ಎರಡನೇ ಐಪಿಎಲ್‌ನ ಭಾರೀ ಯಶಸ್ಸಿನಿಂದ ಸಂತಸಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಅಧ್ಯಕ್ಷ ಲಲಿತ್ ಮೋದಿ, 2011ರ ವೇಳೆಗೆ ಎಂಟು ತಂಡಗಳಿರುವ ಐಪಿಎಲ್ ಟೂರ್ನಿಯನ್ನು ಹತ್ತು ತಂಡಗಳಿಗೆ ಏರಿಸಲಾಗುತ್ತದೆ ಎಂದು ಹೇಳಿದ್ದಾರೆ.ಮುಂದಿನ ವರ್ಷದಿಂದ ಐಪಿಎಲ್ ಮತ್ತೆ ಭಾರತಕ್ಕೇ ಮರಳುವುದು ಖಂಡಿತ. ಎರಡನೇ ಐಪಿಎಲ್ ಪಂದ್ಯಗಳನ್ನು ನಾವು ಅನಿವಾರ್ಯ ಕಾರಣಗಳಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆಸಿದರೂ, ನಮ್ಮ ಮನಸ್ಸು ಭಾರತದಲ್ಲೇ ಇತ್ತು. ಭಾರತವನ್ನು ಮಿಸ್ ಮಾಡಿಕೊಂಡಂತೆ ಅನಿಸುತ್ತಿತ್ತು. ಮುಂದೆ ಐಪಿಎಲ್ ಭಾರತದಲ್ಲೇ ನಡೆಯಲಿದೆ ಎಂದು ಮೋದಿ ವಿವರಿಸಿದರು.ಭಾರತೀಯ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಮೋದಿ, ಐಪಿಎಲ್‌ನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದದು ಒಂದು ಉತ್ತಮ ಅನುಭವ. ಇಡೀ ಐಪಿಎಲ್ ಟೂರ್ನಿಯುದ್ದಕ್ಕೂ ನಾವು ಅತ್ಯಂತ ಒಳ್ಳೆಯ ಕ್ಷಣಗಳನ್ನು ಅನುಭವಿಸಿದೆವು. ಇದು ಜೀವಮಾನದ ಮರೆಯಲಾರದ ಘಳಿಗೆಯಾಗಿತ್ತು ಎಂದರು.ಅಲ್ಲದೆ, ತುಂಬ ಕಡಿಮೆ ಅವಧಿಯಲ್ಲಿ ತಯಾರಿ ನಡೆಸಿ ಪಂದ್ಯಗಳನ್ನು ಭಾರೀ ಯಶಸ್ಸಿನಿಂದ ಹಾಗೂ ಅಷ್ಟೇ ಶಾಂತರೀತಿಯಿಂದ ಮುಗಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ. ಅಷ್ಟೇ ಅಲ್ಲ. ಈ ಬಾರಿ ಹೊರದೇಶದಲ್ಲಿ ಐಪಿಎಲ್ ನಡೆಸುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಭಾರತ ಕ್ರಿಕೆಟ್‌ಗೆ ಹಾಗೂ ಐಪಿಎಲ್‌ಗೆ ಅಪಾರ ಅಭಿಮಾನಿ ಸಂಖ್ಯಾಬಲ ವೃದ್ಧಿಯಾಗಿದೆ ಎಂದು ಮೋದಿ ವಿವರಿಸಿದರು. |