರುವ ಟೀಮ್ ಇಂಡಿಯಾ ಕಪ್ತಾನ, ಚೆನ್ನೈ ತಂಡವು ಪ್ರಬಲ ತಂಡವಾಗಿದ್ದು ಯಾವುದೇ ಸವಾಲನ್ನು ಸ್ವೀಕರಿಸಲು ಸಿದ್ಧವಾಗಿದೆ ಎಂದಿದ್ದಾರೆ.
"ಇಲ್ಲಿ ಚಿಂತೆಗೀಡಾಗುವ ಪ್ರಶ್ನೆಯೇ ಇಲ್ಲ. ಇದು ನೀವು ಯಾರನ್ನು ಸೆಮಿಫೈನಲ್‌ನಲ್ಲಿ ಎದುರಿಸುತ್ತೀರಿ ಎಂಬುದಷ್ಟೇ ವಿಷಯವಾಗಿರುತ್ತದೆ. ಅಂದರ ಇತರರ್ಥ ನಾವು ಅತಿಯಾದ ಆತ್ಮವಿಶ್ವಾಸ ಹೊಂದಿದ್ದೇವೆ ಎಂದಲ್ಲ. ಎದುರಾಳಿಗಳ ಬಗ್ಗೆ ಹೆದರಿಕೆ ಇದ್ದೇ ಇರುತ್ತದೆ. ಆದರೆ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಖಂಡಿತಾ ನಾವು ಯಾವುದೇ ತಂಡವನ್ನಾದರೂ ಮಣಿಸಬಲ್ಲೆವು" ಎಂದರು.
ತಂಡದಲ್ಲಿ ಪುನರಾವರ್ತನೆಯಾಗುತ್ತಿರುವ ತಪ್ಪುಗಳಿಗೆ ಆಟಗಾರರನ್ನು ಎಚ್ಚರಿಸಿರುವ ಅವರು, "ಇದುವರೆಗೂ ನಾವು ಹಲವು ತಪ್ಪುಗಳನ್ನೆಸಗಿದ್ದೇವೆ. ಆದರೆ ಇನ್ನು ಮುಂದೆ ಕೇವಲ 15 ನಿಮಿಷಗಳ ಕಾಲ ಲಯ ತಪ್ಪಿದರೂ ನಾವು ಪಂದ್ಯವನ್ನು ಕಳೆದುಕೊಳ್ಳಬಹುದಾದ ಪರಿಸ್ಥಿತಿಯಿದೆ. ಮುಂದಿನ ಪಂದ್ಯಗಳಲ್ಲಿ ಜಾಣತನದಿಂದ ಕೂಡಿದ ಆಟ ಅಗತ್ಯ" ಎಂದು ತಿಳಿಸಿದ್ದಾರೆ.
ಸುರೇಶ್ ರೈನಾರ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತನ್ನ ಆಲ್-ರೌಂಡ್ ಪ್ರದರ್ಶನದ ಮೂಲಕ ಪಂದ್ಯವನ್ನು ಗೆಲ್ಲಿಸುವ ಶಕ್ತಿ ಹೊಂದಿದ್ದಾರೆ ಎಂದು ಬಣ್ಣಿಸಿದರು. "ಸುರೇಶ್ ರೈನಾ ನಮ್ಮ ಪಾಲಿಗೆ ಬಹುದೊಡ್ಡ ಆಸ್ತಿ. ಅವರಿಗೆ ಯಾವ ಅವಕಾಶವನ್ನು ಸಿಕ್ಕಿದರೂ ಅದನ್ನು ಎರಡೂ ಕೈಯಲ್ಲಿ ಬಾಚಿಕೊಳ್ಳುತ್ತಾರೆ. ಚೆಂಡಿನಿಂದ ಏನೂ ನಡೆಯದಿದ್ದಾಗ ಅವರು ಬೌಲಿಂಗ್ ಮಾಡಿ ತಿರುವು ನೀಡುವ ಸಾಮರ್ಥ್ಯ ಅವರಿಗಿದೆ" ಎಂದು ಧೋನಿ ವಿವರಿಸಿದರು.
|