ಐಪಿಎಲ್ ಇತಿಹಾಸದಲ್ಲಿಯೇ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಮನೀಷ್ ಪಾಂಡೆಗೆ ಈಗ ಕ್ರಿಕೆಟ್ ಜೀವನ ಸೆಳೆಯುತ್ತಿದೆ. ತನ್ನ ಭವಿಷ್ಯದ ಏಕೈಕ ಗುರಿಯಾಗಿದ್ದ ಭಾರತೀಯ ಸೇನೆಗೆ ಸೇರುವ ಕನಸಿಗಿಂತ ಪಾಂಡೆಗೆ ಕ್ರಿಕೆಟ್ ಕನಸೇ ಈಗ ದೊಡ್ಡದಾಗುತ್ತಿದೆ.ಯುದ್ಧಭೂಮಿಯಲ್ಲಿ ಬುಲೆಟ್ ಸಿಡಿಸುವುದಕ್ಕಿಂತಲೂ ಮೈದಾನದಲ್ಲಿ ಶತಕ ಸಿಡಿಸುವುದೇ ನನಗೀಗ ಆಕರ್ಷಣೀಯವೆನಿಸುತ್ತಿದೆ. ಹಾಗಾಗಿ ನನ್ನ ಭವಿಷ್ಯದ ಯೋಜನೆಯನ್ನು ಸ್ವಲ್ಪ ಬದಲಾಯಿಸಿದ್ದೇನೆ. ನ್ನನ ವೃತ್ತಿ ಬದುಕಿನಲ್ಲಿ ಈಗಿನಿಂದ ನಾನು ಕ್ರಿಕೆಟ್‌ಗೆ ಆಧ್ಯತೆ ನೀಡುತ್ತೇನೆ. ಕ್ರಿಕೆಟ್ ನನ್ನ ಭವಿಷ್ಯ ರೂಪಿಸದಿದ್ದರೆ, ಎರಡನೇ ಹೆಜ್ಜೆ ಭಾರತೀಯ ಸೇನೆ ಎಂದು ಅವರು ಐಪಿಎಲ್‌ನ ಅಧಿಕೃತ ವೆಬ್‌ಸೈಟಿನಲ್ಲಿ ತನ್ನ ಕನಸಿನ ಗೋಪುರವನ್ನು ಬಿಚ್ಚಿಟ್ಟಿದ್ದಾರೆ.ಗುರುವಾರ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ 73 ಎಸೆತಗಳಿಂದ 114 ರನ್ ಸಿಡಿಸಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಮನೀಷ್ ಪಾಂಡೆ ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ಬೌಲರುಗಳ ಹಣೆಯಲ್ಲಿ ನೀರಿಳಿಸಿದ್ದರು. ಹೀಗಾಗಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಚಾಲೆಂಜರ್ಸ್ 12 ರನ್‌ಗಳ ವಿಜಯ ಸಾಧಿಸಿ ಸುಲಭವಾಗಿ ಸೆಮಿ ಪ್ರವೇಶಿಸಿತ್ತು.19 ರ ಹರೆಯ ಈ ಯುವ ಬ್ಯಾಟ್ಸ್‌ಮನ್ ಮನೀಷ್ ಹೇಳುವಂತೆ, ತುಂಬ ಒತ್ತಡವಿದ್ದ ಪಂದ್ಯದಲ್ಲೂ ಹೀಗೆ ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶನ ನೀಡಲು ನನಗೆ ಪ್ರಮುಖ ಪ್ರೇರಣೆ ತಂಡದ ನಾಯಕ ಅನಿಲ್ ಕುಂಬ್ಳೆ ಹಾಗೂ ಕೋಚ್ ರೇ ಜೆನ್ನಿಂಗ್ಸ್ ಎನ್ನುತ್ತಾರೆ.ಕುಂಬ್ಳೆ ಅವರು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದರು. ಆಟಕ್ಕೂ ಮೊದಲು ತಂಡದ ಸಭೆಯಲ್ಲಿ ಕುಂಬ್ಳೆ ನನ್ನ ಬಳಿ, ''ನಿನ್ನಲ್ಲಿ ನನಗೆ ನಂಬಿಕೆಯಿದೆ. ನಿನಗೂ ಶಕ್ತಿಯಿದೆ. ಇವತ್ತು ನೀನು ಇನ್ನಿಂಗ್ಸ್ ಆರಂಭಿಸಲೇಬೇಕು. ಚೆನ್ನಾಗಿ ಆಡು'' ಎಂದು ನನಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.ಜೆನ್ನಿಂಗ್ಸ್ ನನ್ನ ಬಳಿ ಬಂದು, ''ನಿನ್ನ ಎಂದಿನ ಸಾಂಪ್ರದಾಯಿಕ ಶೈಲಿಯಲ್ಲೇ ಆಡು. ಸೋಲು ಬಂದರೆ ಎಂಬ ಭಯ ಬೇಡ. ಆಟವನ್ನು ಎಂಜಾಯ್ ಮಾಡಿಕೊಂಡು ಆಡು. ನನಗೆ ನಿನ್ನ ಮೇಲೆ ವಿಶ್ವಾಸವಿದೆ'' ಎಂದರು. ಈ ಮಾತುಗಳು ನನಗೆ ಶತಕ ಬಾರಿಸಲು ಒತ್ತಾಸೆಯಾಗಿ ನಿಂತವು ಎಂದು ವಿವರಿಸಿದ್ದಾರೆ. |