ಕೊಲ್ಕತ್ತಾ ನೈಟ್ ರೈಡರ್ಸ್‌ನ ಐಪಿಎಲ್ ಪಂದ್ಯಗಳು ಮುಗಿದ ನಂತರ ತನ್ನ ಅಸ್ತಿತ್ವವನ್ನು ಬಹಿರಂಗಪಡಿಸುವುದಾಗಿ ಭರವಸೆ ನೀಡಿದ್ದ 'ಐಪಿಎಲ್ ಫೇಕ್ ಪ್ಲೇಯರ್' ಯಾವುದೇ ಮಹತ್ವದ ಸುಳಿವು ನೀಡದೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟು ಹೊರಟು ಹೋಗಿದ್ದಾನೆ.
ತನ್ನ 'ಫೇಕ್ ಐಫಿಎಲ್ ಪ್ಲೇಯರ್' ಬ್ಲಾಗಿಗೆ ಮಾಡಿರುವ ಕೊನೆಯ ಪೋಸ್ಟ್‌ನಲ್ಲಿ ತನ್ನನ್ನು ತಾನೇ ವಿಡಿಯೋ ಕ್ಯಾಮರಾದಲ್ಲಿ ಚಿತ್ರೀಕರಣಗೊಳಿಸಿದ್ದನ್ನು ಪ್ರಕಟಿಸಿದ್ದಾನೆ. ಆದರೆ ಅದರಲ್ಲಿ ಆತನ ನೆರಳಿನ ಆಕಾರವನ್ನು ಮಾತ್ರ ಶೂಟಿಂಗ್ ಮಾಡಲಾಗಿದೆ.
ಸುಮಾರು ನಾಲ್ಕು ನಿಮಿಷಗಳ ಅವಧಿಯ ಈ ವೀಡಿಯೋದಲ್ಲಿ ತನ್ನ ಹೆಸರು ಮತ್ತಿತರ ಪ್ರಮುಖ ವಿಚಾರಗಳನ್ನು ಹೊರತುಪಡಿಸಿ ಅನೇಕ ವಿಷಯಗಳನ್ನು ಆತ ಬಹಿರಂಗಪಡಿಸುತ್ತಾ ಹೋಗಿದ್ದಾನೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದೊಳಗೆ ನಡೆಯುತ್ತಿರುವ ವಿಚಾರಗಳನ್ನು ಬಿಸಿಬಿಸಿಯಾಗಿ ತನ್ನ ಬ್ಲಾಗಿನಲ್ಲಿ ಬರೆದು ಮಾಲಕ ಶಾರೂಖ್ ಖಾನ್ ನಿದ್ದೆಗೆಡಿಸಿದ್ದ ಆತ ಇದುವರೆಗೆ 43 ವರದಿಗಳನ್ನು ತನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದು, 70,000 ಪ್ರತಿಕ್ರಿಯೆಗಳನ್ನು ಓದುಗರಿಂದ ಗಿಟ್ಟಿಸಿಕೊಂಡಿದ್ದಾನೆ.
ತನ್ನನ್ನು ತಂಡದಲ್ಲಿ ಬಲಿಪಶು ಮಾಡಲಾಗಿದೆ ಎಂಬಂತೆ ಆತ ಆರಂಭದಿಂದಲೂ ಹೇಳಿಕೊಂಡು ಬಂದು ಓದುಗರ ಕರುಣೆಯನ್ನು ಧಾರಾಕಾರವಾಗಿ ಪಡೆದುಕೊಂಡಿದ್ದ ಬ್ಲಾಗಿಗ ಕೊನೆಗೂ ತನ್ನ ಅನಾಮಿಕ ಮುಖವನ್ನು ಬಹಿರಂಗಪಡಿಸಿಲ್ಲ.
ಈ ನಾಲ್ಕು ನಿಮಿಷಗಳ ಅವಧಿಯ ವೀಡಿಯೋವನ್ನು 'ಎಫ್‌ಐಪಿ ಆರ್‌ಐಪಿ' ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿನ ನೆರಳಾಕೃತಿ ತನ್ನ ಮಾತನ್ನು ಆರಂಭಿಸುತ್ತಾ, "ಇದು ನಾನು, ಐಪಿಎಲ್ ನಕಲಿ ಆಟಗಾರ... ಅಥವಾ ನೀವು ಕರೆದಂತೆ ಎಫ್‌ಐಪಿ.... ಕಳೆದ ನಾಲ್ಕು ವಾರಗಳಿಂದ 43 ಪೋಸ್ಟ್‌ಗಳು... 70,000 ಪ್ರತಿಕ್ರಿಯೆಗಳು ಮೂಡಿ ಬಂದಿವೆ" ಎಂದಿದ್ದಾನೆ.
ನಾನು ಬೆಳೆದದ್ದು ದೆಹಲಿಯಲ್ಲಿ.. ಆದರೆ ಇಡೀ ದೇಶವನ್ನು ಬಹುತೇಕ ಸುತ್ತಿದ್ದೇನೆ. ಕ್ರಿಕೆಟ್ ಎಂದರೆ ನನ್ನ ಜೀವ. ಆಸ್ಟ್ರೇಲಿಯಾ ವಿರುದ್ಧ ಫಿರೋಜ್ ಶಾ ಕೋಟ್ಲಾದಲ್ಲಿ ನಡೆದ ಪಂದ್ಯವೊಂದನ್ನು ವೀಕ್ಷಿಸುವ ಸಲುವಾಗಿ ಐಐಎಂ (ಇಂಡಿಯನ್ ಇನ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್) ಸಂದರ್ಶನವನ್ನೇ ತಪ್ಪಿಸಿಕೊಂಡವನು ನಾನು...
ನಾನು ತಂಡದೊಳಗಿನವನೇ. ಒಂದು ರೀತಿಯಲ್ಲಿ ಗೋಡೆಯ ಮೇಲಿರುವ ನೊಣದಂತೆ... ಕತ್ತಲೆಯಲ್ಲಿನ ಭೂತದಂತೆ.. ಎನ್ನುತ್ತಾ ಆತ ಗಂಭೀರ ವಿಚಾರಗಳತ್ತಲೂ ಹೊರಳುತ್ತಾನೆ.
ನಾವು ಕ್ರಿಕೆಟ್ ಪಂದ್ಯಗಳ ನಡುವೆಯೂ ಕೆಲವು ವಿರಾಮಗಳನ್ನು ನೀಡುತ್ತಾ.. ಇತರ ಭರಪೂರ ಮಸಾಲೆಗಳನ್ನು ಸೇರಿಸುತ್ತಾ.. ಮೂರು ಗಂಟೆಯ ಕ್ರಿಕೆಟ್ ಸಿನಿಮಾದಂತೆ ಮಾಡಿಕೊಂಡಿದ್ದೇವೆ.. ಎಂದು ನವಿರಾಗಿ ಚುಟುಕು ಕ್ರಿಕೆಟ್ ಪಂದ್ಯಗಳತ್ತ ಟೀಕೆಗಳನ್ನೆಸೆದಿದ್ದಾನೆ.
"ನನಗೆ ತಿಳಿದಿರುವ ವಿಷಯಗಳನ್ನು ಬಹಿರಂಗಪಡಿಸಬೇಕೆಂದರೆ ಅದಕ್ಕೆ ಕೆಲವು ಪುಸ್ತಕಗಳನ್ನೇ ಬರೆಯಬೇಕಾದೀತು. ಆದರೆ ಹಾಗೆ ಮಾಡಿದಲ್ಲಿ ತಾನು 'ಇತಿಹಾಸ'ವಾಗಿ ಹೋಗಬಹುದೆಂದು ಅರಿತಿದ್ದೇನೆ.. ಈಗಲೂ ಹೇಳಬೇಕಾದ ಹಲವು ವಿಚಾರಗಳು ನನ್ನಲ್ಲಿವೆ..." ಎಂದು ಕ್ರಿಕೆಟ್ ಜಗತ್ತಿನ ಒಳಹೂರಣಗಳತ್ತ ಆತ ಕುತೂಹಲ ವಾಕ್ಯಗಳನ್ನು ಬಿತ್ತರಿಸಿದ್ದಾನೆ.
ಇದು ನಕಲಿ ಐಪಿಎಲ್ ಆಟಗಾರನ ಕಥೆ.. ಮತ್ತೆ ಕಾಣುತ್ತೇನೆ.. ಕಭಿ ಅಲ್ವಿದಾ ನಾ ಕೆಹ್ನಾ ಎಂದು ಹೇಳಿಕೊಂಡು ವೀಡಿಯೋವನ್ನು ಅಂತ್ಯಗೊಳಿಸಿದ್ದಾನೆ.
ತನ್ನ ಹೆಸರನ್ನು ಬಹಿರಂಗಪಡಿಸಬೇಕೋ ಅಥವಾ ಬೇಡವೋ ಎಂಬುದಕ್ಕೆ ಈ ಬ್ಲಾಗರ್ ಕಳೆದ ವಾರ ಓದುಗರಿಂದ ಪ್ರತಿಕ್ರಿಯೆ ಬಯಸಿದ್ದ. ಭರ್ಜರಿ ಪ್ರತಿಕ್ರಿಯೆಗಳಲ್ಲಿ ಹೆಸರನ್ನು ಹೇಳಿಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಆದರೆ ಕೊನೆಗೂ ಆತ ಅನಾಮಿಕನಾಗಿಯೇ ಉಳಿದುಕೊಂಡಿದ್ದಾನೆ.
ತನಗೆ ಅಂತಿಮ ಹನ್ನೊಂದರಲ್ಲಿ ಕೊಲ್ಕತ್ತಾ ತಂಡ ಅವಕಾಶವನ್ನು ನೀಡಲೇ ಇಲ್ಲ ಎಂದಿರುವ ಬ್ಲಾಗಿಗನ ಬಗ್ಗೆ ಕೊಲ್ಕತ್ತಾ ಆಡಳಿತ ಮಂಡಳಿಯು ತನ್ನ ವೆಬ್‌ಸೈಟಿನಲ್ಲಿ 'ವಿಷಪೂರಿತ ಬರಹಕಾರ' ಎಂದು ಉದಾಹರಿಸಿರುವುದು ಕೂಡ ಸ್ಮರಣಾರ್ಹವಾಗಿದೆ.
|