ಅದ್ಭುತ ಗೆಲುವಿನ ಮೂಲಕ ಸೆಮಿಫೈನಲ್ ಪ್ರವೇಶಿಸಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ಅನಿಲ್ ಕುಂಬ್ಳೆ ಹರ್ಷತುಂದಿಲರಾಗಿದ್ದು, ಇಲ್ಲಿಂದ ಮುಂದಿನ ಪಂದ್ಯವನ್ನು ಸಮಗ್ರ ಪ್ರದರ್ಶನದ ಮೂಲಕ ಮೇಲುಗೈ ಸಾಧಿಸುವ ಯಾರೇ ಆದರೂ ಗೆದ್ದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ 12 ರನ್‌ಗಳ ಅಂತರದಿಂದ ಗೆಲುವು ಸಾಧಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದು, ಶನಿವಾರ ಸೆಮಿಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುಖಾಮುಖಿಯಾಗಲಿದೆ.
ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ಈ ಪಂದ್ಯವನ್ನು ಕಳೆದುಕೊಂಡರೂ ನಾಲ್ಕನೇ ತಂಡವಾಗಿ ಸೆಮಿಫೈನಲ್ ಸ್ಥಾನ ಗಿಟ್ಟಿಸಿಕೊಂಡಿದೆ. ಅವರು ಶುಕ್ರವಾರ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ದ ಫೈನಲ್ ಸ್ಥಾನಕ್ಕಾಗಿ ಹೋರಾಟ ನಡೆಸಲಿದ್ದಾರೆ.
"ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ನಮ್ಮದು ಅದ್ಭುತ ಸಾಧನೆ" ಎಂದು ಕುಂಬ್ಳೆ ಸೆಮಿಫೈನಲ್ ತಲುಪಿದ್ದನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರು.
ಈ ವರ್ಷದ ಆರಂಭವೇ ನಮಗೆ ಉತ್ತಮವಾಗಿತ್ತು. ನಂತರ ಸತತ ನಾಲ್ಕು ಸೋಲುಗಳನ್ನು ಕಂಡರೂ ನಾವು ಹಳಿಗೆ ಮರಳಿದ್ದೇವೆ. ಹಾಗಾಗಿ ಸೆಮಿಗೆ ಹೋಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಪಂದ್ಯದ ನಂತರ ಮಾತನಾಡುತ್ತಾ ತಿಳಿಸಿದ್ದಾರೆ.
ಇಲ್ಲಿಂದ ಮುಂದೆ ಶ್ರೇಷ್ಠ ಪ್ರದರ್ಶನ ನೀಡುವ ಯಾವ ತಂಡವಾದರೂ ಪಂದ್ಯವನ್ನು ಗೆದ್ದುಕೊಳ್ಳಬಹುದು. ಹಾಗಾಗಿ ನಾವು ಕಳೆದ ನಾಲ್ಕು ಪಂದ್ಯಗಳನ್ನಾಡಿದ ರೀತಿಯನ್ನೇ ಮುಂದುವರಿಸಲಿದ್ದೇವೆ. ಆತ್ಮವಿಶ್ವಾಸವನ್ನು ಕ್ರೋಢೀಕರಿಸಿಕೊಂಡು ನಾವು ಸೆಮಿಫೈನಲ್ ಆಡಲಿದ್ದೇವೆ ಎಂದು ಕುಂಬ್ಳೆ ಫೈನಲ್ ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ ಮನೀಷ್ ಪಾಂಡೆಯನ್ನು ನಾಯಕ ಇದೇ ಸಂದರ್ಭದಲ್ಲಿ ಗುಣಗಾನ ಮಾಡಿದ್ದಾರೆ. ಪಾಂಡೆ ಕೇವ 73 ಎಸೆತಗಳಿಂದ ಅಜೇಯ 114 ರನ್ ಚಚ್ಚಿದ್ದರು.
"ಅಮೋಘ ಶತಕವದು. ಮನೀಷ್ ಹಲವು ಅವಕಾಶಗಳನ್ನು ಪಡೆದುಕೊಂಡಿದ್ದರೂ ಬ್ಯಾಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ನಿಜಕ್ಕೂ ಶ್ರೇಷ್ಠ ಆಟವಿದು" ಎಂದಿದ್ದಾರೆ.
ಈ ಹಿಂದಿನ ಪಂದ್ಯಗಳಲ್ಲಿ ಪಾಂಡೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. ಆದರೆ ಈ ಪಂದ್ಯದಲ್ಲಿ ಅವರನ್ನು ಮೇಲಿನ ಕ್ರಮಾಂಕದಲ್ಲಿ ನಾವು ಕಳುಹಿಸಿದ್ದೆವು. ಅದು ಸಂಪೂರ್ಣ ಉಪಯೋಗವಾಗಿದೆ. ಅವರಿಂದ ಅದ್ಭುತ ಪ್ರದರ್ಶನ ಹೊರ ಬಂದಿದೆ ಎಂದು ಕುಂಬ್ಳೆ ವಿವರಿಸಿದ್ದಾರೆ.
ಡೆಕ್ಕನ್ ವಿರುದ್ಧದ ಪಂದ್ಯದಲ್ಲಿ ಮನೀಷ್ ಪಾಂಡೆ ಆರಂಭಿಕ ಆಟಗಾರನಾಗಿ ಜಾಕ್ವಾಸ್ ಕ್ಯಾಲಿಸ್ ಜತೆ ಆಟಕ್ಕಿಳಿದಿದ್ದರು.
|