ವೀರೇಂದ್ರ ಸೆಹ್ವಾಗ್ ಅವರ ವೇಗದ ಅರ್ಧಶತಕ ಹಾಗೂ ಗೌತಮ್ ಗಂಭೀರ್ ಸಮಯೋಚಿತ 47 ರನ್‌ಗಳ ಸಹಾಯದಿಂದ ಡೆಲ್ಲಿ ಪಡೆ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಮುಂಬೈ ಇಂಡಿಯನ್ಸ್ ತಂಡವನ್ನು ಸುಲಭವಾಗಿ ಬಗ್ಗುಬಡಿದಿದೆ. ಈ ಮೂಲಕ ಸಚಿನ್ ಪಡೆ ಐಪಿಎಲ್‌ನಲ್ಲಿ ತನ್ನ ಕೊನೆಯ ಪಂದ್ಯದಲ್ಲೂ ಸೋತು ತವರೂರಿನತ್ತ ಮುಖ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಮುಂಬೈ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಮೊದಲ ಎಸೆತಕ್ಕೆ ಔಟಾದರು. ತಂಡದ ನಾಯಕ ಸಚಿನ್ ತೆಂಡುಲ್ಕರ್ 41 ಎಸೆತಗಳಲ್ಲಿ 46 ರನ್ ಹಾಗೂ ರಹಾನೆ 41 ಎಸೆತಗಳಲ್ಲಿ 56 ರನ್ ಬಾರಿಸುವ ಮೂಲಕ 20 ಓವರುಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 165 ಮೊತ್ತವನ್ನು ಕಲೆ ಹಾಕಿದರು. ಭಜ್ಜಿ ಏಳು ಎಸೆತಗಳಲ್ಲಿ 12 ರನ್, ಪಿ.ಆರ್.ಷಾ ಅವರ 11 ಎಸೆತಗಳಲ್ಲಿ ದಾಖಲಿಸಿದ 12 ರನ್ ಬಿಟ್ಟರೆ ಉಳಿದವರ್ಯಾರೂ ಒಂದಕಿಯನ್ನು ದಾಟಲಿಲ್ಲ.
ಮುಂಬೈ ತಂಡದ 165ರ ಗಡಿಯನ್ನು ಬೆಂಬತ್ತಿದ ಡೆಲ್ಲಿ ತಂಡದ ಆರಂಭಿಕ ಆಟಗಾರ ಗೌತಮ್ ಗಂಭೀರ್ 38 ಎಸೆತಗಳಲ್ಲಿ 47 ರನ್ ಬಾರಿಸಿ ಮಾಲಿಂಗ ಅವರ ಎಸೆತಕ್ಕೆ ಮೊಹಮ್ಮದ್ ಅಶ್ರಫುಲ್ ಅವರಿಗೆ ಕ್ಯಾಚ್ ಕೊಟ್ಟು ಮರಳಿದರು. ವೀರೇಂದ್ರ ಸೆಹ್ವಾಗ್ 27 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ಮೂಲಕ ಅರ್ಧ ಶತಕ (50) ಬಾರಿಸಿದರು.
ದಿಲ್‌ಶಾನ್ ಅವರ 24 ಹಾಗೂ ವಾರ್ನರ್ ಅವರ 15 ರನ್‌ಗಳು ಎದುರಾಳಿಯ ಮೊತ್ತ ಬೆಂಬತ್ತುವಲ್ಲಿ ಸಹಾಯವಾದವು. ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಹರ್‌ಭಜನ್ ಸಿಂಗ್ ಡೇರ್‌ಡೆವಿಲ್ಸ್ ತಂಡವನ್ನು ಒಂದು ಹಂತದಲ್ಲಿ ಕಟ್ಟಿಹಾಕುವ ಪ್ರಯತ್ನ ನಡೆಸಿದರೂ, ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಆರು ವಿಕೆಟ್ ನಷ್ಟದಲ್ಲಿ 166 ರನ್ ಗಳಿಸುವ ಮೂಲಕ ಡೆಲ್ಲಿ ತಂಡ ವಿಜಯಭೇರಿ ಬಾರಿಸಿತು.
ಈ ಮೊದಲೇ ಸೋಲುಂಡು ಸೆಮಿಫೈನಲ್ ಕನಸು ಭಗ್ನವಾಗಿದ್ದ ಮುಂಬೈಗೆ ಈ ಪಂದ್ಯ ಐಪಿಎಲ್‌ನಲ್ಲಿ ಕೊನೆಯ ಪಂದ್ಯವಾಯಿತು. ಡೆಲ್ಲಿ ಪಡೆ ಈಗಾಗಲೇ ಸೆಮಿ ಪ್ರವೇಶಿಸಿದ್ದು ಈ ಗೆಲುವಿನಿಂದ ಇನ್ನೂ ಎರಡು ಅಂಕಗಳನ್ನು ಹೆಚ್ಚಿಸಿಕೊಂಡಿದೆ. |