ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಡೆಕ್ಕನ್ ಚಾರ್ಜರ್ಸ್ ಹೈದಾರಬಾದ್ ಆರು ವಿಕೆಟ್‌ಗಳಿಂದ ಪರಾಜಯಗೊಳಿಸಿದೆ. ಈ ಮೂಲಕ ಕಳೆದ ಸಾಲಿನಲ್ಲಿ ಕೊನೆಯ ಸ್ಥಾನ ಪಡೆದ ಹೈದರಾಬಾದ್ ತಂಡ ಫೈನಲ್ ಪ್ರವೇಶಿಸಿದೆ. ಡೆಕ್ಕನ್ ತಂಡದ ನಾಯಕ ಗಿಲ್‌ಕ್ರಿಸ್ಟ್ ಅವರ ಸ್ಫೋಟಕ ಆಟದ (85ರನ್, 35ಎಸೆತ) ನೆರವಿನಿಂದ ಡೆಲ್ಲಿ ನೀಡಿದ 153 ಸವಾಲನ್ನು 17.4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಗಿಲ್ಲಿಯ ಆಯ್ಕೆ ಮೊದಲು ಸರಿಯೆನಿಸಿತು. ವೇಗಿ ರಿಯಾನ್ ಹ್ಯಾರಿಸ್ ಮೊದಲ ಓವರ್‌ಲ್ಲೇ ಗೌತಮ್ ಗಂಭೀರ್ ಹಾಗೂ ವಾರ್ನರ್ ಅವರನ್ನು ಶೂನ್ಯಕ್ಕೆ ಮರಳಿಸುವ ಮೂಲಕ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು.ಆದರೆ ನಂತರ ಕ್ರೀಸಿಗಿಳಿದ ಡೆಲ್ಲಿ ತಂಡದ ನಾಯಕ ವಿರೇಂದ್ರ ಸಹ್ವಾಗ್(39ರನ್, 31ಎಸೆತ) ಬಿರುಸಿನ ಆಟಕ್ಕಿಳಿದರು. ಇವರಿಗೆ ಉತ್ತಮ ಬೆಂಬಲ ನೀಡಿದ ತಿಲಕರತ್ನೆ ದಿಲ್‌ಶಾನ್ ಕೊನೆಯ ವರೆಗೆ ನಿಂತು 51 ಎಸೆತಗಳಲ್ಲಿ 65ರನ್ ಬಾರಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್‌ಗಳೂ ಸೇರಿದ್ದವು.ಈ ಇಬ್ಬರ ಹೊರತು ಉತ್ತಮ ಫಾರ್ಮ್‌ನಲ್ಲಿರುವ ಎಬಿ ಡಿಲಿಯರ್ಸ್ (26), ವಿಕೆಟ್ ಕೀಪರ್ ಬ್ಯಾಟ್ಸ್‌ಮಾನ್ ಕಾರ್ತಿಕ್ (9), ಭಾಟಿಯಾ (4), ಅಮಿತ್ ಮಿಶ್ರಾ (0) ಹಾಗೂ ಸಾಂಗ್ವಾನ್ (0*) ರನ್ ಗಳಿಸಿದರು. ಡೆಕ್ಕನ್ ಪರ ಉತ್ತಮ ದಾಳಿ ಸಂಘಟಿಸಿದ ವೇಗಿ ಹ್ಯಾರಿಸ್ ಅವರು 27ರನ್ ನೀಡಿ 3 ವಿಕೆಟ್ ಕಿತ್ತು ಡೆಲ್ಲಿ ಒಟಕ್ಕೆ ಕಡಿವಾಣ ಹಾಕಿದರೆ ಆರ್ ಪಿ ಸಿಂಗ್ ಎರಡು ವಿಕೆಟ್ ಕಿತ್ತರು.ರನ್ ಬೆನೆತ್ತಲಾರಂಭಿಸಿದ ಡೆಕ್ಕನ್ ತಂಡದ ಆರಂಭಿಕ ಆಟಗಾರ ನಾಯಕ ಆಡಂ ಗಿಲ್‌ಕ್ರಿಸ್ಟ್ ಅವರು ನಾನೆಸ್ ಎಸೆದ ಮೊದಲ ಓವರ್‌ನಲ್ಲಿಯೇ 21ರನ್ ಸೊರೆಗೈದರು. ಆದರೆ ನೆಹ್ರಾ ಎಸೆದ ಎರಡನೇ ಓವರ್‌ನಲ್ಲಿ ಮತ್ತೊಬ್ಬ ಆರಂಭಿಕ ಗಿಬ್ಸ್ ಶೂನ್ಯ ಸಂಪಾದಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇದು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗಿಬ್ಸ್ ಮೂರನೇ ಬಾರಿಗೆ ಶೂನ್ಯಕ್ಕೆ ಮರಳುತ್ತಿದ್ದಾರೆ. ಆದರೆ ಒಂದು ಬದಿಯಿಂದ ಮಿಂಚಿನ ಆಟ ಪ್ರದರ್ಶಿಸಿದ ಗಿಲ್ಲಿ ಮೈದಾನ ನಾಲ್ಕು ದಿಕ್ಕುಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈದರು. ಗಿಲ್‌ಕ್ರಿಸ್ಟ್ ಅವರ ಅರ್ಧಶತಕವು ಕೇವಲ 17 ಎಸೆತಗಳಲ್ಲಿ ದಾಖಲಾದವು. ಇದು ಐಪಿಎಲ್‌ನ ಇದುವರೆಗಿನ ಕ್ರಿಕೆಟ್‌ನಲ್ಲಿ ದಾಖಲಾದ ಅತೀ ವೇಗದ ಅರ್ಧಶತಕವಾಗಿದೆ. ಬ್ಯಾಟಿಂಗ್ ಆರ್ಭಟಕ್ಕೆ ಸಾಕ್ಷಿಯಾದ ಡೆಕ್ಕನ್ ನಾಯಕ 35 ಎಸೆತಗಳಲ್ಲಿ 85ರನ್ ಬಾರಿಸಿದರು. ಇವರ ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ ಐದು ಭರ್ಜರಿ ಸಿಕ್ಸರ್‌ಗಳೂ ಸೇರಿದ್ದವು. 10 ಓವರ್‌ನಲ್ಲಿ ತಂಡದ ಮೊತ್ತ ನೂರು ದಾಟಿದಾಗ ಗಿಲ್‌ಕ್ರಿಸ್ಟ್ ಅವರು ಮಿಶ್ರಾ ದಾಳಿಗೆ ಬಲಿಯಾದರು. ನಂತರ ಬಂದ ಅಜರ್ ಬಿಲಾಕಿಯ (10) ಸೈಮಂಡ್ಸ್ (24) ಬೇಗನೆ ಕಳೆದುಕೊಂಡರೂ ಆಗಲೇ ಪಂದ್ಯವು ಡೆಲ್ಲಿ ಕೈಯಿಂದ ಕಮರಿಹೋಗಿತ್ತು. ಕೊನೆಗೆ ಸುಮನ್ ಅಜೇಯ 24 ಮತ್ತು ರೋಹಿತ್ ಶರ್ಮಾ ಅಜೇಯ 5 ರನ್ ಗಳಿಸಿ ಗೆಲುವಿನ ಔಪಚಾರಿಕತ್ವವನ್ನು ಮುಗಿಸಿದರು. ಡೆಲ್ಲಿ ಪರ ಅಮಿತ್ ಮಿಶ್ರಾ 19ರನ್ ನೀಡಿ ಮೂರು ವಿಕೆಟ್ ಕಬಳಿಸಿದರೆ ಉಳಿದೆಲ್ಲಾ ಬೌಲರ್‌ಗಳೂ ದುಬಾರಿಯಾದರು. ನಾಯಕ ಸೆಹ್ವಾಗ್ ಅಂತೂ ಒಂದು ಓವರ್‌ನಲ್ಲಿ 25ರನ್ ನೀಡಿದ್ದರು.ಅದ್ಭುತ ಬ್ಯಾಟಿಂಗ್ ಪ್ರದರ್ಶನವಿತ್ತ ಡೆಕ್ಕನ್ ನಾಯಕ ಆಡಂ ಗಿಲ್‌ಕ್ರಿಸ್ಟ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇಂದು ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇಂದಿನ ವಿಜೇತ ತಂಡವನ್ನು ಹೈದರಾಬಾದ್ ಭಾನುವಾರ ನಡೆಯುವ ಫೈನಲ್ ಮುಖಾಮುಖಿಯಲ್ಲಿ ಎದುರಿಸಲಿದೆ. |