ವಾಡಾ (ವರ್ಲ್ಡ್ ಆಂಟಿ ಡೋಪಿಂಗ್ ಏಜೆನ್ಸಿ) ದ ನಿಷೇಧಿತ ಪಟ್ಟಿಯಲ್ಲಿ ಸೇರಿದ್ದ ಕೂದಲುದುರುವಿಕೆ ತಡೆ ಔಷಧಿಯನ್ನು ನಿಷೇಧದ ಪಟ್ಟಿಯಿಂದ ಸೋಮವಾರ ತೆಗೆದು ಹಾಕಲಾಗಿದೆ.
ಈ ಔಷಧಿಯ ಸೇವನೆಯು ಇತರ ನಿಷೇಧಿತ ಔಷಧ ಸೇವನೆಯ ಪತ್ತೆಯನ್ನು ಮರೆಮಾಚುತ್ತಿದ್ದ ಕಾರಣ ಈ ಹಿಂದೆ ನಿಷೇಧಕ್ಕೆ ಒಳಗಾಗಿತ್ತು.
ನಿಧಾನವಾಗಿ ಕೂದಲುದುರುವುದಕ್ಕೆ ಚಿಕಿತ್ಸೆಯಾಗಿ ಉಪಯೋಗಿಸಲಾಗುತ್ತಿದ್ದ 'ಫಿನಾಸ್ಟರೈಡ್'ನ್ನು ವಾಡಾದ 2009ನೇ ನಿಷೇಧಿತ ಪಟ್ಟಿಯಿಂದ ಹೊರಗಿಡಲಾಗಿದೆ. ವಿಜ್ಞಾನಿಗಳು ಇದೀಗ ಸುಧಾರಿತ ತಂತ್ರಜ್ಞಾನದಿಂದ ಸೋಗುಗಳನ್ನು ಹೊರಗೆಡವಬಲ್ಲರಾದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇದನ್ನು 2005ರ ವಾಡಾ ನಿಷೇಧಿತ ಪಟ್ಟಿಗೆ ಸೇರಿಸಲಾಗಿತ್ತು.
"ಇದೀಗ ಸುಧಾರಿತ ವೈಜ್ಞಾನಿಕ ರೀತಿಯಿಂದ ವಂಚನೆಯನ್ನು ಪತ್ತೆ ಹಚ್ಚಬಹುದಾಗಿದೆ. ಅದರ ಫಲವಾಗಿ ವಾಡಾ ಈ ರೀತಿಯ ಡ್ರಗ್ಸ್‌ಗಳನ್ನು ನಿಷೇಧಿತ ಪಟ್ಟಿಯಿಂದ ಹೊರಗಿಡಲಿದೆ. ಈ ಪ್ರಕ್ರಿಯೆ 2009 ಜನವರಿ 1ರಿಂದ ಆರಂಭವಾಗಲಿದೆ" ಎಂದು ವಾಡಾದ ಮೆಡಿಕಲ್ ರೀಸರ್ಚ್ ಮುಖ್ಯಸ್ಥ ಒಲಿವರ್ ರಾಬಿನ್ ತಿಳಿಸಿದ್ದಾರೆ.
ಫಿನಾಸ್ಟರೈಡ್ ಉಪಯೋಗಿಸಿದ ಕಾರಣಕ್ಕಾಗಿ 2007ರಲ್ಲಿ ಬ್ರೆಜಿಲ್ ಫುಟ್‌ಬಾಲ್ ಪಟು ರೊಮಾರಿಯೋರವರಿಗೆ 120 ದಿನಗಳ ಕಾಲ ನಿಷೇಧ ಹೇರಲಾಗಿತ್ತು. ತಲೆಕೂದಲು ಉದುರುತ್ತಿರುವುದಕ್ಕೆ ತಾನು ಆ ಡ್ರಗ್ ಉಪಯೋಗಿಸಿದ್ದೆ ಎಂದವರು ಆಗ ಸಮರ್ಥಿಸಿಕೊಂಡಿದ್ದರು.
|