ಟೆಸ್ಟ್ ತಂಡ ಎಂಬ ಟೀಕೆಗೆ ಗುರಿಯಾಗಿ ಹೈರಾಣಾಗಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಟೀಕೆಗಳನ್ನು ತನ್ನ ಹೆಸರಿಗೆ ಅನ್ವರ್ಥವೆಂಬಂತೆ 'ಚಾಲೆಂಜ್' ಆಗಿಯೇ ಸ್ವೀಕರಿಸಿ ಸೆಮಿಫೈನಲ್ ಮೆಟ್ಟಿಲೇರುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದೆ. ಅಷ್ಟೇ ಅಲ್ಲದೆ, ಇಂದು ಸಂಜೆ ಚೆನ್ನೈ ಸೂಪರ್‌ಕಿಂಗ್ಸ್ ಜತೆಗೆ ಫೈನಲ್ ತಲುಪಲು ಸೆಣೆಸಲಿದೆ.ಐಪಿಎಲ್ ದೃಷ್ಟಿಯಿಂದ ಇದು ಅತ್ಯಂತ ಕುತೂಹಲ ಮೂಡಿಸಿರುವ ಸ್ಪರ್ಧೆಯಾಗಿ ಹೊರಹೊಮ್ಮಿದೆ. ಚೆನ್ನೈ ತಂಡ ಹಾಗೂ ಬೆಂಗಳೂರು ತಂಡಗಳೆರಡೂ ಸೆಮಿ ಫೈನಲ್ ಏರಿದ ರೀತಿ ತದ್ವಿರುದ್ಧವಾದದ್ದು. ಮೊದಲರ್ಧದಲ್ಲಿ ಚೆನ್ನೈ ಉತ್ತಮ ಪ್ರದರ್ಶನವನ್ನೇ ನೀಡಿದ್ದರೂ, ನಂತರ ಆ ಸ್ಪರ್ಧೆ ನೀಡಲಾಗಲಿಲ್ಲ. ಆದರೆ, ಬೆಂಗಳೂರು ತಂಡ ತನ್ನ ಮೊದಲ ಸ್ಪರ್ಧೆಗಳಲ್ಲೇ ಗೋತಾ ಹೊಡೆದಿದ್ದರೂ, ನಂತರ ನಾಯಕನ ಬದಲಾವಣೆಯಿಂದ ಚೇತರಿಕೆ ಕಂಡು ಸೆಮಿ ಹಂತಕ್ಕೆ ತಲುಪಿತ್ತು.ಸಾವಧಾನಿ ಹಾಗೂ ಪ್ರೇರಣಾತ್ಮಕ ಶೈಲಿಯ ನಾಯಕತ್ವ ವಹಿಸುವ ಅನಿಲ್ ಕುಂಬ್ಳೆಯಿಂದಾಗಿ ಬೆಂಗಳೂರು ತಂಡದಲ್ಲಿ ಇದ್ದಕ್ಕಿದ್ದಂತೆ ಚೈತನ್ಯ ಕಂಡು ಬಂತು. ಹೀಗಾಗಿ, ಧೋನಿ ನಾಯಕತ್ವದ ಚೈನ್ನೈ ತಂಡವನ್ನು ಕುಂಬ್ಳೆ ನಾಯಕತ್ವದ ಬೆಂಗಳೂರು ತಂಡ ಬಗ್ಗು ಬಡಿಯರೂ ಆಶ್ಚರ್ಯವಿಲ್ಲ. ಆದರೆ, ಈ ಕನಸು ನನಸಾಗಬೇಕಿದ್ದರೆ, ಚೆನ್ನೈ ತಂಡದ ತ್ರಿಮೂರ್ತಿಗಳಾಗಿ ಹೊರಹೊಮ್ಮಿರುವ ನಾಯಕ ಧೋನಿ, ಮ್ಯಾಥ್ಯೂ ಹೈಡನ್, ಸುರೇಶ್ ರೈನಾ ಅವರನ್ನು ಕಟ್ಟಿಹಾಕಲು ಬೆಂಗಳೂರು ಬೌಲರ್‌ಗಳು ಮಾತ್ರ ಅಸಾಧಾರಣ ಪ್ರದರ್ಶನ ತೋರಲೇಬೇಕಾದ ಒತ್ತಡ ಇದೆ. ಹೈಡನ್ ಐಪಿಎಲ್ ಸರಣಿಯುದ್ದಕ್ಕೂ ತನ್ನ ಶಕ್ತಿಯುತ ಬ್ಯಾಟಿಂಗ್ ಪ್ರದರ್ಶನ ತೋರಿಸಿದ್ದರಷ್ಟೇ ಅಲ್ಲದೆ, ಎದುರಾಳಿ ತಂಡದ ಬೌಲರ್‌ಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಆಲ್‌ರೌಂಡರ್ ಸುರೇಶ್ ರೈನಾ ಕೂಡಾ ಚೈನ್ನೈ ತಂಡ ಪ್ರಮುಖ ಆಸ್ತಿಯೇ ಆಗಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸರಣಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇನ್ನು ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಮುಟ್ಟಿದ್ದೆಲ್ಲಾ ಚಿನ್ನವಾಗುವ ಧೋನಿಯನ್ನು ಮಟ್ಟ ಹಾಕುವುದು ಸುಲಭದ ತುತ್ತೇನೂ ಅಲ್ಲ.ಆದರೂ, ಬೆಂಗಳೂರು ರಾಯಲ್ ಪಡೆಯೂ ಚಿಗಿತುಕೊಂಡು ಚೆನ್ನೈ ಪಡೆಯನ್ನು ಮೂಕವಿಸ್ಮಿತರನ್ನಾಗಿ ಮಾಡುವ ಪ್ರದರ್ಶನ ತೋರಿರುವುದೂ ಅಷ್ಟೇ ಸತ್ಯ. ಮುತ್ತಯ್ಯ ಮುರಳೀಧರನ್ ಬೆಂಗಳೂರು ಪರ ಉತ್ತಮ ಆಫ್ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದು, ಭವಿಷ್ಯದ ಆಟಗಳಲ್ಲೂ ಉತ್ತಮ ಪ್ರದರ್ಶನ ತೋರುವ ಆಶಾವಾದ ಚಿಗುರಿಸಿದ್ದಾರೆ.ಇಷ್ಟೇ ಅಲ್ಲ. ರೋಸ್ ಟೇಲರ್ ಕೂಡಾ ಬೆಂಗಳೂರು ರಾಯಲ್ ಪಡೆಯ ಪುನರ್‌ವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡೆಕ್ಕನ್ ಚಾರ್ಜರ್ಸ್ ಎದುರು ಶತಕ ಬಾರಿಸುವ ಮೂಲಕ ಪಂದ್ಯದ ಗೆಲುವಿನ ರೂವಾರಿಯಾಗಿದ್ದ ಮನೀಷ್ ಪಾಂಡೆಯೂ ಭರವಸೆ ಮೂಡಿಸಿದ್ದಾರೆ. ಜಾಕಸ್ ಕ್ಯಾಲಿಸ್ ಕೂಡಾ ಇತ್ತೀಚೆಗೆ ಉತ್ತಮ ಪ್ರದರ್ಶನ ತೋರಿದ್ದರು. ಅವರು ತಮ್ಮ ಮೊಣಕಾಲಿನ ಗಾಯದಿಂದ ಗುಣವಾದರೆ ಅವರ ಹೆಗಲಿಗೂ ಜವಾಬ್ದಾರಿ ಬೀಳಲಿದೆ.ಬೆಂಗಳೂರು ತಂಡ ಚೆನ್ನೈಯನ್ನು ಮಣಿಸಬೇಕಾದರೆ, ಚೆನ್ನೈ ತಂಡದ ಬ್ಯಾಟ್ಸ್‌ಮನ್‌ಗಳನ್ನು ತನ್ನ ಬೌಲರುಗಳ ಮೂಲಕ ಕಟ್ಟಿ ಹಾಕಲೇಬೇಕು. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮೊತ್ತ ಪೇರಿಸಲು ಚೆನ್ನೈಯನ್ನು ಬೆಂಗಳೂರು ದಂಡಿಸಿದರೆ, ಬೆಂಗಳೂರು ಫೈನಲ್ ಏರಬಹುದು. ಕುಂಬ್ಳೆ ತನ್ನ ಕ್ರಿಕೆಟ್ ಜೀವನದ ಅನುಭವವೆಲ್ಲವನ್ನು ಧಾರೆಯೆರೆದು, ಕೌಶಲ್ಯದಿಂದ ತಂಡವನ್ನು ಮುನ್ನಡೆಸಿದರೆ, ಗೆಲುವು ಕಷ್ಟವೇನಲ್ಲ. |