ಭಾರತೀಯ ಮೂಲದ ಅಮೆರಿಕದ ರಾಜ್ ಭಾವಾಸಾರ್ ಬೀಜಿಂಗ್ ಒಲಿಂಪಿಕ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗಳಿಸುವ ಮೂಲಕ,ಭಾರತದಲ್ಲಿ ನೆಲೆಸಿರುವ ಜಿಮ್ನಾಸ್ಟ್ ಭಾನುಭಾಯ್ ಯಾಜ್ಞಿಕ್ ತಮ್ಮ ಮೊಮ್ಮಗನ ಗುಣಗಾನದೊಂದಿಗೆ ಸಂಭ್ರಮವನ್ನು ಆಚರಿಸುತ್ತಿದ್ದಾರೆ.
ಆದರೆ ಯುಎಸ್‌ಎ ಪರ ಜಯ ಸಾಧಿಸಿರುವ ಭಾರತೀಯ ಸಂಜಾತ ರಾಜ್ ಬಗ್ಗೆ ಜನರಿಗೆ ಗೊತ್ತಿದೆಯೋ, ಇಲ್ಲವೋ ಅಂತೂ ಮೊಮ್ಮಗನ ಗೆಲುವು ಅಜ್ಜನಿಗೆ ಹೆಮ್ಮೆ ತಂದಿದೆ.
ರಾಜ್ ಭಾವಾಸಾರ್ ಜನಿಸಿದ್ದು ಅಮೆರಿಕದಲ್ಲಿ, ಆದರೆ ಅಜ್ಜನಿಗೆ ಇದರಿಂದ ಯಾವುದೇ ಹೆಚ್ಚಿನ ವ್ಯತ್ಯಾವಿಲ್ಲ,ಯಾಕೆಂದರೆ ತನ್ನ ಮೊಮ್ಮಗ ಗುಜರಾತಿ ಮೂಲದವನು ಎಂಬ ಅಭಿಮಾನ ಅವರ ಮನದಾಳದಲ್ಲಿದೆ.
ಆತನ ಸಾಧನೆಗೆ ನಾವು ತುಂಬಾ ಹರ್ಷಿತರಾಗಿದ್ದೇವೆ,ನಿಜಕ್ಕೂ ರಾಜ್ಯ ಮತ್ತು ದೇಶ ಹೆಮ್ಮೆ ಪಡಬೇಕಾದ ವಿಷಯ ಎಂದು ಯಾಜ್ಞಿಕ್ ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.ಅಲ್ಲದೇ ರಾಜ್ ತಂದೆ ಜಿತೇಂದರ್ ಕೂಡ ಕ್ರೀಡೆಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದವರು, ಆತ ಕೂಡ 1978ರಲ್ಲಿ ಬಿಇ (ಮೆಕ್ಯಾನಿಕಲ್)ವಿದ್ಯಾಭ್ಯಾಸ ಪೂರೈಸಿಕೊಂಡೇ ಅಮೆರಿಕಕ್ಕೆ ತೆರಳಿದವರು.
ಜಿತೇಂದರ್ ಯಾವತ್ತೂ ತನ್ನ ಮಗ ರಾಜ್‌ನ ಕ್ರೀಡಾ ಆಸಕ್ತಿಯನ್ನು ಪ್ರೋತ್ಸಾಹಿಸಿದವನೇ, ಆ ನಿಟ್ಟಿನಲ್ಲಿ ಆತನ ಮಗ ಒಲಿಂಪಿಕ್ ಗೇಮ್ಸ್‌ನಲ್ಲಿ ಪ್ರಥಮ ಪದಕ ಪಡೆದ ಮೊದಲ ಗುಜರಾತಿಯಾಗಿದ್ದಾನೆ ಎಂಬ ಅಭಿಮಾನದ ನುಡಿ ಅಜ್ಜ ಯಾಜ್ಞಿಕರದ್ದು.
ಆದರೆ ಇಷ್ಟೆಲ್ಲಾ ಸಾಧನೆ ಮಾಡಿದರೂ ಕೂಡ ಗುಜರಾತ್ ಸರ್ಕಾರ ನಡೆದುಕೊಂಡ ರೀತಿ ತಮಗೆ ನೋವನ್ನುಂಟು ಮಾಡಿದೆ ಎಂದು ಅವರು ಹೇಳಿದರು.ಆತ ಇಲ್ಲಿಯೇ ಇದ್ದಿದ್ದರೆ ದೇಶದ ಆಂತರಿಕ ರಾಜಕೀಯದಿಂದಾಗಿ, ಆತ ಯಾವತ್ತೂ ಇಂಡಿಯನ್ ಒಲಿಂಪಿಕ್ ತಂಡದ ಸದಸ್ಯನಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ನೊಂದು ನುಡಿದಿದ್ದಾರೆ.
ಆದರೂ 28ರ ಹರೆಯದ ರಾಜ್ ಭಾವಾಸಾರ್ ಆರು ಮಂದಿ ಅಮೆರಿಕದ ತಂಡದಲ್ಲಿ, ತನ್ನ ಸಾಧನೆಗಾಗಿ ಬೀಜಿಂಗ್ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದ ಹೆಮ್ಮೆ ಮಾತ್ರ ಭಾರತೀಯನದ್ದಾಗಿದೆ.
|